ಬೆಂಗಳೂರು,ಜ.5- ಚಿತ್ರಮಂದಿರವೊಂದರ ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮರಾ ಇಟ್ಟು ವಿಕೃತಿ ಮರೆದಿದ್ದ ಅಪ್ರಾಪ್ತ ನೇಪಾಳಿ ಯುವಕನನ್ನು ಮಡಿವಾಳ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಡಿವಾಳದ ಬಿಪಿ ರಸ್ತೆಯಲ್ಲಿರುವ ಸಂಧ್ಯಾ ಚಿತ್ರಮಂದಿರದಲ್ಲಿ ನೇಪಾಳಿ ಮೂಲದ ವ್ಯಕ್ತಿ ಹೌಸ್‌ಕೀಪಿಂಗ್ ಕೆಲಸ ಮಾಡಿಕೊಂಡಿದ್ದು ಇವರ ಮನೆಗೆ ಅವರ ಅಣ್ಣನ ಮಗ (14 ವರ್ಷ) ಬಂದಿದ್ದಾನೆ.
ಹೌಸ್‌ಕೀಪಿಂಗ್ ಕೆಲಸಕ್ಕೆ ಹೋಗುವಾಗ ಅಣ್ಣನ ಮಗನನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾಗ ಆತ ಚಿತ್ರಮಂದಿರದ ಮಹಿಳಾ ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿದ್ದಾನೆ . ನಿನ್ನೆ ಮಹಿಳೆಯೊಬ್ಬರು ಶೌಚಾಲಯಕ್ಕೆ ತೆರಳಿದ್ದ ವೇಳೆ ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಇದರಿಂದ ಆಘಾತಕ್ಕೊಳಗಾಗಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಚಿತ್ರಮಂದಿರ ಸಿಬ್ಬಂದಿ ಕೂಡಲೇ ಹೌಸ್‌ಕೀಪರ್‌ಗಳನ್ನು ವಿಚಾರಿಸಿದ್ದು, ಮಹಿಳೆಯರೇ ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
