ಬೆಂಗಳೂರು,ಏ.30– ಏರ್‌ಪೋರ್ಟ್ ರಸ್ತೆಯ ಸಾದಹಳ್ಳಿ ಸಿಗ್ನಲ್ ಬಳಿ ಸರಣಿ ಅಪಘಾತ ಸಂಭವಿಸಿದ ಪರಿಣಾಮ ಕಾರಿನ ಲ್ಲಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಈ ಸರಣಿ ಅಪಘಾತದಿಂದಾಗಿ ಆರು ಕಾರುಗಳು ಜಖಂಗೊಂಡಿವೆ.
ಜಕ್ಕೂರು ನಿವಾಸಿ ಕುಮಾರ್‌ಬಾಬು (58) ಮೃತಪಟ್ಟವರು. ಇವರ ಪಕ್ಕ ಕುಳಿತಿದ್ದ ವರಲಕ್ಷ್ಮಿ (60) ಎಂಬುವವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಮಾರ್‌ಬಾಬು, ವರಲಕ್ಷ್ಮಿ ಸೇರಿದಂತೆ ನಾಲ್ಕು ಮಂದಿ ಕುಟುಂಬ ಸದಸ್ಯರು ಲೇಔಟ್‌ನಲ್ಲಿ ಪೂಜೆ ನಿಮಿತ್ತ ಕಾರಿನಲ್ಲಿ ಇಂದು ಬೆಳಗ್ಗೆ 6 ಗಂಟೆ ಸುಮಾರಿನಲ್ಲಿ ಹೋಗುತ್ತಿದ್ದರು.
ಏರ್‌ಪೋರ್ಟ್ ರಸ್ತೆಯ ಸಾದಹಳ್ಳಿ ಬಳಿ ಸಿಗ್ನಲ್ ಇದ್ದ ಕಾರಣ ಆರು ಕಾರುಗಳು ಒಂದರ ಹಿಂದೆ ಒಂದು ನಿಂತಿದ್ದವು. ಕೊನೆಯಲ್ಲಿ ಕುಮಾರ್‌ಬಾಬು ಅವರ ಕಾರು ನಿಂತಿದೆ.ಅದೇ ವೇಳೆಗೆ ಇವರ ಕಾರಿನ ಹಿಂದೆ ಈಚರ್ ವಾಹನ ಬಂದ ತಕ್ಷಣ ಸಿಗ್ನಲ್ ಬಿಡುತ್ತಿದ್ದಂತೆ ಈಚರ್ ವಾಹನದ ಚಾಲಕ ಏಕಾಏಕಿ ವಾಹನ ಚಾಲಾಯಿಸಿದ್ದರಿಂದ ಕುಮಾರ್ ರವರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದರಿಂದ ಮುಂದೆ ನಿಲ್ಲಿಸಲಾಗಿದ್ದ ಐದು ಕಾರುಗಳಿಗೂ ಒಂದಕ್ಕೊಂದು ಡಿಕ್ಕಿಯಾಗಿ ಸರಣಿ ಅಪಘಾತವಾಗಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಕುಮಾರ್ ರವರಿಗೆ ಗಂಭೀರ ಪೆಟ್ಟಾಗಿ ಮೃತಪಟ್ಟಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಜಾಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಕುಮಾರ್ ರವರ ಮೃತದೇಹವನ್ನು ಯಲಹಂಕ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.