Friday, September 19, 2025
Homeಬೆಂಗಳೂರುಮಿತಿಮೀರಿದ ವಾಹನಕಳ್ಳರ ಹಾವಳಿ : ಬೆಂಗಳೂರಿಗರೇ ನಿಮ್ಮ ಬೈಕ್, ಸ್ಕೂಟರ್ ಹುಷಾರ್..!

ಮಿತಿಮೀರಿದ ವಾಹನಕಳ್ಳರ ಹಾವಳಿ : ಬೆಂಗಳೂರಿಗರೇ ನಿಮ್ಮ ಬೈಕ್, ಸ್ಕೂಟರ್ ಹುಷಾರ್..!

Bengaluru residents, be careful of your bikes and scooters..!

-ವಿ.ರಾಮಸ್ವಾಮಿ ಕಣ್ವ
ಜೀವನಮಟ್ಟ ಸುಧಾರಿಸು ತ್ತಿದ್ದಂತೆ ಮನುಷ್ಯನ ಅವಶ್ಯಕತೆಗಳು ಬಹಳಷ್ಟು. ಈಗಿನ ಕಾಲದ ಜನರಿಗೆ ವಾಹನಗಳು ಅತ್ಯಾವಶ್ಯಕವಾಗಿವೆ. ಅಗತ್ಯವೂ ಹೌದು. ನಗರಗಳ ಒಂದು ತುದಿಯಿಂದ ಮತ್ತೊಂದು ತುದಿಗೆ ಉದ್ಯೋಗ, ಶಿಕ್ಷಣ , ವ್ಯಾಪಾರ ಮುಂತಾದ ವ್ಯವಹಾರಗಳಿಗೆ ಪ್ರತಿದಿನ ವಾಹನಗಳಲ್ಲಿ ಹೋಗಿ ಬರುತ್ತಾರೆ. ಗ್ರೇಟರ್‌ ಬೆಂಗಳೂರು ನಗರದಲ್ಲಿ ಇತರ ವಾಹನಗಳಿಗಿಂತ ಕಾರು, ಬೈಕ್‌, ಸ್ಕೂಟರ್‌ಗಳ ಸಂಖ್ಯೆ ಹೆಚ್ಚು. ಇವುಗಳ ಸಂಚಾರ ಸಹ ಅತಿ ಹೆಚ್ಚು. ಮೆಟ್ರೋ ರೈಲುಗಳು ಓಡಾಡುತ್ತಿದ್ದರೂ ಇವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿಲ್ಲ.

ಸೂಕ್ತ ಸ್ಥಳದಲ್ಲಿ ಪಾರ್ಕಿಂಗ್‌ ಮಾಡಿ:
ಬೆಂಗಳೂರು ನಗರದ ಬಹುದೊಡ್ಡ ಸಮಸ್ಯೆ ಎಂದರೆ ಪಾರ್ಕಿಂಗ್‌ (ವಾಹನ ನಿಲುಗಡೆ) . ಹೀಗಾಗಿ ಮಾಲೀಕರು ತಮ್ಮ ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ಜಾಗ ಸಿಕ್ಕ ಕಡೆಗಳಲ್ಲಿ ನಿಲ್ಲಿಸಿ ತಮ್ಮ ಕೆಲಸಗಳಿಗೆ ಹೋಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಹೊಂಚು ಹಾಕಿಕೊಂಡು ಕಾಯುತ್ತಿರುವ ವಾಹನ ಚೋರರು ಅವುಗಳನ್ನು ಕ್ಷಣ ಮಾತ್ರದಲ್ಲಿ ಕದ್ದು ಪರಾರಿಯಾಗುತ್ತಾರೆ.

ಪ್ರತಿದಿನ 14 ದ್ವಿಚಕ್ರ ವಾಹನಗಳ ಕಳವು:
ಅಂಕಿ ಅಂಶಗಳ ಪ್ರಕಾರ 2023ರಲ್ಲಿ 6185 ಮತ್ತು 2024ರಲ್ಲಿ 5574 ವಾಹನಗಳು ಬೆಂಗಳೂರು ನಗರದಲ್ಲಿ ಕಳ್ಳತನವಾಗಿವೆ. ವಾಹನ ಕಳ್ಳತನಗಳಲ್ಲಿ ದ್ವಿಚಕ್ರ ವಾಹನಗಳೇ ಅತಿ ಹೆಚ್ಚು. 2023ರಲ್ಲಿ 5827 ಹಾಗೂ 2024ರಲ್ಲಿ 5254 ದ್ವಿಚಕ್ರ ವಾಹನಗಳ ಕಳ್ಳನತನವಾಗಿವೆ. ಅಂದರೆ ಬೆಂಗಳೂರು ನಗರದಲ್ಲಿ ಪ್ರತಿದಿನ ಸರಾಸರಿ 14 ದ್ವಿಚಕ್ರ ವಾಹನಗಳು ಕಳುವಾಗುತ್ತಿವೆ.

ಮನೆ, ಕಚೇರಿ,ಮಾಲ್‌, ಬಸ್‌, ರೈಲ್ವೆ ನಿಲ್ದಾಣ ಮುಂಭಾಗ, ಮಾರ್ಕೆಟ್‌ಗಳ ಬಳಿ ನಿಲ್ಲಿಸಿದ ವಾಹನಗಳನ್ನು ಚೋರರು ಕ್ಷಣ ಮಾತ್ರದಲ್ಲಿ ಕಳ್ಳತನ ಮಾಡಿಕೊಂಡು ಹೋಗುತ್ತಾರೆ. ಬಹುತೇಕವಾಗಿ ವಾಹನ ಕಳ್ಳರು ನಕಲಿ ಕೀ ಬಳಸಿ ಇಲ್ಲವೆ ಹ್ಯಾಂಡ್‌ಲಾಕ್‌ಗಳನ್ನು ಕಾಲಿನಿಂದ ಒದ್ದು ಮುರಿದು ಕಳ್ಳತನ ಮಾಡುತ್ತಾರೆ ಎಂಬುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
ಹೀಗೆ ಕಳ್ಳತನ ಮಾಡಿಕೊಂಡು ಹೋದ ದ್ವಿಚಕ್ರ ವಾಹನಗಳನ್ನು ಪಾಳು ಮನೆಗಳಲ್ಲಿ ಅಥವಾ ತಮ್ಮ ಮನೆಗಳ ಸಮೀಪದ ಖಾಲಿ ಜಾಗಗಳಲ್ಲಿ ಅಥವಾ ಊರ ಹೊರವಲಯದ ತೋಪುಗಳಲ್ಲಿ ನಿಲ್ಲಿಸಿಕೊಂಡು ಒಂದೊಂದಾಗಿ ಮಾರಾಟ ಮಾಡುತ್ತಾರೆ. ಇಲ್ಲವೇ ತಮ್ಮ ಸಹಚರರು, ಸ್ನೇಹಿತರು, ನೆಂಟರ ಮೂಲಕ ಮಾರಾಟ ಮಾಡಿಸುತ್ತಾರೆ.

ಬೆಂಗಳೂರು ನಗರದಲ್ಲಿ ಕದ್ದ ವಾಹನಗಳನ್ನು ನಮ್ಮ ರಾಜ್ಯದ ಹಳ್ಳಿಗಳಲ್ಲಿ ಅಥವಾ ನೆರೆ ರಾಜ್ಯಗಳ ಹಳ್ಳಿಗಳಲ್ಲಿ ಮತ್ತು ಹಳ್ಳಿಗಳಲ್ಲಿ ಕಳವು ಮಾಡಿದ ವಾಹನಗಳನ್ನು ಬೆಂಗಳೂರು ನಗರದಲ್ಲಿ ಹೆಚ್ಚಾಗಿ ಮಾರಾಟ ಮಾಡುತ್ತಾರೆ.

ಕಂಬಿ ಎಣಿಸಬೇಕಾಗುತ್ತದೆ ಜೋಕೆ.!
ಸೆಕೆಂಡ್‌ ಹ್ಯಾಂಡ್‌ ದ್ವಿಚಕ್ರ ವಾಹನ ಕೊಳ್ಳುವವರು ಬಹಳ ಜಾಗೃತರಾಗಿರಬೇಕು. ಕಳ್ಳಕಥೆ ಕಟ್ಟಿ ನಾನು ಕಷ್ಟದಲ್ಲಿದ್ದೇನೆ ಎಂದು ನಂಬಿಸಿ ವಾಹನ ಮಾರಾಟ ಮಾಡುತ್ತಾನೆ. ಕಡಿಮೆ ಬೆಲೆಗೆ ಸಿಕ್ಕಿತಲ್ಲ ಎಂದು ಖುಷಿಪಡಬೇಡಿ. ಕಳ್ಳ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಸೀದಾ ನಿಮ್ಮ ಮನೆ ತೋರಿಸುತ್ತಾನೆ. ಆಗ ಬಂದ ಪೊಲೀಸರು ವಾಹನ ತೆಗೆದುಕೊಂಡು ಹೋಗುತ್ತಾರೆ ಜೋಕೆ.
ಇತ್ತೀಚೆಗೆ ರಾಜ್ಯ ಪೊಲೀಸರು ಕಳವು ಮಾಲುಗಳನ್ನು ಸ್ವೀಕರಿಸುವ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸುತ್ತಿದ್ದಾರೆ ಹುಷಾರ್‌.!

ಮಾಲೀಕರೇ ಜಾಗರೂಕರಾಗಿ
ವಾಹನ ಮಾಲೀಕರು ಸಹ ಜಾಗೃತರಾಗಿ ರಬೇಕು, ಯಾವುದೇ ಸಂದರ್ಭದಲ್ಲೂ ನಿಮ್ಮ ವಾಹನಗಳಿಗೆ ಲಾಕ್‌ ಮಾಡುವುದನ್ನು ಮರೆಯಬಾರದು. ಕೆಲವರು ಲಾಕ್‌ ಮಾಡುವುದಿಲ್ಲ. ಬೈಕ್‌, ಸ್ಕೂಟರ್‌ಗಳಲ್ಲಿ ಕೀಯನ್ನು ಬಿಟ್ಟು ಹೋಗುತ್ತಾರೆ. ಈಗ ನಗರದ ಬಹುತೇಕ ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಂತಹ ಸ್ಥಳಗಳಲ್ಲಿ ನಿಲ್ಲಿಸಿ, ಪೇಯಿಂಗ್‌ ಪಾರ್ಕಿಂಗ್‌ಗಳನ್ನು ಉಪಯೋಗಿಸಿಕೊಳ್ಳಿ. ಮನೆ ಕಾಂಪೌಂಡ್‌ ಒಳಗೆ ನಿಲ್ಲಿಸಿ ನಂತರ ಗೇಟಿಗೆ ಬೀಗ ಹಾಕಿ.
ವಾಹನಗಳಿಗೆ ಜಿಪಿಎಸ್‌, ವೀಲ್‌ ಲಾಕಿಂಗ್‌ ಸಿಸ್ಟಮ್‌, ಗಟ್ಟಿ ಹ್ಯಾಂಡ್‌ಲಾಕ್‌ಗಳನ್ನು ಅಳವಡಿಸಿ. ನಕಲಿ ಕೀ ಬಳಸಿ ಅಥವಾ ಸರ್ಕ್ಯೂಟ್‌ ಬ್ರೇಕ್‌ ಮಾಡಿ ವಾಹನ ಕಳ್ಳತನ ಪ್ರಯತ್ನಿಸಿದ್ದಲ್ಲಿ ಸೈರನ್‌ ಆಗುವ ರೀತಿ ಅಥವಾ ಮೊಬೈಲ್‌ಗೆ ಮಾಹಿತಿ ಬರುವಂತಹ ವ್ಯವಸ್ಥೆ ಮಾಡಿಕೊಳ್ಳಿ.

ನಕಲಿ ದಾಖಲೆ ಸೃಷ್ಟಿ..
ತಾವು ಕದ್ದ ವಾಹನಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಈ ಐನಾತಿ ಕಳ್ಳರು ಬಿಡಿ ಭಾಗಗಳನ್ನು ಬಿಚ್ಚಿ ಗುಜರಿಗೆ ಹಾಕಿ ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಾರೆ , ಈ ಚೋರರು.
ಬೆಂಗಳೂರು ನಗರದಲ್ಲಿ ಸ್ಥಳೀಯ ವಾಹನ ಕಳ್ಳರಿಗಿಂತ ನೆರೆಯ ರಾಜ್ಯಗಳ ಕಳ್ಳರ ಹಾವಳಿಯೇ ಹೆಚ್ಚು. ಈ ಚೋರರು ಸಂಜೆಯಾಗುತ್ತಿದ್ದಂತೆ ಬಸ್‌ಗಳಲ್ಲಿ ನಗರಕ್ಕೆ ಬಂದು ರಾತ್ರಿ ಸುತ್ತಾಡಿ ಬೆಳಗಾಗುವಷ್ಟರಲ್ಲಿ ವಾಹನಗಳನ್ನು ಕಳವು ಮಾಡಿಕೊಂಡು ಅದೇ ವಾಹನಗಳಲ್ಲಿ ತಮ್ಮ ತಮ್ಮ ರಾಜ್ಯಗಳಿಗೆ ಹೋಗುತ್ತಾರೆ. ಇವರುಗಳನ್ನು ಪತ್ತೆ ಹಚ್ಚಿ ಹಿಡಿಯುವುದು ಅಷ್ಟು ಸುಲಭ ಅಲ್ಲ.

RELATED ARTICLES

Latest News