ಬೆಂಗಳೂರು, ಡಿ.9- ನಗರದಲ್ಲಿ ತಡರಾತ್ರಿ ಸೆಕ್ಯುರಿಟಿ ಸೇರಿದಂತೆ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆಯಿಂದ ಸಿಲಿಕಾನ್ ಸಿಟಿ ಜನತೆ ಬೆಚ್ಚಿಬಿದ್ದಿದ್ದಾರೆ. ನೇಪಾಳ ಮೂಲದ ಸೆಕ್ಯುರಿಟಿ ಗಾರ್ಡ್ ಬಿಕ್ರಂ (21) ಮತ್ತು ಬಿಹಾರ ಮೂಲದ ಚಾಲಕ ಚೋಟು ತೂರಿ (33) ಕೊಲೆಯಾದವರು.
ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಕೈಗಾರಿಕಾ ಪ್ರದೇಶದ 4ನೇ ಹಂತದಲ್ಲಿರುವ ವೆಂಕಟೇಶ್ವರ ಟೆಕ್ಸ್ ಟೈಲ್ಸ್ ಸಮೀಪದಲ್ಲಿನ ಕಾರ್ಖಾನೆಯೊಂದು ಸ್ಥಗಿತಗೊಂಡಿದ್ದು, ಇಲ್ಲಿ ಬಿಕ್ರಂ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದನು. ವೆಂಕಟೇಶ್ವರ ಟೆಕ್ಸ್ ಟೈಲ್ನಲ್ಲಿ ಚೋಟು ತೂರಿ ವಾಹನ ಚಾಲಕ ವೃತ್ತಿ ಮಾಡಿಕೊಂಡಿದ್ದನು.
ವೆಂಕಟೇಶ್ವರ ಟೈಕ್ಸ್ ಟೈಲ್ ಸಮೀಪದ ಟೆಂಟ್ನಲ್ಲಿ ರಾತ್ರಿ ಇವರಿಬ್ಬರು ಹಾಗೂ ಮೂರ್ನಾಲ್ಕು ಮಂದಿ ಸ್ನೇಹಿತರೊಂದಿಗೆ ಮದ್ಯದ ಪಾರ್ಟಿ ಮಾಡಿದ್ದಾರೆ. ಆ ವೇಳೆ ಇವರುಗಳ ನಡುವೆಯೇ ಯಾವುದೋ ವಿಚಾರವಾಗಿ ಗಲಾಟೆಯಾಗಿದೆ.
ಆ ಸಂದರ್ಭದಲ್ಲಿ ಜಗಳ ವಿಕೋಪಕ್ಕೆ ತಿರುಗಿ ಟೈಲ್ಸ್ ಚೂರಿನಿಂದ ಬಿಕ್ರಂ ಮತ್ತು ಚೋಟು ತೂರಿ ಅವರುಗಳ ಕುತ್ತಿಗೆಗೆ ಚುಚ್ಚಿ ನಂತರ ಟೈಲ್ಸ್ ನಿಂದ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ ಸ್ಥಳೀಯರು ಇಬ್ಬರು ಕೊಲೆಯಾಗಿರುವುದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.
ಸುದ್ದಿ ತಿಳಿದು ಯಲಹಂಕ ನ್ಯೂಟೌನ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಇಬ್ಬರ ಮೃತ ದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಯಲಹಂಕ ನ್ಯೂಟೌನ್ ಠಾಣೆ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಯಾವ ವಿಚಾರಕ್ಕಾಗಿ ಗಲಾಟೆ ನಡೆದು ಯಾರು ಈ ಜೋಡಿ ಕೊಲೆ ಮಾಡಿದ್ದಾರೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.