ಬೆಂಗಳೂರು,ಜು.12- ರಾಜ್ಯ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣ ಸಂಬಂಧ ಕರ್ತವ್ಯ ನಿರ್ಲಕ್ಷ್ಯ ತೋರಿದ ಪೊಲೀಸರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆಗೆ ಆದೇಶಿಸಬೇಕೆಂದು ಮೈಕಲ್ ಕುನ್ಹಾ ನೇತೃತ್ವದ ಆಯೋಗ ಶಿಫಾರಸು ಮಾಡಿದೆ.
ಪ್ರಕರಣ ಸಂಬಂಧ ರಾಜ್ಯ ಸರ್ಕಾರ ನೇಮಕ ಮಾಡಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಕುನ್ಹಾ ನೇತೃತ್ವದ ಆಯೋಗ ಸಲ್ಲಿಸಿರುವ ವರದಿಯಲ್ಲಿ ಪ್ರಮುಖವಾಗಿ ಕಾಲ್ತುಳಿತಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂಬುದನ್ನು ಪತ್ತೆ ಮಾಡಿದೆ.
ಕರ್ತವ್ಯ ನಿರ್ವಹಣೆ ಮಾಡುವಲ್ಲಿ ಲೋಪವೆಸಗಿರುವ ಪೊಲೀಸರು ಮೇಲಾಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಿಸಿ ತನಿಖೆಗೆ ಆದೇಶ ನೀಡಬೇಕೆಂದು ಶಿಫಾರಸು ಮಾಡಲಾಗಿದೆ.
ಕ್ರೀಡಾಂಗಣದ ಒಳಗೆ 79 ಪೊಲೀಸರು ಮಾತ್ರ ಇದ್ದರು. ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಇರಲಿಲ್ಲ. ತುರ್ತು ವಾಹನ, ಆಂಬುಲೆನ್‌್ಸ ವ್ಯವಸ್ಥೆ ಅಪೂರ್ಣವಾಗಿತ್ತು. 3:25ಕ್ಕೆ ಕಾಲ್ತುಳಿತ ಸಂಭವಿಸಿದ್ದರೂ. 5:30ರವರೆಗೆ ಪೊಲೀಸ್ ಕಮಿಷನರ್‌ಗೆ ಮಾಹಿತಿ ಇಲ್ಲ. 4 ಗಂಟೆಗೆ ಜಂಟಿ ಪೊಲೀಸ್ ಅಯುಕ್ತರು ಕ್ರೀಡಾಂಗಣಕ್ಕೆ ಬಂದಿದ್ದರು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಮಾಡಿದ್ದು ಸರಿಯಲ್ಲ. ಗೇಟ್‌ಗಳು ಅತ್ಯಂತ ಚಿಕ್ಕದಾಗಿವೆ. ಕ್ರೀಡಾಂಗಣದಲ್ಲಿ ಫೈರ್ ಸೇಫ್ಟಿ ವ್ಯವಸ್ಥೆ ಇರಲಿಲ್ಲ. 1,650 ಪೊಲೀಸ್ ಅಧಿಕಾರಿಗಳು ಭದ್ರತೆಗೆ ನಿಯೋಜನೆ ಆಗಿತ್ತು ಎಂಬುದು ಸುಳ್ಳು. 800ಕ್ಕಿಂತ ಕಡಿಮೆ ಜನರ ಭದ್ರತೆಗೆ ನಿಯೋಜನೆ ಆಗಿದ್ದರು ಎಂದು ವರದಿಯಲ್ಲಿ ಬಹಿರಂಗಗೊಂಡಿದೆ.
ಇದೇ ವೇಳೆ ಆರ್‌ಸಿಬಿ, ಡಿಎನ್‌ಎ, ಕೆಎಸ್ಸಿಎ ಮತ್ತು ಪೊಲೀಸರ ವಿರುದ್ಧ ದಂಡನೀಯ ಪ್ರಕರಣ ದಾಖಲು ಮಾಡಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಘಟನೆಗೆ ಕೆಎಸ್‌ಸಿಎ, ಡಿಎನ್‌ಎ, ಆರ್‌ಸಿಬಿ ಹಾಗೂ ಪೊಲೀಸರು ನೇರ ಹೊಣೆಯಾಗಿದ್ದಾರೆ. ಕಾರ್ಯಕ್ರಮ ನಡೆಸುವುದು ಅಸಾಧ್ಯವೆಂದು ಗೊತ್ತಿದ್ದರೂ ಎಲ್ಲರೂ ಶಾಮೀಲಾಗಿ ಕಾರ್ಯಕ್ರಮ ನಡೆಸಿದರು. ಈ ಎಲ್ಲರ ಕರ್ತವ್ಯ ಲೋಪ, ನಿರ್ಲಕ್ಷ್ಯತನದ ಪರಮಾವಧಿ ಎದ್ದು ಕಾಣುತ್ತಿದೆ. ಬಂದೋಬಸ್ತ್ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ ಎಂಬುದನ್ನು ಪ್ರಸ್ತಾಪಿಸಲಾಗಿದೆ.
ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ 11 ಜನರು ಸಾವನ್ನಪ್ಪಿ 50ಕ್ಕೂ ಹೆಚ್ಚು ಜನರು ಗಾಯಗೊಂಡ ಕಾಲ್ತುಳಿತಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ), ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಕಾರ್ಯಕ್ರಮ ಆಯೋಜಕರಾದ ಡಿಎನ್‌ಎ ಎಂಟರ್‌ಟೈನೆಂಟ್ ಮತ್ತು ಬೆಂಗಳೂರು ಪೊಲೀಸರು ನೇರಹೊಣೆ ಎಂದು ಹೇಳಿದೆ.
ಕಾಂಗ್ರೆಸ್ ಸರ್ಕಾರವು ವಿಧಾನಸೌಧದಲ್ಲಿ ಒಂದು ಕಿಲೋಮೀಟರ್‌ಗಿಂತಲೂ ಕಡಿಮೆ ದೂರದಲ್ಲಿ ಸನಾನ ಕಾರ್ಯಕ್ರಮವನ್ನು ಆಯೋಜಿಸಿದ್ದಾಗಲೂ, ಇಂಡಿಯನ್ ಪ್ರೀಮಿಯರ್ ಲೀಗ್ ವಿಜೇತ ತಂಡವನ್ನು ನೋಡುವ ಆಶಯದೊಂದಿಗೆ ಸಾವಿರಾರು ಆರ್‌ಸಿಬಿ ಅಭಿಮಾನಿಗಳು ಕ್ರೀಡಾಂಗಣದ ಹೊರಗೆ ಜಮಾಯಿಸಿದ್ದರು. ಅನಿಯಂತ್ರಿತ ಜನಸಂದಣಿಯು ಮಧ್ಯಾಹ್ನ 3:25ರ ಸುಮಾರಿಗೆ ಮಾರಕ ಕಾಲ್ತುಳಿತಕ್ಕೆ ಕಾರಣವಾಗಿತ್ತು.
ಯೋಜನೆ, ಸಮನ್ವಯ ಮತ್ತು ಜನಸಂದಣಿ ನಿರ್ವಹಣೆಯಲ್ಲಿನ ಲೋಪಗಳನ್ನು ತನಿಖೆ ಮಾಡಲು ಡಿ.ಕುನ್ಹಾ ಆಯೋಗಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ವಿಚಾರಣೆಯ ಅವಧಿಯಲ್ಲಿ ಆಯೋಗ ಸ್ಥಳ ಪರಿಶೀಲನೆ ನಡೆಸಿ ಬಹು ವಿಚಾರಣೆಗಳನ್ನು ದಾಖಲಿಸಿತ್ತು. ಪ್ರತ್ಯಕ್ಷದರ್ಶಿಗಳು, ಪೊಲೀಸ್ ಅಧಿಕಾರಿಗಳು, ಕೆಎಸ್‌ಸಿಎ ಅಧಿಕಾರಿಗಳು ಮತ್ತು ಸರ್ಕಾರಿ ಪ್ರತಿನಿಧಿಗಳಿಂದ ಹೇಳಿಕೆಗಳನ್ನು ದಾಖಲಿಸಿತ್ತು.
ಇದಲ್ಲದೆ, ಪ್ರಮುಖ ಅಧಿಕಾರಿಗಳು ತಕ್ಷಣ ಪ್ರತಿಕ್ರಿಯಿಸಲು ವಿಫಲರಾಗಿದ್ದಾರೆ ಎಂದು ವಿಚಾರಣೆಯಲ್ಲಿ ತಿಳಿದುಬಂದಿದೆ. ಜಂಟಿ ಪೊಲೀಸ್ ಆಯುಕ್ತರು ಸಂಜೆ 4 ಗಂಟೆಗೆ ಮಾತ್ರ ಸ್ಥಳಕ್ಕೆ ಬಂದರು, ಆದರೆ ಪೊಲೀಸ್ ಆಯುಕ್ತರಿಗೆ ಘಟನೆಯ ಬಗ್ಗೆ ಸಂಜೆ 5:30 ರವರೆಗೆ ಅಂದರೆ ಕಾಲ್ತುಳಿತ ಸಂಭವಿಸಿ ಎರಡು ಗಂಟೆಗಳಿಗಿಂತ ಹೆಚ್ಚು ಸಮಯ ಕಳೆದರೂ ಮಾಹಿತಿ ನೀಡಲಾಗಿಲ್ಲ ಎಂಬುದನ್ನು ಒತ್ತಿ ಹೇಳಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡು ಸಂಪುಟಗಳ ವರದಿಯನ್ನು ಹಸ್ತಾಂತರಿಸಿದ್ದಾರೆ. ಜುಲೈ 17ರಂದು ರಾಜ್ಯ ಸಚಿವ ಸಂಪುಟದ ಮುಂದೆ ಇದನ್ನು ಮಂಡಿಸಲಾಗುವುದು. ತನಿಖೆಯ ಮುಖ್ಯಾಂಶಗಳು ಅಧ್ಯಯನ ನಡೆಸಿದ ನಂತರ ತಿಳಿಯಲಿದೆ ಎಂದು ಸಿಎಂ ಹೇಳಿದ್ದಾರೆ. ಕರ್ನಾಟಕ ಸರ್ಕಾರವು ಮೊದಲು ಕಾಲ್ತುಳಿತದ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಯನ್ನು ಆರಂಭಿಸಿ, ಪ್ರಕರಣದ ಕ್ರಿಮಿನಲ್ ಅಂಶಗಳನ್ನು ತನಿಖೆ ಮಾಡುವಂತೆ ಪೊಲೀಸರಿಗೆ ನಿರ್ದೇಶಿಸಿತ್ತು. ನಿರ್ಲಕ್ಷ್ಯ ಮತ್ತು ಅಪರಾಧಿಕ ನರಹತ್ಯೆಗಾಗಿ ಆರ್‌ಸಿಬಿ, ಕೆಎಸ್‌ಸಿಎ ಮತ್ತು ಈವೆಂಟ್ ಮ್ಯಾನೇಜೆಂಟ್ ಸಂಸ್ಥೆ ಡಿಎನ್‌ಎ ಎಂಟರ್‌ಟೈನೆಂಟ್ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿ ಆಗಿನ ಬೆಂಗಳೂರು ಪೊಲೀಸ್ ಆಯುಕ್ತರು ಮತ್ತು ಇತರ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿದಂತೆ ಐದು ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಕರ್ನಾಟಕ ಹೈಕೋರ್ಟ್ ಈ ಪ್ರಕರಣವನ್ನು ಸ್ವಯಂ ದೂರು ದಾಖಲಿಸಿಕೊಂಡು ಘಟನೆಗೆ ಯಾರು ಕಾರಣ ಎಂಬುದು ಸೇರಿದಂತೆ ಪ್ರಮುಖವಾಗಿ ಒಂಬತ್ತು ಪ್ರಮುಖ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳಿತ್ತು.