ಬೆಂಗಳೂರು,ಅ.23-ದೀಪಾವಳಿ ಹಬ್ಬದ ಪ್ರಯುಕ್ತ ನಗರದಲ್ಲಿ ನಾವು ವಿನೂತನ ಕಾರ್ಯಕ್ರಮವನ್ನು ಹಮಿಕೊಂಡಿದ್ದು,ಹಿರಿಯ ಅಧಿಕಾರಿಗಳು ವಸತಿ ಗೃಹದಲ್ಲಿ ಸಿಬ್ಬಂದಿ ಕುಟುಂಬದವರೊಂದಿಗೆ ದೀಪಾವಳಿ ಆಚರಿಸಿರುವುದಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಸಂತಸ ವ್ಯಕ್ತಪಡಿಸಿದರು.
ನಗರದ ಸುಮಾರು 60 ಪೊಲೀಸ್ ಕ್ವಾರ್ಟಸ್‌ಗಳಿಗೆ ನಮ ಅಧಿಕಾರಿಗಳು ಅಲ್ಲಿಗೆ ತೆರಳಿ ಸಿಹಿ ಹಂಚಿ, ಸಿಬ್ಬಂದಿ ಕುಟುಂಬದವರೊಂದಿಗೆ ದೀಪಾವಳಿ ಆಚರಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು. ಇಂತಹ ಸರಣೀಯ ಭೇಟಿಯಿಂದ ಇಲಾಖೆಯ ಒಗ್ಗಟ್ಟು ಹಾಗೂ ನಮ ಅಧಿಕಾರಿಗಳು ಮತ್ತು ಸಿಬ್ಬಂದಿ ಕುಟುಂಬಗಳ ಸಮರ್ಪಿತ ಸೇವೆಗೆ ಗೌರವ ನೀಡುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.
ನಮ ಸಿಬ್ಬಂದಿ ಕುಟುಂಬದವರ ಜೊತೆ ಸಮಯ ಕಳೆಯುವುದು ವಿರಳ. ಹಾಗಾಗಿ ನಮ ಹಿರಿಯ ಅಧಿಕಾರಿಗಳ ಜೊತೆ ಹಬ್ಬ ಆಚರಿಸಿರುವುದರಿಂದ ಅವರ ಮಕ್ಕಳಿಗೆ ಹಾಗೂ ಕುಟುಂಬ ವರ್ಗಕ್ಕೆ ಸಂತೋಷವಾಗಿದೆ ಎಂದರು.
ನಗರದ ಸುಮಾರು 60 ಸ್ಥಳಗಳಲ್ಲಿ 6 ಸಾವಿರ ಪೊಲೀಸ್ ಸಿಬ್ಬಂದಿ ವಾಸಿಸುತ್ತಿರುವ ಸಿಎಆರ್ ಮತ್ತು ಸಿವಿಲ್ ಪೊಲೀಸ್ ಕುಟುಂಬದವರಿಗೆ ಸಿಹಿ ಹಂಚಿ,ಅವರೊಂದಿಗೆ ಹಸಿರು ಪಟಾಕಿ ಸಿಡಿಸಿ ಸಂಭ್ರಮದಿಂದ ದೀಪಾವಳಿ ಆಚರಿಸಲಾಗಿದೆ.
ವಸತಿಗೃಹಗಳಿಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಸಮಸ್ಯೆಗಳ ಬಗ್ಗೆ ಸಿಬ್ಬಂದಿ ಹಾಗೂ ಮಹಿಳೆಯರು ಗಮನ ಸೆಳೆದಿದ್ದಾರೆ. ಆ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಬಗೆ ಹರಿಸಲಾಗುವುದೆಂದು ಆಯುಕ್ತರು ತಿಳಿಸಿದರು.