ಬೆಂಗಳೂರು,ಡಿ.13-ನೈಸ್ ರಸ್ತೆಯಲ್ಲಿ ಕೆಲಸ ಮುಗಿಸಿ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಅತಿ ವೇಗವಾಗಿ ಬಂದ ಕಾರು ಗುದ್ದಿದ ಪರಿಣಾಮ ಇಬ್ಬರು ಮಹಿಳಾ ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಯಾದಗಿರಿ ಜಿಲ್ಲೆಯ ರಂಗಮ (45) ಮತ್ತು ಚೌಡಮ (50) ಮೃತಪಟ್ಟವರು. ಇವರು ಆರ್‌ಆರ್ ನಗರದ ಬಂಗಾರಪ್ಪಗುಡ್ಡದಲ್ಲಿ ವಾಸವಾಗಿದ್ದರು.ನೈಸ್ ರಸ್ತೆಯಲ್ಲಿ ನಿನ್ನೆ ರಸ್ತೆ ಬದಿ ಮಣ್ಣು ತೆಗೆಯಲು ಈ ಇಬ್ಬರು ಮಹಿಳಾ ಕೂಲಿ ಕಾರ್ಮಿಕರು ಬಂದಿದ್ದರು. ನಿನ್ನೆ ಸಂಜೆ 6 ಗಂಟೆ ಸುಮಾರಿನಲ್ಲಿ ಕೆಲಸ ಮುಗಿಸಿ ಮತ್ತೊಬ್ಬರು ಕಾರ್ಮಿಕನ ಜೊತೆ ಮನೆಗೆ ಹೋಗಲು ಹೊಸಕೆರೆ ಹಳ್ಳಿ ಟೋಲ್ ಸಮೀಪ ರಸ್ತೆ ದಾಟಲು ಮುಂದಾಗಿದ್ದಾರೆ.
ಇವರ ಜೊತೆಯಲ್ಲಿದ್ದ ಕಾರ್ಮಿಕ ಮೊದಲು ರಸ್ತೆ ದಾಟಿದ್ದಾರೆ. ಇವರ ಹಿಂದೆ ಈ ಇಬ್ಬರು ಮಹಿಳೆಯರು ರಸ್ತೆ ದಾಟುತ್ತಿದ್ದಾಗ ಅತಿ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಮೇಲಕ್ಕೆ ಹಾರಿ ಬಿದ್ದು ದಾರುಣವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತವೆಸಗಿದ ಕಾರು ಚಾಲಕ ಕಾರನ್ನು ನಿಲ್ಲಿಸದೇ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಅಪಘಾತದಿಂದಾಗಿ ನೈಸ್ ರಸ್ತೆಯಲ್ಲಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಯಿತು. ಸುದ್ದಿ ತಿಳಿದು ಕೆಂಗೇರಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಇಬ್ಬರು ಮಹಿಳೆಯರ ಮೃತದೇಹಗಳನ್ನು ಆರ್‌ಆರ್ ಆಸ್ಪತ್ರೆಗೆ ರವಾನಿಸಿ ನಂತರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಬಗ್ಗೆ ಕೆಂಗೇರಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನೈಸ್ ರಸ್ತೆಯಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಅಪಘಾತವೆಸಗಿದ ಕಾರನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಚಾಲಕ ಪರಾರಿಯಾಗಿದ್ದು, ಆತನ ಪತ್ತೆಕಾರ್ಯ ಮುಂದುವರೆದಿದೆ.
ಮರಣೋತ್ತರ ಪರೀಕ್ಷೆ ನಂತರ ಇಬ್ಬರು ಮಹಿಳಾ ಕಾರ್ಮಿಕರ ಮೃತದೇಹಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
