ನವದೆಹಲಿ, ಫೆ. 27: ಭಾರತದ ಆರ್ಥಿಕತೆ ಮತ್ತು ಷೇರು ಮಾರುಕಟ್ಟೆಯ ಬೆಳವಣಿಗೆ ಬಗ್ಗೆ ಅಂತಾರಾಷ್ಟ್ರೀಯ ಸಂಸ್ಥೆಗಳು ಸಕಾರಾತ್ಮಕ ಭಾವನೆ ವ್ಯಕ್ತಪಡಿಸಿವೆ. ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ತಮಗೇನೂ ಚಿಂತೆ ಇಲ್ಲ ಎಂದು ವಿಶ್ವಬ್ಯಾಂಕ್ ಹೇಳಿದೆ. ಅಡ್ವಾಂಟೇಜ್ ಅಸ್ಸಾ ಹೂಡಿಕೆ ಸಮಾವೇಶದಲ್ಲಿ ಮಾತನಾಡುತ್ತಿದ್ದ ವಿಶ್ವಬ್ಯಾಂಕ್‌ನ ಆಗಸ್ಟ್ ಟಾನೋ ಕೌವಾಮೆ ಅವರು ಭಾರತದ ಷೇರು ಮಾರುಕಟ್ಟೆ ಮತ್ತೆ ಗುಟುರು ಹಾಕಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಒಂದು ಪ್ರತಿಶತ ಅಂಕ ಕಡಿಮೆ ಆಗಿದ್ದರಿಂದ ವಿಶ್ವಬ್ಯಾಂಕ್‌ಗೆ ಭಾರತದ ಜಿಡಿಪಿ ವೃದ್ಧಿ ದರದ ಬಗ್ಗೆ ನಿರೀಕ್ಷೆ ಕಡಿಮೆ ಆಗೋದಿಲ್ಲ. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಮುಂದೆಯೂ ಈ ನಿರೀಕ್ಷೆ ಮುಂದುವರಿಯುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾಳೆ ಮೂರನೇ ತ್ರೈಮಾಸಿಕ (ಅಕ್ಟೋಬರ್‌ನಿಂದ ಡಿಸೆಂಬರ್ ವರೆಗೆ) ಅವಧಿಯ ಜಿಡಿಪಿ ದತ್ತಾಂಶ ಪ್ರಕಟವಾಗಲಿದೆ. ಹಲವು ವಿಶ್ಲೇಷಕರು ಜಿಡಿಪಿ ದರ ಶೇ 5.8ರಿಂದ ಶೇ. 6.5ರ ಶ್ರೇಣಿಯಲ್ಲಿ ಇರಬಹುದು ಎಂದು ಅಂದಾಜಿಸಿದ್ದಾರೆ.
ನೊಮೊರಾ ಏಜೆನ್ಸಿ ಶೇ. 5.8ರ ಸಾಧ್ಯತೆಯನ್ನು ತಿಳಿಸಿದೆ. ಇಂಡಿಯಾ ರೇಟಿಂಗ್ಸ್ ಸಂಸ್ಥೆ ಅತಿಹೆಚ್ಚು ಆಶಾದಾಯಕವಾಗಿದ್ದು, ಮೂರನೇ ಕ್ವಾರ್ಟ‌್ರನಲ್ಲಿ. ಆರ್ಥಿಕತೆ ಶೇ. 6.5ರಷ್ಟು ಬೆಳೆಯಬಹುದು ಎಂದು ನಿರೀಕ್ಷಿಸಿದೆ. ಭಾರತದ ಷೇರು ಮಾರುಕಟ್ಟೆ ಸತತ ಐದನೇ ತಿಂಗಳು ಹಿನ್ನಡೆ ಕಾಣುತ್ತಿದೆ. ಕಳೆದ ಎರಡು ಮೂರು ದಶಕಗಳಲ್ಲೇ ಇಷ್ಟು ಸುದೀರ್ಘ ಅವಧಿಯ ಹಿನ್ನಡೆ ಆಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ವಿದೇಶೀ ಹೂಡಿಕೆದಾರರು ಸತತವಾಗಿ ನಿರ್ಗಮಿಸುತ್ತಿರುವುದು ಈ ಕುಸಿತಕ್ಕೆ ಕಾರಣ. ಆದರೆ, ಭಾರತದ ಮಾರುಕಟ್ಟೆ ಬಗ್ಗೆ ವಿದೇಶೀ ವಿಶ್ಲೇಷಕರ ನಿರೀಕ್ಷೆ ಇನ್ನೂ ಕಡಿಮೆ ಆಗಿಲ್ಲ ಎನ್ನುವುದು ಗಮನಾರ್ಹ.
ಸಿಟಿ, ಜೆಫರೀಸ್ ಮೊದಲಾದ ಏಜೆನ್ಸಿ ಗಳು ಭಾರತೀಯ ಮಾರುಕಟ್ಟೆ ಬಗ್ಗೆ ಈಗಲೂ ಆಶಾದಾಯಕವಾಗಿವೆ. ಸಿಟಿ ಸಂಸ್ಥೆಯಂತೂ ತನ್ನ ನಿರೀಕ್ಷೆ ಹೆಚ್ಚಿಸಿಕೊಂಡಿದ್ದು, ಭಾರತದ ಷೇರು ಮಾರುಕಟ್ಟೆಗೆ ಓವರ್ ವೇಟ್ ಗ್ರೇಡಿಂಗ್ ಕೊಟ್ಟಿದೆ. ಓವರ್‌ವೇಟ್ ರೇಟಿಂಗ್ ಇದ್ದರೆ, ಅದು ಬೆಳವಣಿಗೆ ಕಾಣಬಲ್ಲ ಶಕ್ತಿ ಇರುವ ಮಾರುಕಟ್ಟೆ ಎಂದು ಭಾವಿಸಬಹುದು.