ನವದೆಹಲಿ,ಜ.25- ದೇಶದ ಉದ್ಯಮಕ್ಕೆ ಹೊಸ ಚೈತನ್ಯ ನೀಡಿದ್ದ ಉದ್ಯಮಿ ರತನ್ ಟಾಟಾ, ಭಾರತದ ಆರ್ಥಿಕತೆಗೆ ಹೊಸ ವಾಖ್ಯಾನ ಬರೆದ ಮಾಜಿ ಪ್ರಧಾನಿ ಡಾ.ಮನಮೋಹನ್‌ಸಿಂಗ್ ಸೇರಿದಂತೆ ನಾಳೆ ಭಾರತ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಪ್ರಕಟಿಸುವ ಸಾಧ್ಯತೆ ಇದೆ. ದೇಶಕ್ಕೆ ಸಲ್ಲಿಸಿರುವ ಅಪ್ರತಿಮ ಸೇವೆಯನ್ನು ಪರಿಗಣಿಸಿ ಈ ಇಬ್ಬರು ಮಹನೀಯರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಭಾರತ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಘೋಷಿಸುವ ಸಂಭವವಿದೆ.
ಒಂದು ಮೂಲದ ಪ್ರಕಾರ ಕಟ್ಟಾ ಹಿಂದುತ್ವವಾದಿಯಾಗಿದ್ದ ವೀರ್ ಸಾವರ್ಕರ್‌ಗೂ ಭಾರತ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಲಿದೆ ಎಂದು ತಿಳಿದುಬಂದಿದೆ. ನಾಳೆ ದೇಶದ 76ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರತನ್ ಟಾಟಾ ಹಾಗೂ ಡಾ.ಮನಮೋಹನ್ ಸಿಂಗ್ ಸೇರಿದಂತೆ ಹಲವು ಗಣ್ಯರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿಯನ್ನು ನೀಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಇಬ್ಬರಿಗೂ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಹಲವಾರು ಗಣ್ಯರು ಹಾಗೂ ಅನೇಕ ರಾಜ್ಯಗಳ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿತ್ತು. ತಮ ಜೀವಿತ ಅವಧಿಯವರೆಗೂ ರಾಷ್ಟ್ರ ಸೇವೆಯೇ ತನ್ನ ಸೇವೆ ಎಂದು ಪರಿಭಾವಿಸಿ ದೇಶ ಸೇವೆಗೆ ಜೀವನ ಮುಡುಪಾಗಿಟ್ಟು ಲಕ್ಷಾಂತರ ಯುವಕರಿಗೆ ಉದ್ಯೋಗದಾತರಾಗಿದ್ದ ರತನ್ ಟಾಟಾಗೆ ಭಾರತ ರತ್ನ ಲಭಿಸುವ ಸಂಭವವಿದೆ.
ಅವರ ಜೀವಿತ ಅವಧಿಯಲ್ಲೇ ಭಾರತ ರತ್ನವನ್ನು ಕೇಂದ್ರ ಸರ್ಕಾರ ಮಾಡಬೇಕೆಂಬ ಬೇಡಿಕೆ ಕೇಳಿಬಂದಿತ್ತು. ಇನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಈಗಾಗಲೇ ದೇಶದ 2ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ ವಿಭೂಷಣ ಲಭಿಸಿರುವುದರಿಂದ ಅವರಿಗೂ ಭಾರತ ರತ್ನ ಪ್ರಶಸ್ತಿ ಘೋಷಣೆಯಾಗುವುದು ಖಚಿತವಾಗಿದೆ. ರಾಷ್ಟ್ರಪಿತ ಮಹಾತ ಗಾಂಧಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ನಂತರ ನ್ಯಾಯಾಲಯದಿಂದ ಕ್ಲೀನ್‌ಚಿಟ್ ಪಡೆದಿದ್ದ ಕಟ್ಟಾ ಹಿಂದುತ್ವವಾದಿ ವೀರ್ ಸಾರ್ವಕರ್‌ಗೂ ಪ್ರಶಸ್ತಿ ಕೊಡಬೇಕೆಂದು ಹಿಂದುತ್ವವಾದಿಗಳ ಬೇಡಿಕೆಯಾಗಿತ್ತು.
ಈ ಮೂವರ ಜೊತೆಗೆ ಕರ್ನಾಟಕದ ಶತಾಯುಷಿ, ತ್ರಿವಿದ ದಾಸೋಹಿ ತುಮಕೂರು ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿಗೂ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕೆಂಬ ಬೇಡಿಕೆಯೂ ಹಲವು ವರ್ಷಗಳಿಂದ ಇದೆ. ಶ್ರೀ ಶಿವಕುಮಾರ ಸ್ವಾಮೀಜಿಗಳ ಪುಣಸರಣೆಯಂದೇ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಭಕ್ತರು ಆಗ್ರಹಿಸಿದ್ದರು.