ಬೆಂಗಳೂರು,ಫೆ.19- ಕುಂಬಳಗೋಡು ಸಮೀಪ ಪಫ್ರ್ಯೂಮ್ ಖಾಲಿ ಬಾಟಲಿಗಳನ್ನು ಸಂಗ್ರಹಿಸಿಡಲಾಗಿದ್ದ ಗೋದಾಮಿನಲ್ಲಿ ಕುಟ್ಟಿ ಹದ ಮಾಡುತ್ತಿದ್ದಾಗ ಸಂಭವಿಸಿದ ಭೀಕರ ಅವಘಡದಲ್ಲಿ ಮೂವರು ಸಜೀವ ದಹನವಾದ ಘಟನೆಗೆ ಸಂಬಂಧಿಸಿದಂತೆ ಜಾಗದ ಮಾಲೀಕನಿಗಾಗಿ ಕುಂಬಳಗೋಡು ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಮೃತರನ್ನು ಸಲೀಂ, ಮೆಹಬೂಬ್ ಪಾಷ ಹಾಗೂ ಅರ್ಬಜ್ ಎಂದು ಗುರುತಿಸಲಾಗಿದೆ. ಇವರೆಲ್ಲ ಚಿಕ್ಕಬಸ್ತಿ ನಿವಾಸಿಗಳು.
ಬೆಂಕಿ ಅನಾಹುತದಲ್ಲಿ 6 ಮಂದಿ ಗಾಯಗೊಂಡಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ಕುಂಬಳಗೋಡು ಬಳಿಯ ರಾಮಸಂದ್ರದಲ್ಲಿ ವಿಠ್ಠಲ್ ಎಂಬುವವರ ಜಾಗವನ್ನು ಸಲೀಂ ಪಡೆದು ಗೋದಾಮು ಮಾಡಿ, ಪಫ್ರ್ಯೂಮ್ ಖಾಲಿ ಬಾಟಲಿಗಳನ್ನು ಸಂಗ್ರಹಿಸಿಟ್ಟಿದ್ದರು. ಆ ಬಾಟಲಿಗಳನ್ನು ಗುಜರಿಗೆ ಹಾಕಲು ನಿನ್ನೆ ಸಂಜೆ ಕಾರ್ಮಿಕರ ಜೊತೆ ಸೇರಿ ಸಲೀಂ ಸಹ ಬಾಟಲಿಗಳನ್ನು ಕುಟ್ಟಿ ಹದ ಮಾಡುತ್ತಿದ್ದಾಗ ಏಕಾಏಕಿ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡು ಭೀಕರ ಬೆಂಕಿ ಅವಘಡ ಸಂಭವಿಸಿದೆ.
ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದರಾದರೂ ಮೂವರು ಸಜೀವ ದಹನವಾಗಿದ್ದರು. ಬೆಂಕಿಯ ತೀವ್ರತೆಯಿಂದಾಗಿ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದೆ. ಎಫ್‍ಎಸ್‍ಎಲ್ ತಜ್ಞರು ಸ್ಥಳಕ್ಕೆ ಆಗಮಿಸಿ ಹೆಚ್ಚಿನ ವಿವರಗಳನ್ನ ಕಲೆ ಹಾಕುತ್ತಿದ್ದಾರೆ.
ಲಾಂಗ್ ತೋರಿಸಿ ಫುಡ್ ಡೆಲಿವರಿ ಬಾಯ್ ದರೋಡೆ
ಬೆಂಗಳೂರು,ಫೆ.19- ಜೋಮೆಟೋ ಫುಡ್ ಡೆಲಿವರಿ ಬಾಯ್‍ಗೆ ಲಾಂಗ್ ತೋರಿಸಿ ಬೆದರಿಸಿ ಒಂದೂವರೆ ಸಾವಿರ ಹಣ ದರೋಡೆ ಮಾಡಿಕೊಂಡು ದರೋಡೆಕೋರರು ಪರಾರಿಯಾಗಿರುವ ಘಟನೆ ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಅಸ್ಸಾಂ ಮೂಲದ ಯುವಕ ಜೊಮೆಟೋದಲ್ಲಿ ಫುಡ್ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದಾನೆ. ವ್ಯಕ್ತಿಯೊಬ್ಬರು ಫುಡ್ ಆರ್ಡರ್ ಮಾಡಿದ್ದು, ಆಹಾರ ತೆಗೆದುಕೊಂಡು ಪ್ರಾವಿನೆಂಟ್ ರಸ್ತೆಯಲ್ಲಿರುವ ಆ ವ್ಯಕ್ತಿ ಮನೆ ಬಳಿ ಇಂದು ಬೆಳಗ್ಗಿನ ಜಾವ 1 ಗಂಟೆ ಸುಮಾರಿನಲ್ಲಿ ಬಂದು ಅವರಿಗೆ ದೂರವಾಣಿ ಕರೆ ಮಾಡಿ ಕಾಯುತ್ತಿದ್ದನು.
ಅದೇ ಸಮಯದಲ್ಲಿ ಬೈಕ್‍ನಲ್ಲಿ ಬಂದ ಇಬ್ಬರು ದರೋಡೆ ಕೋರರು ಫುಡ್ ಡೆಲಿವರಿ ಬಾಯ್‍ಗೆ ಲಾಂಗ್ ತೋರಿಸಿ ಬೆದರಿಸಿ ಒಂದೂವರೆ ಸಾವಿರ ಹಣ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಫುಡ್ ಡೆಲಿವರಿ ಬಾಯ್ ಪುಲಕೇಶಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದರೋಡೆಕೋರರಿಗಾಗಿ ಆ ರಸ್ತೆಯ ಸುತ್ತಮುತ್ತಲಿನ ಸಿಸಿ ಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ.
ಲೋಡ್ ಶೆಡ್ಡಿಂಗ್ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ : ಕೆ.ಜೆ.ಜಾರ್ಜ್
ವಿಳಾಸದ ನೆಪದಲ್ಲಿ ಅಡ್ಡಗಟ್ಟಿ ದರೋಡೆ
ಬೆಂಗಳೂರು,ಫೆ.19-ಸೈಕಲ್‍ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ವಿಳಾಸ ಕೇಳುವ ನೆಪದಲ್ಲಿ ಅಡ್ಡಗಟ್ಟಿದ ದರೋಡೆಕೋರರು ಸೈಕಲ್‍ನಿಂದ ಕೆಳಗೆ ತಳ್ಳಿ 100 ರೂ. ಹಣ ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ರಾತ್ರಿ 10 ಗಂಟೆ ಸುಮಾರಿನಲ್ಲಿ ಬುದ್ದ ಎಂಬುವವರು ತೂಬನಹಳ್ಳಿಯ ವಿಬ್‍ಗಯಾರ್ ಶಾಲೆ ಹಿಂಭಾಗ ಸೈಕಲ್‍ನಲ್ಲಿ ಹೋಗುತ್ತಿದ್ದರು.
ಆ ಸಂದರ್ಭದಲ್ಲಿ ಮೂರು ಬೈಕ್‍ಗಳಲ್ಲಿ ಬಂದ 6 ಮಂದಿ ದರೋಡೆಕೋರರು ಈ ವ್ಯಕ್ತಿಯ ಬಳಿ ಹೆಚ್ಚು ಹಣ ಇರಬಹುದೆಂದು ಭಾವಿಸಿ ವಿಳಾಸ ಕೇಳುವ ನೆಪದಲ್ಲಿ ಸೈಕಲ್‍ನ್ನು ಅಡ್ಡಗಟ್ಟಿ ಅವರನ್ನು ಕೆಳಗೆ ತಳ್ಳಿ ಜೇಬನ್ನು ತಡಕಾಡಿ ಕೈಗೆ ಸಿಕ್ಕಿದ ಕೇವಲ 100 ರೂ. ಹಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ವರ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.