ಬೆಂಗಳೂರು,ಡಿ.24- ನಗರದಲ್ಲಿ ಸ್ಪಲ್ಪ ಮಟ್ಟಿಗೆ ವೀಲ್ಹಿಂಗ್ ಹುಚ್ಚಾಟ ಕಡಿಮೆಯಾಗಿದೆ ಅಂದುಕೊಳ್ಳುವಷ್ಟರಲ್ಲಿ ಯುವಕನೊಬ್ಬ ಆಟೋ ರಿಕ್ಷಾದಲ್ಲಿ ವೀಲ್ಹಿಂಗ್ ಸ್ಟಂಟ್ ಮಾಡಲು ಹೋಗಿ ಪೊಲೀಸರಿಗೆ ಕೈಗೆ ಸಿಕ್ಕಿಬಿದ್ದಿದ್ದಾನೆ.
ಅಪಾಯಕಾರಿ ರೀತಿಯಲ್ಲಿ ಆಟೋ ರಿಕ್ಷಾವನ್ನು ವೀಲ್ಹಿಂಗ್ ಮಾಡಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಆ ವಿಡಿಯೋವನ್ನು ಗಮನಿಸಿದ ಕೆ.ಆರ್.ಪುರ ಸಂಚಾರಿ ಠಾಣೆ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿ ಕೆಆರ್‌ಪುರಂ ನಿವಾಸಿ ಉದಯ್ ವಿಕ್ರಮ್(28) ಎಂಬಾತನನ್ನು ಬಂಧಿಸಿ ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ಆತನ ವಿರುದ್ಧ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಜೊತೆಗೆ ಭಾರತೀಯ ಮೋಟಾರ್ ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ವೀಲ್ಹಿಂಗ್ ಮಾಡುವವರ ವಿರುದ್ಧ ಇತ್ತೀಚೆಗೆ ನಗರ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹಾಗಾಗಿ ಕೆಲವು ದಿನಗಳಿಂದ ವೀಲ್ಹಿಂಗ್ ಮಾಡುವವರ ಸಂಖ್ಯೆ ಕಡಿಮೆಯಾಗಿತ್ತು.
ಇದೀಗ ಯುವಕನೊಬ್ಬ ಆಟೋ ರಿಕ್ಷಾ ವೀಲ್ಹಿಂಗ್ ಸ್ಟಂಟ್ ಮಾಡಿದ್ದಲ್ಲದೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರಿಂದ ಸಲೀಸಾಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
