ಬೇಲೂರು, ಮಾ.20- ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಾಡಾನೆಯೊಂದು ಕೂಲಿ ಕಾರ್ಮಿಕರನ್ನು ಅಟ್ಟಾಡಿಸಿದ್ದು, ಕಾರ್ಮಿಕರು ಜೀವ ಭಯದಿಂದ ಓಡಿದ ಘಟನೆ ತಾಲೂಕಿನ ಬಕ್ರವಳ್ಳಿ ಗ್ರಾಮದಲ್ಲಿ ನಡೆದಿದ್ದು, ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಬೆಳೆಗಾರರು, ರೈತರು ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಬಿಕ್ಕೋಡು ಹಾಗೂ ಅರೇಹಳ್ಳಿ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಏಳೆಂಟು ತಿಂಗಳಿಂದ ಬೀಡು ಬಿಟ್ಟಿರುವ 90ಕ್ಕೂ ಹೆಚ್ಚು ಕಾಡಾನೆಗಳ ಹಿಂಡಿನ ಉಪಟಳ ಹೇಳ ತೀರದಾಗಿದೆ.
ವಿವಿಧ ಗ್ರಾಮಗಳ ತೋಟಗಳಲ್ಲಿ ಕಾಫಿ, ಅಡಿಕೆ, ಜೋಳದ ಬೆಳೆಗಳನ್ನು ನಾಶ ಪಡಿಸುತ್ತಿದ್ದ ಕಾಡಾನೆಗಳು ಇತ್ತೀಚಿನ ದಿನಗಳಲ್ಲಿ ಮನುಷ್ಯರನ್ನು ಅಟ್ಟಾಡಿಸಿ ಬಲಿ ಪಡೆಯುತ್ತಿವೆ. ಕಾಡಾನೆಗಳು ಆಹಾರ ಅರಸಿ ದಿನದಿಂದ ದಿನಕ್ಕೆ ಒಂದು ಊರಿನಿಂದ ಮತ್ತೊಂದು ಊರಿಗೆ ಹಿಂಡಿನಲ್ಲಿ ತೆರಳುತ್ತಿರುವುದರಿಂದ ರೈತರು ಸಾಕಷ್ಟು ಬೆಳೆನಷ್ಟ ಅನುಭವಿಸುವಂತಾಗಿರುವುದಲ್ಲದೆ ಸಾರ್ವಜನಿಕರು, ಕೂಲಿ ಕಾರ್ಮಿಕರು ಜೀವ ಭಯದಲ್ಲಿ ಓಡಾಡುವಂತಾಗಿದೆ.
ಆದರೆ, ಕಾಡಾನೆ ಸೆರೆ ಕಾರ್ಯಚರಣೆ ನಡೆಯುತ್ತಿರುವ ಕಾನನಹಳ್ಳಿ ಸ್ಥಳದಿಂದ ಕೇವಲ ಮೂರೇ ಕಿಲೋ ಮೀಟರ್ ದೂರದಲ್ಲಿರುವ ಮಲಸಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಕ್ರವಳ್ಳಿ ಗ್ರಾಮದ ಕಾಫಿತೋಟದ ಸಮೀಪ ದೈತ್ಯಾಕಾರದ ಭೀಮ ಹೆಸರಿನ ಒಂಟಿ ಕಾಡಾನೆ ಕಾಣಿಸಿಕೊಂಡು ಆತಂಕ ಮೂಡಿಸಿತ್ತು.
ಇತ್ತೀಚಿನ ದಿನಗಳಲ್ಲಿ ಬೇರೆ ಕಾಡಾನೆಯೊಂದಿಗೆ ಸೇರಿ ಮನುಷ್ಯರನ್ನು ಕಂಡರೆ ದಾಳಿ ಮಾಡಲು ಮುಂದಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದ್ದು, ಅದೃಷ್ಟವಶಾತ್ ಇಂದಿನ ಘಟನೆಯಲ್ಲಿ ಯಾವುದೇ ಅವಘಡ ಸಂಭವಿಸದಿರುವುದು ಸಂತೋಷದ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಮಲೆನಾಡು ಭಾಗದ ಜನರು ಸಾಕಷ್ಟು ಎಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ದೈತ್ಯಗಾತ್ರದ ಭೀಮಾ ಆನೆಯ ಬಗ್ಗೆಯೂ ಹೆಚ್ಚಿನ ಗಮನ ಹರಿಸಿ ಯಾವುದೇಅನಾಹುತವಾಗದಂತೆ ಕ್ರಮ ಕೈಗೊಳ್ಳಬೇಕಿದೆ.
ಸಾರ್ವಜನಿಕರು, ಕೂಲಿ ಕಾರ್ಮಿಕರು, ರೈತರು, ಬೆಳೆಗಾರರು, ಅರಣ್ಯ ಇಲಾಖೆ ಅಧಿ ಕಾರಿಗಳು ಮುಂದಿನ ದಿನಗಳಲ್ಲಿ ಈ ಆನೆಯ ಬಗ್ಗೆಯೂಎಚ್ಚರ ವಹಿಸುವುದು ಅತ್ಯವಶ್ಯಕವಾಗಿದ್ದು, ಯಾವುದೇ ಅವಘಡ ಸಂಭವಿಸುವುದಕ್ಕಿಂತ ಮುಂಚೆ ಈ ಭೀಮಾ ಆನೆಯನ್ನೂ ಸಹ ಹಿಡಿದು ಬೇರೆಡೆಗೆ ಸಾಗಿಸುವುದು ಅಥವಾ ದೂರದ ಕಾಡಿಗೆ ಓಡಿಸುವುದಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ ಎಂದು ಅರ್ಬನ್ ಬ್ಯಾಂಕ್ ನಿರ್ದೇಶಕ ತಾರಾನಾಥ್ ಅವರು ಪ್ರತಿಕ್ರಿಯಿಸಿದ್ದಾರೆ.