ಬೆಂಗಳೂರು,ಜ.9- ಹೋಂ ಗಾರ್ಡ್‌ನಿಂದ ನಡೆದಿರುವ ತ್ರಿವಳಿ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್… ಆರೋಪಿ ಹೋಂ ಗಾರ್ಡ್ ಕೊಲೆ ಮಾಡಿರುವುದು ಎರಡನೇ ಪತ್ನಿ, ಮಲ ಮಗಳು ಹಾಗೂ ಸಂಬಂಧಿ ಯುವತಿ ಎಂಬುವುದು ತಿಳಿದು ಬಂದಿದೆ. ಕೊಲೆಯಾದ ಭಾಗ್ಯ ಹಾಗೂ ಹೋಂ ಗಾರ್ಡ್ ಗಂಗರಾಜು ಲಿವಿಂಗ್ ಟು ಗೆದರ್‌ನಲ್ಲಿದ್ದರು ಎಂಬುದು ಪೀಣ್ಯ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ನೆಲಮಂಗಲ ಮೂಲದ ಗಂಗರಾಜು ಮೊದಲ ಪತ್ನಿಯನ್ನು ತೊರೆದಿದ್ದ, ಭಾಗ್ಯ ಸಹ ಮೊದಲ ಪತಿಯಿಂದ ದೂರವಾಗಿ ಮಗಳು ನವ್ಯಾ ಜೊತೆ ವಾಸವಾಗಿದ್ದರು.
ಈ ನಡುವೆ ಹೋಂ ಗಾರ್ಡ್ ಕೆಲಸ ಮಾಡುತ್ತಿದ್ದ ಗಂಗರಾಜು ಹಾಗೂ ಗಾರ್ಮೆ ಂಟ್‌್ಸಗೆ ಹೋಗುತ್ತಿದ್ದ ಭಾಗ್ಯ ಅವರ ಪರಿಚಯವಾಗಿ ನಂತರ ಇವರಿಬ್ಬರು ಲಿವಿಂಗ್ ಟು ಗೆದರ್‌ನಲ್ಲಿ
ಜಾಲಹಳ್ಳಿಯ ಚೊಕ್ಕಸಂದ್ರದಲ್ಲಿ ವಾಸವಾಗಿದ್ದರು. ಇವರ ಜೊತೆ ಭಾಗ್ಯ ಅವರ ಮಗಳು ನವ್ಯಾಹಾಗೂ ಅಕ್ಕನ ಮಗಳು ಹೇಮಾವತಿ ಸಹ ಒಟ್ಟಾಗಿ ನೆಲೆಸಿದ್ದರು. ನವ್ಯ ಪದವಿ ವ್ಯಾಸಂಗ ಹಾಗೂ ಹೇಮಾವತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಈ ನಡುವೆ ಭಾಗ್ಯ ಹಾಗೂ ಗಂಗರಾಜು ನಡುವೆ ಮನಸ್ತಾಪವಾಗಿದ್ದು, ಭಾಗ್ಯ ಮೊಬೈಲ್‌ನಲ್ಲೇ ಹೆಚ್ಚಾಗಿ ಮಾತನಾಡುತ್ತಿದ್ದುದರಿಂದ ಮನೆಯಲ್ಲಿ ಆಗಾಗ್ಗೆ ಗಲಾಟೆ ಆಗುತ್ತಿತ್ತು. ಪೋನ್ ಮಾಡಿದಾಗ ಯಾವಾಗಲೂ ಮೊಬೈಲ್ ಎಂಗೇಜ್ ಇರುತ್ತದೆ ಎಂದು ಗಂಗರಾಜು ಕೋಪಗೊಂಡಿದ್ದ. ಭಾಗ್ಯ ಶೀಲದ ಮೇಲೆ ಅನುಮಾನಗೊಂಡ ಗಂಗರಾಜು ನಿನ್ನೆ ಸಂಜೆ 5 ಗಂಟೆ ಸುಮಾರಿನಲ್ಲಿ ಜಗಳವಾಡಿದ್ದಾನೆ. ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದಾಗ ಮಚ್ಚಿನಿಂದ ಭಾಗ್ಯ ಮೇಲೆ ಹಲ್ಲೆ ಮಾಡಿದ್ದಾನೆ.
ಆ ವೇಳೆ ಜಗಳ ಬಿಡಿಸಲು ಮಧ್ಯೆ ಬಂದ ನವ್ಯಾ ಹಾಗೂ ಹೇಮಾವತಿ ಮೇಲೂ ಅದೇ ಮಚ್ಚಿನಿಂದ ಹಲ್ಲೆ ನಡೆಸಿ ಮೂವರನ್ನು ಕೊಲೆ ಮಾಡಿದ್ದಾನೆ. ನಂತರ ಆರೋಪಿಯೇ ಪೊಲೀಸ್ ಕಂಟ್ರೋಲ್ ರೂಂಗೆ ಪೋನ್ ಮಾಡಿ ನಡೆದ ವಿಷಯವನ್ನು ತಿಳಿಸಿದ್ದಲ್ಲದೇ, ಕೊಲೆ ಮಾಡಲು ಬಳಸಿದ್ದ ರಕ್ತಸಿಕ್ತ ಮಚ್ಚನ್ನು ಹಿಡಿದುಕೊಂಡೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈತನನ್ನು ಗಮನಿಸಿದ ದಾರಿ ಹೋಕರು ಹೆದರಿದ್ದಾರೆ.
ಪೊಲೀಸ್ ಠಾಣೆಗೆ ಮಚ್ಚಿನ ಜೊತೆ ಬಂದ ಗಂಗರಾಜನನ್ನು ಪೊಲೀಸರು ವಶಕ್ಕೆ ಪಡೆದು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಮೂವರ ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಇಂದು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಇಂದು ಆರೋಪಿ ಗಂಗರಾಜನನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.