ಬೆಂಗಳೂರು,ಡಿ.27- ಹೊಸ ವರ್ಷಾಚರಣೆಗೆ ದಿನ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಸಂಚಾರಿ ಪೊಲೀಸರು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ತೀವ್ರಗೊಳಿಸಿದ್ದಾರೆ.
ನಗರದ ಪ್ರಮುಖ ಜಂಕ್ಷನ್‌ಗಳು ಮತ್ತು ಸರ್ಕಲ್‌ಗಳಲ್ಲಿ ಅದರಲ್ಲೂ ವಿಶೇಷವಾಗಿ ಮೆಜೆಸ್ಟಿಕ್ ಸಂಪರ್ಕಿಸುವ ಜಂಕ್ಷನ್‌ಗಳಲ್ಲಿ ವಿಶೇಷ ತಪಾಸಣೆ ನಡೆಸಲಾಗುತ್ತಿದೆ.
ಕಳೆದ ಒಂದು ವಾರದಿಂದಲೇ ನಗರ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವುದು ಕಂಡು ಬಂದಲ್ಲಿ ವಾಹನವನ್ನು ಜಪ್ತಿ ಮಾಡುವುದರ ಜೊತೆಗೆ ದಂಡ ಸಹ ವಿಧಿಸುತ್ತಿದ್ದಾರೆ.
ನಾಗರಿಕರ ಸುರಕ್ಷತೆಯನ್ನು ಖಚಿತ ಪಡಿಸಿಕೊಳ್ಳಲು ಹಾಗೂ ಅಪಘಾತಗಳನ್ನು ತಡೆಗಟ್ಟುವ ದೃಷ್ಠಿಯಿಂದ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಹೊಸ ವರ್ಷಾಚರಣೆ ಮುಗಿಯುವವರೆಗೂ ಈ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ನಗರ ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.27 ರಿಂದ ನಿನ್ನೆಯವರೆಗೂ ನಗರದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿದ ವೇಳೆ 1,63,176 ಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆ ಮಾಡಲಾಗಿದ್ದು, ಕುಡಿದು ವಾಹನ ಚಾಲನೆ ಮಾಡುತ್ತಿದ್ದ 2304 ವಾಹನ ಸವಾರರು ಹಾಗೂ ಚಾಲಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
