ಬೆಂಗಳೂರು,ಆ.9– ತಾನು ಕೆಲಸ ಮಾಡುತ್ತಿದ್ದ ಮನೆ ಮಾಲೀಕರ ಕಣ್ತಪ್ಪಿಸಿ ಆಭರಣ ಕಳ್ಳತನ ಮಾಡಿ ಜಾತ್ರೆಯಲ್ಲಿ ನೆಕ್‌ಲೇಸ್ ಧರಿಸಿದ್ದ ಫೋಟೋ ವನ್ನು ವಾಟ್ಸ್ ಆ್ಯಪ್ ಡಿಪಿಗೆ ಹಾಕಿಕೊಂಡಿದ್ದ ಮಹಿಳೆ ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ಹಗರಿಬೊಮನಹಳ್ಳಿಯ ಕಡ್ಲೆಬಾಳು ನಿವಾಸಿ ರೇಣುಕ ಬಂಧಿತ ಮನೆಗೆಲಸದಾಕೆ. ಈಕೆಯಿಂದ 5ಲಕ್ಷ ಮೌಲ್ಯದ 80 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಮಾರತ್ಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿರುವ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ರೇಣುಕಾ ಮಾಲೀಕರ ಕಣ್ತಪ್ಪಿಸಿ ಕಬೋರ್ಡ್‌ನಲ್ಲಿಟ್ಟಿದ್ದ ಆಭರಣವಿದ್ದ ಬ್ಯಾಗ್‌ನ್ನು ಕಳ್ಳತನ ಮಾಡಿದ್ದಾಳೆ.
ಕೆಲ ದಿನಗಳ ನಂತರ ಮಾಲೀಕರು ನೋಡಿದಾಗ ಆಭರಣ ನಾಪತ್ತೆಯಾಗಿರುವುದು ಕಂಡು ಕೆಲಸ ಮಾಡುತ್ತಿದ್ದ ನಾಲ್ವರು ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕೆಲಸ ಮಾಡುತ್ತಿದ್ದ ನಾಲ್ವರು ಕೆಲಸಗಾರರನ್ನು ಠಾಣೆಗೆ ಕರೆಸಿಕೊಡು ವಿಚಾರಣೆ ಮಾಡಿದಾಗ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.
ಹಲವಾರು ತಿಂಗಳು ಕಳೆದ ನಂತರ, ಇವರ ಮನೆಯ ಕೆಲಸದಾಕೆ ರೇಣುಕಾ ನೆಕ್ಲೆಸ್ ಧರಿಸಿಕೊಂಡು ಫೋಟೋ ತೆಗೆಸಿ ಅದನ್ನು ತನ್ನ ವಾಟ್ಸಾಪ್ ಡಿಪಿಗೆ ಹಾಕಿಕೊಂಡಿದ್ದಳು. ಇದನ್ನು ಗಮನಿಸಿದ ಮನೆ ಮಾಲೀಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾರತ್ತಹಳ್ಳಿಯ ಮುನೆಕೊಳಲು ಮನೆಯಿಂದ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಆಭರಣ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ.
ಆಕೆಯ ಹೇಳಿಕೆ ಮೇರೆಗೆ ಕಳುವು ಮಾಡಿದ ಎರಡು ಪ್ರಕರಣಗಳಿಂದ ಒಟ್ಟು 80 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಇವುಗಳ ಒಟ್ಟು ಮೌಲ್ಯ 5 ಲಕ್ಷ ರೂ.ಗಳಾಗಿವೆ. ಇನ್‌ಸ್ಪೆಕ್ಟರ್ ಅಜರುದ್ದೀನ್ ಮತ್ತು ಸಿಬ್ಬಂದಿ ತಂಡ ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.