Friday, November 22, 2024
Homeಬೆಂಗಳೂರುಬೆಂಗಳೂರಿನ ಇಂದಿನ ಕ್ರೈಂ ಸುದ್ದಿಗಳು

ಬೆಂಗಳೂರಿನ ಇಂದಿನ ಕ್ರೈಂ ಸುದ್ದಿಗಳು

ಇಬ್ಬರು ಡೆಲಿವರಿ ಬಾಯ್‌ ಬಂಧನ : 10 ಲಕ್ಷ ವೌಲ್ಯದ ಮಾಲು ಜಪ್ತಿ
ಬೆಂಗಳೂರು,ಜೂ.28- ಗ್ರಾಹಕರು ಬುಕ್‌ ಮಾಡಿದ ಮೊಬೈಲ್‌ ಹಾಗೂ ಇನ್ನಿತರೆ ವಸ್ತುಗಳ1ನ್ನು ಗ್ರಾಹಕರಿಗೆ ಡೆಲಿವರಿ ಮಾಡದೆ ಅವುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಒಡಿಶಾ ಮೂಲದ ಇಬ್ಬರು ಡೆಲಿವರಿ ಬಾಯ್‌ಗಳನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಾದಲ್‌ ಬೇಗೂರಿ(28), ಭವಾನಿ ಶಂಕರ್‌ ಬೇಗೂರಿ(28) ಬಂಧಿತ ಡೆಲಿವರಿ ಬಾಯ್. ದೊಡ್ಡನೆಕ್ಕುಂದಿಯಲ್ಲಿರುವ ಎನ್‌ಸಿಪಿಆರ್‌ ಇಂಡಸ್ಟ್ರೀಯಲ್‌ ಪ್ರದೇಶದ ಇನಸ್ಟಾಕಾರ್ಟ್‌ ಪ್ರೈ.ಲೀ.ನಲ್ಲಿ ಡೆಲಿವರಿ ಬಾಯ್‌ ಕೆಲಸಕ್ಕೆಂದು ಇವರಿಬ್ಬರು ಸೇರಿಕೊಂಡಿದ್ದರು.ಗ್ರಾಹಕರು ಬುಕ್‌ ಮಾಡಿದ ಮೊಬೈಲ್‌ಗಳು ಹಾಗೂ ಇತರ ವಸ್ತುಗಳನ್ನು ಅವರ ವಿಳಾಸಕ್ಕೆ ಡೆಲಿವರಿ ಮಾಡುವಂತೆ ಈ ಇಬ್ಬರಿಗೆ ಹೇಳಿ ಕಳುಹಿಸಿದ್ದು, ಈ ಇಬ್ಬರು ಗ್ರಾಹಕರಿಗೆ ವಸ್ತುಗಳನ್ನು ತಲುಪಿಸದೆ ಅವುಗಳನ್ನು ತೆಗೆದುಕೊಂಡು ತಮ ಸ್ವಂತ ಊರಾದ ಒಡಿಶಾಗೆ ಹೋಗಿ ತಲೆಮರೆಸಿಕೊಂಡಿದ್ದರು.

ಈ ಬಗ್ಗೆ ಮಹದೇವಪುರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಒರಿಸ್ಸಾಗೆ ಹೋಗಿ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ 18 ಮೊಬೈಲ್‌ಗಳು, ಬೆಲೆ ಬಾಳುವ ವಾಚ್‌ಗಳು, ಇಯರ್‌ಫೋನ್‌ಗಳು, ಇಯರ್‌ ಬಡ್‌್ಸಗಳು, ಟಿ.ಬಿ ಹಾರ್ಡ್‌ ಡಿಸ್ಕ್‌ನ್ನು ವಶಪಡಿಸಿಕೊಂಡಿದ್ದಾರೆ. ಈ ವಸ್ತುಗಳ ಒಟ್ಟು ಮೌಲ್ಯ 10 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಈ ಕಾರ್ಯಾಚರಣೆಯನ್ನು ಮಹದೇವಪುರ ಠಾಣೆಯ ಇನ್‌ಸ್ಪೆಕ್ಟರ್‌ ಹಾಗೂ ಸಿಬ್ಬಂದಿ ಕೈಗೊಂಡಿದ್ದರು.

ಇಬ್ಬರು ಸರಗಳ್ಳರ ಬಂಧನ
ಬೆಂಗಳೂರು,ಜೂ.28- ಮಹಿಳೆಯನ್ನು ಹಿಂಬಾಲಿಸಿಕೊಂಡು ಹೋಗಿ ಮಾಂಗಲ್ಯಸರ ಕಿತ್ತುಕೊಂಡು ಪರಾರಿಯಾಗಿದ್ದ ಇಬ್ಬರು ಸರಗಳ್ಳರನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿ 40 ಸಾವಿರ ಮೌಲ್ಯದ ಸರ ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಪಿಳ್ಳಗಾನಹಳ್ಳಿ ನಿವಾಸಿಯೊಬ್ಬರು ಅಂಜನಾಪುರ ಲಾಲ್‌ಬಹುದ್ದೂರ್‌ ಶಾಸ್ತ್ರಿನಗರದ 11ನೇ ಬ್ಲಾಕ್ನ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಇಬ್ಬರು ಸರಗಳ್ಳರು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಹೋಗಿ ಮಾಂಗಲ್ಯಸರ ಅಪಹರಿಸಿ ಪರಾರಿಯಾಗಿದ್ದರು. ಈ ಬಗ್ಗೆ ಅವರು ತಲಘಟ್ಟಪುರ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದರು.ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿ ಹಲವಾರು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಜಯನಗರದ ಸೋಮೇಶ್ವರ ದೇವಸ್ಥಾನದ ಆರ್ಚ್‌ ಬಳಿ ಇಬ್ಬರು ಸರಗಳ್ಳರನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 40 ಸಾವಿರ ಬೆಲೆ ಬಾಳುವ 8 ಗ್ರಾಂ ತೂಕದ ಚಿನ್ನದ ಮಾಂಗಲ್ಯ, 2 ಚಿನ್ನದ ಕಾಸುಗಳು, 2 ಚಿನ್ನದ ಗುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಹೀರೋ ಹೊಂಡಾ ಬೈಕ್‌ನ್ನು ವಶಪಡಿಸಿಕೊಂಡಿದ್ದಾರೆ. ಇನ್‌ಸ್ಪೆಕ್ಟರ್‌ ಜಗದೀಶ್‌ ಮತ್ತು ಸಿಬ್ಬಂದಿ ಈ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಾಹನಗಳ ಕಳವು ಮಾಡುತ್ತಿದ್ದ ಆರೋಪಿ ಸೆರೆ
ಬೆಂಗಳೂರು,ಜೂ.28- ರಸ್ತೆಬದಿ ನಿಲ್ಲಿಸಿದ್ದಂತಹ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ವಿವಿಪುರಂ ಠಾಣೆ ಪೊಲೀಸರು ಬಂಧಿಸಿ 18 ಲಕ್ಷ ಬೆಲೆ ಬಾಳುವ ಏಳು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಸಜ್ಜನ್‌ರಾವ್‌ ಸರ್ಕಲ್‌ ಬಳಿ ವಾಸವಿರುವ ನಿವಾಸಿಯೊಬ್ಬರು ಮನೆ ಸಮೀಪದ ಸತ್ಯನಾರಾಯಣಸ್ವಾಮಿ ದೇವಸ್ಥಾನದ ಮುಂಭಾಗ ತಮ ಟೆಂಪೋ ಟ್ರಾವಲರ್‌ ವಾಹನವನ್ನು ನಿಲ್ಲಿಸಿದ್ದು, ಬೆಳಗಾಗುವಷ್ಟರಲ್ಲಿ ಈ ವಾಹನ ಕಳ್ಳತನವಾಗಿತ್ತು.

ಈ ಬಗ್ಗೆ ಅವರು ವಿವಿಪುರಂ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದರು. ಕಳ್ಳತನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಕಳವು ಮಾಡಿದ ವಾಹನಗಳನ್ನು ನ್ಯಾಷನಲ್‌ ಕಾಲೇಜು ಮೆಟ್ರೋ ನಿಲ್ದಾಣದ ಸರ್ವೀಸ್‌‍ ರಸ್ತೆಯಲ್ಲಿ ನಿಲ್ಲಿಸಿದ್ದನು.

ಆರೋಪಿಯಿಂದ 18 ಲಕ್ಷ ಬೆಲೆ ಬಾಳುವ ಟೆಂಪೋ ಟ್ರಾವಲರ್‌, 3 ಪ್ಯಾಸೆಂಜರ್‌ ಆಟೋ ರಿಕ್ಷಾಗಳು, 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿವಿಪುರಂ ಠಾಣೆ ಇನ್‌ಸ್ಪೆಕ್ಟರ್‌ ಧರ್ಮೇಂದ್ರ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದರು.

ಮದ್ಯಪಾನ ಮಾಡಿ ವಾಹನ ಚಾಲನೆ:ಡಿಎಲ್‌ ರದ್ದು ಪಡಿಸುವ ಎಚ್ಚರಿಕೆ
ಬೆಂಗಳೂರು, ಜೂ.28- ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಪೂರ್ವ ವಿಭಾಗದ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿ 12 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಡ್ರಿಂಕ್ ಅಂಡ್ ಡ್ರೈವ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರಿ ಪೊಲೀಸರು ನಿನ್ನೆ ಫೀಲ್್ಡಗೆ ಇಳಿದು 637 ವಾಹನಗಳನ್ನು ತಪಾಸಣೆ ನಡೆಸಿದ್ದು, ಈ ಪೈಕಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ 12 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ವಾಹನದ ಚಾಲನ ಪರವಾನಗಿಯನ್ನು ರದ್ದು ಪಡಿಸುವುದಾಗಿ ಸಂಚಾರಿ ಪೊಲೀಸರು ಎಚ್ಚರಿಸಿದ್ದಾರೆ.

ವ್ಹೀಲಿಂಗ್‌-ರೇಸಿಂಗ್‌: ದ್ವಿಚಕ್ರ ವಾಹನ ಸವಾರನ ವಿರುದ್ಧ ಎಫ್‌ಐಆರ್
ಬೆಂಗಳೂರು,ಜೂ.28- ಸಾರ್ವಜನಿಕರ ವಾಹನಗಳ ಸುಗಮ ಸಂಚಾರಕ್ಕೆ ಮತ್ತು ಓಡಾಟಕ್ಕೆ ತೊಂದರೆಯಾಗುವಂತೆ ಅಪಾಯಕಾರಿ ರೀತಿಯಲ್ಲಿ ವ್ಹೀಲಿಂಗ್‌ ಮತ್ತು ರೇಸಿಂಗ್‌ ಮಾಡುತ್ತಿದ್ದ ಸವಾರನ ವಿರುದ್ಧ ಬೆಳ್ಳಂದೂರು ಸಂಚಾರ ಪೊಲೀಸ್‌‍ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇಬ್ಬಲೂರಿನ ಆರ್ಮಿ ಕ್ಯಾಂಪ್‌ ಬಳಿಯ ಹೊರವರ್ತುಲ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರ ಆಕಾಶ್‌(21) ಎಂಬಾತ ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ಅಪಾಯಕಾರಿ ರೀತಿಯಲ್ಲಿ ವ್ಹೀಲಿಂಗ್‌ ಅಂಡ್‌ ರೇಸಿಂಗ್‌ ಮಾಡುತ್ತಾ ಇತರೆ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಮಾಡುತ್ತಿದ್ದನು.

ಖಚಿತ ಮಾಹಿತಿ ಮೇರೆಗೆ ಪಿಎಸ್ಐ ರವೀಂದ್ರಕುಮಾರ್ ಮತ್ತು ಸಿಬ್ಬಂದಿ ತನಿಖೆ ಕೈಗೊಂಡು ಸವಾರನನ್ನು ಪತ್ತೆಹಚ್ಚಿ ದ್ವಿಚಕ್ರ ವಾಹನ ಸಮೇತ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದಕ್ಷಿಣ ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತರಾದ ಶಿವಪ್ರಕಾಶ್ ದೇವರಾಜು ಅವರು ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿದ್ದ ವೃದ್ಧ ಸಾವು
ಬೆಂಗಳೂರು, ಜೂ.28- ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಆರ್‌ಟಿ ನಗರ ನಿವಾಸಿ ಮೊಹಮದ್‌ ಫಾರೋಕ್‌ ವಾಲ್ಕಿ(70) ಮೃತಪಟ್ಟವರು.ಹೈಗ್ರೌಂಡ್‌್ಸ ಸಂಚಾರಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಜೂನ್‌ 25ರಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ವಸಂತ ನಗರದ 8ನೇ ಮುಖ್ಯರಸ್ತೆಯ ಅಯ್ಯಪ್ಪ ದೇವಸ್ಥಾನದ ಹಿಂಭಾಗ ಮೊಹಮದ್‌ ಫಾರೋಕ್‌ ರಸ್ತೆ ದಾಟುತ್ತಿದ್ದರು.ಆ ಸಂದರ್ಭದಲ್ಲಿ ಸ್ಕೂಟರ್‌ನಲ್ಲಿ ಬಂದ ಸವಾರ ಪೌಲ್‌ ಆಶೀಸ್‌‍ ಕಟವಟಿ ಎಂಬಾತ ಮೌಂಟ್‌ ಕಾರ್ನಲ್‌ ಕಾಲೇಜ್ ಕಡೆಯಿಂದ ಮಿಲ್ಲಸ್‌‍ ರಸ್ತೆಯ ಕಡೆಗೆ ಬರುತ್ತಿದ್ದಾಗ ಇವರಿಗೆ ಡಿಕ್ಕಿ ಹೊಡೆದು ನಂತರ ಹಾಗೆಯೇ ಮುಂದೆ ಚಲಿಸಿ ರಸ್ತೆ ಬದಿ ಮಾತನಾಡುತ್ತಾ ನಿಂತಿದ್ದ ಪಾದಚಾರಿ ಮೊಹಮದ್‌ ಇಸಾಯಿಲ್‌(26) ಎಂಬುವರಿಗೆ ಡಿಕ್ಕಿ ಹೊಡೆದಿದ್ದಾನೆ.

ಪಾದಚಾರಿಗಳಿಬ್ಬರೂ ಗಂಭೀರ ಗಾಯಗೊಂಡರು. ಮೊಹಮದ್‌ ಇಸಾಯಿಲ್‌ಗೆ ಬಲಗಾಲಿಗೆ ಗಾಯವಾದರೆ ಮೊಹಮದ್‌ ಪಾರೋಕ್‌ ವಾಲ್ಕಿ ಅವರಿಗೆ ತಲೆಗೆ ಪೆಟ್ಟಾಗಿದೆ.ತಕ್ಷಣ ಇವರಿಬ್ಬರನ್ನು ಶೀಫಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೊಹಮದ್‌ ಫಾರೋಕ್‌ ವಾಲ್ಕಿ ಅವರು ನಿನ್ನೆ ಸಂಜೆ 6.30ರ ಸುಮಾರಿನಲ್ಲಿ ಮೃತಪಟ್ಟಿದ್ದಾರೆ.ಮತ್ತೊಬ್ಬ ಗಾಯಾಳು ಮೊಹಮದ್‌ ಇಸಾಯಿಲ್‌ ಚೇತರಿಸಿಕೊಳ್ಳುತ್ತಿದ್ದಾರೆ.ಈ ಬಗ್ಗೆ ಹೈಗ್ರೌಂಡ್ಸ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News