ಬೆಂಗಳೂರು,ಸೆ.25- ಅನ್ಯಕೋಮಿನ ಯುವಕನ ಜೊತೆ ಸಲುಗೆಯಿಂದ ಇದ್ದದ್ದೇ ಮಹಾಲಕ್ಷ್ಮಿ ಕೊಲೆಗೆ ಕಾರಣವಾಯಿತೇ..! ಕೊಲೆ ಪ್ರಕರಣ ದಾಖಲಿಸಿಕೊಂಡಿ ರುವ ವಯ್ಯಾಲಿಕಾವಲ್ ಠಾಣೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಒಂದು ತಂಡ ಹಲವು ಮಾಹಿತಿಗಳನ್ನು ಕಲೆ ಹಾಕುತ್ತಿದೆ.
ತನ್ನ ಪತಿಯಿಂದ ದೂರವಾದ ಮೇಲೆ ವಯ್ಯಾಲಿಕಾವಲ್‌ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಒಂಟಿಯಾಗಿ ವಾಸವಾಗಿದ್ದ ಮಹಾಲಕ್ಷ್ಮಿ ಮಾಲ್‌ವೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅನ್ಯಕೋಮಿನ ಯುವಕ ಸೇರಿದಂತೆ ಮೂವರು ಯುವಕರ ಜೊತೆ ಮಹಾಲಕ್ಷ್ಮಿ ಸ್ನೇಹ ಬೆಳೆಸಿಕೊಂಡಿದ್ದಳು.
ಒಬ್ಬಾತ ಈಕೆಯನ್ನು ಪಿಕಪ್, ಡ್ರಾಪ್ ಮಾಡುತ್ತಿದ್ದನು. ಮತ್ತೊಬ್ಬನ ಜೊತೆ ಸಲುಗೆಯಿಂದ ಇದ್ದಳು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಆಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.ಈ ಕೊಲೆ ಪ್ರಕರಣದಲ್ಲಿ ಆರೋಪಿಯ ಕೆಲವು ಪ್ರಮುಖ ಸಾಕ್ಷ್ಯಾಧಾರಗಳು ಪೊಲೀಸರಿಗೆ ಲಭಿಸಿವೆ. ಮಹಾಲಕ್ಷ್ಮಿ ವಾಸವಾಗಿದ್ದ ಮನೆಯ ಬಾಗಿಲು, ಗೋಡೆ, ಫ್ರಿಡ್‌್ಜ ಮೇಲೆ ಆರೋಪಿಯ ಬೆರಳಚ್ಚು ಪತ್ತೆಯಾಗಿವೆ. ಅವುಗಳನ್ನೆಲ್ಲ ಬೆರಳಚ್ಚು ತಜ್ಞರು ಸಂಗ್ರಹಿಸಿ ಈ ಬಗ್ಗೆ ಉಪಯುಕ್ತ ಮಾಹಿತಿಯನ್ನು ತನಿಖಾಧಿಕಾರಿಗಳಿಗೆ ನೀಡಿದ್ದಾರೆಂಬುದು ಗೊತ್ತಾಗಿದೆ.
ಮಹಾಲಕ್ಷ್ಮಿ ಯನ್ನು ಕೊಲೆ ಮಾಡಿದ ಸಂದರ್ಭದಲ್ಲಿ ಆರೋಪಿ ಗೋಡೆ ಮುಟ್ಟಿರುವುದು, ನಂತರ ದೇಹವನ್ನು ಪೈಶಾಚಿಕವಾಗಿ ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ಜೋಡಿಸುವಾಗ ಫ್ರಿಡ್ಜ್ ನ್ನು ಕೈಗಳಿಂದ ಮುಟ್ಟಿರುವುದರಿಂದ ಆತನ ಬೆರಳು ಮುದ್ರೆಗಳು ಪತ್ತೆಯಾಗಿವೆ.
ವಾರದ ರಜೆ ದಿನವೇ ಕೊಲೆ:
ಸೆಪ್ಟೆಂಬರ್ 2ರಂದು ಮಹಾಲಕ್ಷ್ಮಿಗೆ ವಾರದ ರಜೆ. ಹಾಗಾಗಿ ಆಕೆ ಮಾಲ್‌ಗೆ ಹೋಗಿರಲಿಲ್ಲ. ಸೆ.3ರಿಂದಲೂ ಸಹ ಕೆಲಸಕ್ಕೆ ಹೋಗಿರಲಿಲ್ಲ. ಹಾಗಾಗಿ ದುಷ್ಕರ್ಮಿ ಆಕೆಯನ್ನು ಸೆ.2ರಂದೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂಬುದು ಇದುವರೆಗಿನ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಆರೋಪಿ ಮಹಾಲಕ್ಷ್ಮಿಯನ್ನು ಭೀಕರವಾಗಿ ಕೊಲೆ ಮಾಡಿ ದೇಹವನ್ನು ತುಂಡಾಗಿ ಕತ್ತರಿಸಿ ಅವುಗಳಿಗೆಲ್ಲ ಯಾವುದೋ ರಾಸಾಯನಿಕ ಸಿಂಪಡಿಸಿ, ಮನೆಯನ್ನೆಲ್ಲ ಸ್ವಚ್ಚಗೊಳಿಸಿ ಯಾರಿಗೂ ಅನುಮಾನ ಬಾರದಂತೆ ಮನೆಗೆ ಬೀಗಿ ಹಾಕಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ತದನಂತರ ತನ್ನ ಅಣ್ಣನಿಗೆ ನಡೆದ ವಿಷಯವನ್ನು ತಿಳಿಸಿ ಊರಿಗೆ ಹೋಗುವುದಾಗಿ ಹೇಳಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಊರಿಗೂ ಹೋಗದೆ ಈಶಾನ್ಯ ರಾಜ್ಯಗಳಿಗೆ ಹೋಗಿ ತಲೆಮರೆಸಿಕೊಂಡಿದ್ದಾನೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಚಿಸಲಾಗಿದ್ದ ಆರು ವಿಶೇಷ ತಂಡಗಳ ಪೈಕಿ ಒಂದು ತಂಡ ಪಶ್ಚಿಮ ಬಂಗಾಳಕ್ಕೆ ಹೋಗಿ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರೆ ಮತ್ತೊಂದು ತಂಡ ಒರಿಸ್ಸಾಗೆ ಹೋಗಿ ಶೋಧ ನಡೆಸುತ್ತಿದೆ.
ಆರೋಪಿ ಆಗಾಗ ಸ್ಥಳ ಬದಲಾವಣೆ ಮಾಡುತ್ತಿರುವುದಲ್ಲದೆ, ಮೊಬೈಲ್ ಬಳಸುತ್ತಿಲ್ಲ. ಬೇರೆಯವರ ಮೊಬೈಲ್‌ನಿಂದ ತನ್ನ ಕುಟುಂಬವನ್ನು ಸಂಪರ್ಕಿಸುತ್ತಿದ್ದಾನೆ. ಹಾಗಾಗಿ ಈತನ ಬಂಧನ ಕಾರ್ಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಒಟ್ಟಾರೆ ಈ ಪ್ರಕರಣವನ್ನು ಸವಾಲಾಗಿ ಪರಿಗಣಿಸಿರುವ ನಗರ ಪೊಲೀಸರು ಶತಾಯಗತಾಯ ದುಷ್ಕರ್ಮಿಯನ್ನು ಬಂಧಿಸಲು ಹಗರಲಿರುಳು ಶ್ರಮಿಸುತ್ತಿದ್ದಾರೆ.