ಬೆಂಗಳೂರು, ಡಿ.21- ಕಷ್ಟದಲ್ಲಿ ಮಹಿಳೆಗೆ ಸಹಾಯ ಮಾಡಿ ಕೊನೆಗೆ ಮಂಚಕ್ಕೆ ಕರೆದ ಆನ್‌ಲೈನ್ ಗೆಳೆಯನ ವಿರುದ್ಧ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಮದುವೆಯಾಗಿ ಮಕ್ಕಳಿರುವ 38 ವರ್ಷದ ಗೃಹಿಣಿಯೊಬ್ಬರಿಗೆ ಸೋಷಿಯಲ್ ಮೀಡಿಯಾದಲ್ಲಿ ಪಾರಿತೋಷ್ ಯಾದವ್ ಎಂಬಾತ ಪರಿಚಯವಾಗಿ ಇಬ್ಬರ ಮಧ್ಯೆ ಸ್ನೇಹ ಉಂಟಾಗಿದೆ.
ಈ ನಡುವೆ ಗ್ಯಾಸ್ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಸ್ಫೋಟಗೊಂಡ ಪರಿಣಾಮ ಸಂತ್ರಸ್ತ ಗೃಹಿಣಿಯ ಮಗಳಿಗೆ ಗಂಭೀರ ಗಾಯಗಳಾಗಿದ್ದವು. ಚಿಕಿತ್ಸೆಗಾಗಿ ಗೃಹಿಣಿ ಆತನಿಂದ 30 ಸಾವಿರ ರೂ. ಸಾಲ ಪಡೆದಳು. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಮಹಿಳೆಗೆ ದೈಹಿಕವಾಗಿ ಸಹಕರಿಸುವಂತೆ ಕಿರುಕುಳ ನೀಡಿದ್ದಾನೆ.
ನನಗೆ ಸಹಕರಿಸದಿದ್ದರೆ ನಿನ್ನ ನಂಬರ್‌ಅನ್ನು ವೇಶ್ಯಾವಾಟಿಕೆ ನಡೆಸುವವರಿಗೆ ನೀಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಜತೆಗೆ ಅಸಭ್ಯ ಫೋಟೋಗಳ ವಿಡಿಯೋವನ್ನು ಗೃಹಿಣಿಗೆ ಕಳುಹಿಸಿ ಮಾನಸಿಕ ಹಿಂಸೆ ನೀಡಿದ್ದಾನೆ.
ಈ ವಿಷಯ ಗಂಡನಿಗೂ ಸಹ ಗೊತ್ತಾಗಿ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿ ಮನನೊಂದು ಪೀಣ್ಯದಲ್ಲಿರುವ ಸ್ನೇಹಿತೆ ಮನೆಗೆ ಹೋಗಿ ಗೃಹಿಣಿ ಆತಹತ್ಯೆಗೆ ಪ್ರಯತ್ನಿಸಿದ್ದಾಳೆ. ತಕ್ಷಣ ನೋಡಿದ ಆಕೆಯ ಸ್ನೇಹಿತೆ ಕಾಪಾಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾಳೆ.
ನಂತರ ಗೃಹಿಣಿ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ತನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿರುವನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾಳೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
