ಬೆಂಗಳೂರು,ಸೆ.11-ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಿರುವ ಘಟನೆ ತಿಲಕ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ನಕಲು ಬಂಡೆಯ ನಿವಾಸಿ ಕಿರಣ್ (20) ಕೊಲೆಯಾದ ಯುವಕ. ಆರೋಪಿ ಜೀವನ್ ಪರಾರಿಯಾಗಿದ್ದು, ಪೊಲೀಸರು ಶೋಧ ಕೈಗೊಂಡಿದ್ದಾರೆ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಜೊತೆ ಜೀವನ್ ಯುವತಿ ವಿಚಾರಕ್ಕೆ ರಾತ್ರಿ 10 ಗಂಟೆ ಸುಮಾರಿನಲ್ಲಿ ನಕಲುಬಂಡೆ ಬಳಿ ಜಗಳವಾಡಿದ್ದಾನೆ. ಇವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದಾಗ ಜೀವನ್ ಚಾಕುವಿನಿಂದ ಕಿರಣ್ ಎದೆಗೆ ಬಲವಾಗಿ ಇರಿದು ಪರಾರಿಯಾಗಿದ್ದಾನೆ.
ಇರಿತದಿಂದ ತೀವ್ರ ರಕ್ತಸೋರಿಕೆಯಿಂದ ಕುಸಿದು ಬಿದ್ದಿದ್ದ ಕಿರಣ್‌ನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.ಸುದ್ದಿ ತಿಳಿದು ತಿಲಕ್‌ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.