ಬೆಂಗಳೂರು,ಜ. 13- ವಿಜಯನಗರ ಆರ್‌ಪಿಸಿ ಲೇಔಟ್‌ನಲ್ಲಿ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಇಂದಿಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ರೈಲ್ವೇ ಸಮಾನಾಂತರ ರಸ್ತೆ ವೆಸ್ಟ್ ಆಫ್ ಕಾರ್ಡ್ ರಸ್ತೆಯಿಂದ 5ನೆ ಮುಖ್ಯ ರಸ್ತೆ ವರೆಗೆ 1.4 ಕಿ.ಮೀ ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ 645 ಮೀ. ರಸ್ತೆಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ ಎಂದರು.
ಬಾಕಿ ಕಾಮಗಾರಿಗೆ ವೇಗ ನೀಡಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ವೈಟ್ ಟಾಪಿಂಗ್ ಕಾಮಗಾರಿ ನಡೆಯುವ ಕಡೆ ಮಳೆ ನೀರು ಹಿಂಗುವ ವ್ಯವಸ್ಥೆ ಕಲ್ಪಿಸಬೇಕು. ರಸ್ತೆ ಬದಿ ಚರಂಡಿಗಳು ಸರಿಯಾಗಿ ಮಾಡಿ ಪಾದಚಾರಿ ಮಾರ್ಗಗಳನ್ನು ನಿಯಮಾನುಸಾರ ನಿರ್ಮಾಣ ಮಾಡಬೇಕು. ಗುಣಮಟ್ಟವನ್ನು ಕಾಪಾಡಿಕೊಂಡು ವೈಟ್ ಟಾಪಿಂಗ್ ಕಾಮಗಾರಿಯನ್ನು ನಡೆಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆರೆ ಕೋಡಿ ರಸ್ತೆ ಅಗಲೀಕರಣ ಮಾಡಿ:ಹೊಸಕೆರೆ ಹಳ್ಳಿ ಬಳಿಯ ಕೆರೆ ಕೋಡಿ ರಸ್ತೆ ಅಗಲೀಕರಣ ಮಾಡಬೇಕಿದ್ದು, ಮುಖ್ಯ ರಸ್ತೆಯಿಂದ ಕೆರೆ ಕೋಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಕಡೆ ಕೆಲ ಸ್ವತ್ತುಗಳು ಹಾಗೂ ನೈಸ್ ಸ್ವತ್ತನ್ನು ಹಸ್ತಾಂತರ ಮಾಡಿಕೊಂಡು ಅಗಲೀಕರಣ ಮಾಡಬೇಕು. ಜೊತೆಗೆ ಪಿಇಎಸ್ ಮೈದಾನಕ್ಕೆ ಟಿಡಿಆರ್ ನೀಡಿ ಜಾಗವನ್ನು ಹಸ್ತಾಂತರ ಮಾಡಿಕೊಂಡು, ರಸ್ತೆ ಅಗಲೀಕರಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆರೆ ಕೋಡಿ ರಸ್ತೆಯಿಂದ ಆರ್.ಆರ್ ನಗರ ಆರ್ಚ್ ಹಾಗೂ ನಾಯಂಡಹಳ್ಳಿ ವೃತ್ತದಿಂದ ವಿ ಲೆಗಸಿ ರಸ್ತೆಯವರೆಗೆ ಬಫರ್ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಿ ಕೆಲಸ ಪ್ರಾರಂಭಿಸಬೇಕು. ಅಲ್ಲದೆ ಇಲ್ಲಿನ ಪ್ರದೇಶದ ಕ್ರಾಸ್ ರಸ್ತೆಗಳ ನಿರ್ಮಾಣಕ್ಕಾಗಿ ಯೋಜನೆ ರೂಪಿಸಿ ರಸ್ತೆ ನಿರ್ಮಾಣ ಮಾಡಲು ಕ್ರಮವಹಿಸಬೇಕೆಂದು ಸೂಚಿಸಿದರು. ಜವರೇಗೌಡನ ದೊಡ್ಡಿ ರಸ್ತೆ ಕೂಡಾ ಅಗಲೀಕರಣ ಆಗಬೇಕಿದ್ದು, ಆ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
