Saturday, April 27, 2024
Homeರಾಜ್ಯಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ : ತೀವ್ರಗೊಂಡ ತನಿಖೆ

ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ : ತೀವ್ರಗೊಂಡ ತನಿಖೆ

ಬೆಂಗಳೂರು,ಡಿ.2- ನಗರ ಹಾಗೂ ಹೊರವಲಯದ 70ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಕಳುಹಿಸಿರುವ ದುಷ್ಕರ್ಮಿ ಬಂಧನಕ್ಕಾಗಿ ಸಿಸಿಬಿ ಸೈಬರ್ ಕ್ರೈಂ ಅಧಿಕಾರಿ ಮತ್ತು ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ.

ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸತೀಶ್‍ಕುಮಾರ್ ಅವರ ನೇತೃತ್ವದಲ್ಲಿ ಸಿಸಿಬಿ ಪೊಲೀಸರ ತಂಡ ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದೆ. ಈ ಹಿಂದೆ ಬಂದಿದ್ದ ಹುಸಿ ಬಾಂಬ್ ಇ-ಮೇಲ್‍ಗಳನ್ನು ಆಧರಿಸಿ ಈ ತಂಡ ತನಿಖೆ ಕೈಗೊಂಡಿದ್ದು, ಪದೇ ಪದೇ ಈ ರೀತಿ ನಡೆಯುತ್ತಿರುವ ಕೃತ್ಯದ ಹಿಂದಿರುವ ದುಷ್ಕರ್ಮಿಗಳಾರು?; ಇದರ ಹಿಂದಿನ ಅಸಲಿ ಕಾರಣವೇನು? ಪ್ರತಿಷ್ಠಿತ ಖಾಸಗಿ ಶಾಲೆಗಳನ್ನೇ ಟಾರ್ಗೆಟ್ ಮಾಡಿ ಇಮೇಲ್ ಕಳುಹಿಸುತ್ತಿರುವ ಇದರ ಉದ್ದೇಶವಾದರೂ ಏನು? ಈ ಕೃತ್ಯಕ್ಕೆ ಇ-ಮೇಲ್ ಬಳಸುತ್ತಿರುವ ದುಷ್ಕರ್ಮಿ ಯಾರೆಂಬ ಬಗ್ಗೆ ವಿವಿಧ ದೃಷ್ಟಿಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ.

ದುಷ್ಕರ್ಮಿಯು ವರ್ಚುಯಲ್ ಪ್ರೈವೇಟ್ ನೆಟ್‍ವರ್ಕ್ ಬಳಸಿ ಶಾಲೆಗಳಿಗೆ ಇಮೇಲ್ ಸಂದೇಶಗಳನ್ನು ಕಳುಹಿಸಿದ್ದಾನೆ. ಹೀಗಾಗಿ ಪೊಲೀಸರು ದುಷ್ಕರ್ಮಿ ಬಳಸಿರುವ ಕಂಪ್ಯೂಟರ್, ಸೈಬರ್ ಕೆಫೆ ಇಲ್ಲವೇ ಲ್ಯಾಪ್‍ಟಾಪ್ ಬಗ್ಗೆ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

ಪಿಎಸ್‍ಐ ಪರೀಕ್ಷೆ ಮುಂದೂಡಿಕೆಗೆ ದೂರವಾಣಿ ಕರೆ ಅಭಿಯಾನ

ಪೊಲೀಸ್ ಮೂಲಗಳ ಪ್ರಕಾರ ದುಷ್ಕರ್ಮಿಯು ಖಾಸಗಿ ಕಂಪನಿಯ ವರ್ಚುಯಲ್ ಪ್ರೈವೇಟ್ ನೆಟ್‍ವರ್ಕ್ ಬಳಸಿ ಇಮೇಲ್ ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಕಂಪನಿಯ ಯಾವ ಸರ್ವರ್ ಬಳಸಲಾಗಿದೆ, ಬಳಸಿದ ಐಡಿ, ಐಪಿ ಯಾವುದು ಎಂಬುದರ ಬಗ್ಗೆಯೂ ಮಾಹಿತಿ ನೀಡುವಂತೆ ವಿದೇಶದ ಸಿರ್ಟಸ್ ಎಂಬ ಕಂಪನಿಗೆ ಪೊಲೀಸ್ ಅಧಿಕಾರಿಗಳು ಪತ್ರ ಬರೆದಿದ್ದಾರೆ.

ನಿನ್ನೆ ಬೆಳಗ್ಗೆ ಶಾಲೆಗೆ ಬಂದ ಆಡಳಿತ ಮಂಡಳಿ ಸಿಬ್ಬಂದಿಗಳು ಇಮೇಲ್ ಪರಿಶೀಲಿಸಿದಾಗ ಅದರಲ್ಲಿ ನಿಮ್ಮ ಶಾಲೆಗೆ ಬಾಂಬ್ ಇಡಲಾಗಿದೆ ಎಂಬ ಸಂದೇಶ ನೋಡಿ ಆತಂಕಗೊಂಡು ಪೊಲೀಸರಿಗೆ ವಿಷಯ ತಿಳಿಸುತ್ತಿದ್ದಂತೆ ಇದೇ ರೀತಿ 70ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಶಾಲೆಗಳಿಗೆ ಸಂದೇಶ ಬಂದಿರುವುದು ಗಮನಿಸಿ ಪೋಷಕರು ಆತಂಕಗೊಂಡಿದ್ದರು.

ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಶಾಲೆಗಳ ಬಳಿ ಪೋಷಕರು ದೌಡಾಯಿಸಿ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಹೋದ ದೃಶ್ಯ ಕಂಡುಬಂತು. ಬಾಂಬ್ ಇಡಲಾಗಿದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ, ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಶಾಲೆಯ ಕೊಠಡಿಗಳ ಒಳಗೆ ಹಾಗೂ ಶೌಚಾಲಯ ಸೇರಿದಂತೆ ಕಾಂಪೌಂಡ್ ಸುತ್ತ ತಪಾಸಣೆ ನಡೆಸಿದರಾದರೂ ಯಾವುದೇ ಬಾಂಬ್ ಪತ್ತೆಯಾಗಿಲ್ಲ.

ಪಿಎಸ್‍ಐ ಪರೀಕ್ಷೆ ಮುಂದೂಡಿಕೆಗೆ ದೂರವಾಣಿ ಕರೆ ಅಭಿಯಾನ

ಇದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂಬುದು ತಿಳಿದು ಪೋಷಕರು ನಿಟ್ಟುಸಿರು ಬಿಟ್ಟರು. ಎಂದಿನಂತೆ ಇಂದು ಎಲ್ಲಾ ಶಾಲೆಗಳಲ್ಲಿ ತರಗತಿಗಳು ನಡೆದವು.

RELATED ARTICLES

Latest News