ಬೆಂಗಳೂರು,ಡಿ.20- ಜೀಪ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಜೆಬಿನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಜೆಬಿನಗರದ ಆನಂದಪುರ ನಿವಾಸಿ ಜಯಪಾಲ್ (60) ಮೃತಪಟ್ಟ ಪಾದಚಾರಿ.ಮಹಿಂದ್ರ ಥಾರ್ ಜೀಪು ವಾಹನವನ್ನು ಆಂಜಲ್ ನರೇಂದ್ರನ್ (24) ಎಂಬ ಮಹಿಳೆ ರಾತ್ರಿ 10.45 ರ ಸುಮಾರಿನಲ್ಲಿ ಐಎಸ್‌ಆರ್‌ಓ ಜಂಕ್ಷನ್ ಕಡೆಯಿಂದ ಹೆಚ್‌ಎಎಲ್ ಕಡೆಗೆ ಹೋಗುತ್ತಿದ್ದರು.
ಹಳೆ ಏರ್‌ಪೋರ್ಟ್ ರಸ್ತೆಯ ಮುರುಗೇಶ್ ಪಾಳ್ಯದ ರಾಜೇಶ್ವರಿ ಚಿತ್ರ ಮಂದಿರ ಬಸ್ ನಿಲ್ದಾಣದ ಬಳಿ ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಈ ಮಹಿಳೆ ರಸ್ತೆ ದಾಟುತ್ತಿದ್ದ ಜಯಪಾಲ್ ಎಂಬ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಗಂಭೀರ ಗಾಯಗೊಂಡರು. ತಕ್ಷಣ ಅವರನ್ನು ಇಂದಿರಾ ನಗರದ ಸರ್ ಸಿ.ವಿ ರಾಮನ್ ಜನರಲ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಜೆಬಿನಗರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಮೃತರ ಮಗ ಶಿವಕುಮಾರ್ ಎಂಬುವವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
