ಬೆಂಗಳೂರು,ಅ.28- ತಾಯಿಗೆ ಕೆಟ್ಟಪದಗಳಿಂದ ನಿಂದಿಸಿದನೆಂಬ ಕಾರಣಕ್ಕೆ ಬೈಕ್‌ನ ಸ್ಟೀಲ್ ರಾಡ್‌ನಿಂದ ಶಾಲಾ ಬಸ್ ಚಾಲಕನ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಅವಿನಾಶ್ (36) ಮೃತಪಟ್ಟ ವ್ಯಕ್ತಿ. ಇವರು ವೃತ್ತಿಯಲ್ಲಿ ಶಾಲಾ ಬಸ್ ಚಾಲಕ. ಉಲ್ಲಾಳ ಉಪನಗರದಲ್ಲಿ ಕಾರ್ತಿಕ್ ಮನೆ ಇದೆ. ಇವರ ಮನೆ ಪಕ್ಕದಲ್ಲಿ ಅವಿನಾಶ್ ರೂಂ ಮಾಡಿಕೊಂಡು ವಾಸವಾಗಿದ್ದರು. ಕಾರ್ತಿಕ್ ಮನೆಯಲ್ಲೇ ಅವಿನಾಶ್ ಊಟ, ತಿಂಡಿ ಮಾಡುತ್ತಿದ್ದನು.
ನಿನ್ನೆ ರಾತ್ರಿ 10.30 ರ ಸುಮಾ ರಿನಲ್ಲಿ ಅವಿನಾಶ್ ಮದ್ಯಪಾನ ಸೇವಿಸಿ ಕಾರ್ತಿಕ್ ಮನೆಗೆ ಹೋಗಿ ಅವರ ತಾಯಿ ಸುಮಂಗಲಾ ಅವರಿಗೆ ಬಾಯಿಗೆ ಬಂದಂತೆ ನಿಂದಿಸಿದ್ದಾನೆ. ಆ ವೇಳೆ ಕಾರ್ತಿಕ್ ಮನೆಯಲ್ಲಿ ಇರಲಿಲ್ಲ.
ಈ ವಿಷಯವನ್ನು ಸುಮಂಗಲಾ ಅವರು ಕರೆ ಮಾಡಿ ಮಗ ಕಾರ್ತಿಕ್‌ಗೆ ತಿಳಿಸಿದ್ದಾರೆ. ತಕ್ಷಣ ಕಾರ್ತಿಕ್ ಮನೆಗೆ ಬಂದಿದ್ದಾನೆ. ಆ ವೇಳೆ ತಾಯಿ ಮಗ ಇಬ್ಬರು ಸೇರಿಕೊಂಡು ಅವಿನಾಶ್ ಜೊತೆ ಜಗಳವಾಡಿ ಆತನಿಗೆ ಬೈಕ್ ಮುಂಭಾಗದ ಸ್ಟೀಲ್ ರಾಡ್‌ನಿಂದ ತಲೆಗೆ ಹೊಡಿದ್ದಿದ್ದರಿಂದ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದು ಜ್ಞಾನಭಾರತಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಆರೋಪಿ ಕಾರ್ತಿಕ್‌ನನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
