Friday, November 22, 2024
Homeರಾಜ್ಯವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ದೇವಿ ಪ್ರತಿಮೆ ಸ್ಥಾಪನೆಗೆ ಭೂಮಿ ಪೂಜೆ

ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ದೇವಿ ಪ್ರತಿಮೆ ಸ್ಥಾಪನೆಗೆ ಭೂಮಿ ಪೂಜೆ

ಬೆಂಗಳೂರು,ಜೂ.20- ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಧಾನಸೌಧದ ಆವರಣದಲ್ಲಿ ನಿರ್ಮಿಸುತ್ತಿರುವ ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆ ಸ್ಥಾಪನೆಯ ಭೂಮಿ ಪೂಜೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ನೆರವೇರಿಸಿದರು.ಬಳಿಕ ಮಾತನಾಡಿದ ಅವರು, ನ.24 ರಂದು ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಲಾಗುವುದು. ಪ್ರತಿಮೆ ನಿರ್ಮಾಣಕ್ಕೆ ಯಾವುದೇ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿ ಪ್ರತಿಮೆ ನಿರ್ಮಾಣ ಆಗುತ್ತಿರುವುದು ಒಳ್ಳೆಯದು. 25 ಅಡಿ ಎತ್ತರದ ಕಂಚಿನ ಪ್ರತಿಮೆ ಇದಾಗಿದ್ದು, ಈ ಪ್ರತಿಮೆ ಶಾಶ್ವತವಾಗಿ ಇರಬೇಕು. ಸುಂದರವಾಗಿ ಮೂಡಿಬರಬೇಕು. ಇದರ ಆಕರ್ಷಣೆ ಇಮಡಿಗೊಳ್ಳಬೇಕು ಎಂದು ಹೇಳಿದರು.

ಕರ್ನಾಟಕವೆಂದು ನಾಮಕರಣಗೊಂಡು 50 ವರ್ಷ ತುಂಬಿದ ಸಂದರ್ಭದಲ್ಲಿ ಕರ್ನಾಟಕ ಸಂಭ್ರಮ ಕಾರ್ಯಕ್ರಮವನ್ನು ಮಾಡಿದ್ದೇವೆ. ಹೆಸರಾಯಿತು ಕನ್ನಡ, ಉಸಿರಾಗಲಿ ಕನ್ನಡ ಮಾಡಿದ್ದೇವೆ. ಇಡೀ ವರ್ಷ ಕನ್ನಡ ಕಾರ್ಯಕ್ರಮವನ್ನು ಮಾಡಿದ್ದೇವೆ. ಕಳೆದ ವರ್ಷ ನವೆಂಬರ್‌ನಲ್ಲಿ ಹಂಪಿಯಿಂದ ಈ ಕಾರ್ಯಕ್ರಮ ಪ್ರಾರಂಭವಾಗಿತ್ತು ಎಂದರು.

ದೇವರಾಜು ಅರಸುರವರು ಮುಖ್ಯಮಂತ್ರಿಯಾಗಿದ್ದಾಗ 1973 ರಲ್ಲಿ ಕರ್ನಾಟಕವೆಂದು ನಾಮಕರಣ ಮಾಡಲಾಯಿತು. ಕರ್ನಾಟಕ ಏಕೀಕರಣಕ್ಕೂ ಮುನ್ನ ತಾಯಿ ಭುವನೇಶ್ವರಿ ಪೂಜೆಯನ್ನು ಮಾಡಲಾಗುತ್ತಿತ್ತು. ರಾಜಮಹಾರಾಜರೂ ಕೂಡ ಮಾಡುತ್ತಿದ್ದರು ಎಂದು ಅವರು ಹೇಳಿದರು.

ಕನ್ನಡ ನೆಲ, ಜಲ, ಭಾಷೆ ಉಳಿಸಿಕೊಂಡು ಬರುತ್ತಿದ್ದೇವೆ. ರಾಜ್ಯದಲ್ಲಿ ಕನ್ನಡದ ವಾತಾವರಣ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಕನ್ನಡದಲ್ಲೇ ಮಾತನಾಡಬೇಕು. ಬೇರೆ ಭಾಷೆಯವರು ಇಲ್ಲಿ ನೆಲೆಸಿದ್ದಾರೆ. ಅವರೂ ಕೂಡ ಕನ್ನಡವನ್ನು ಕಲಿತು ಮಾತನಾಡಬೇಕು. ಎಲ್ಲರಿಗೂ ಕನ್ನಡವನ್ನು ಕಲಿಸಬೇಕು. ಬೇರೆ ರಾಜ್ಯಗಳಲ್ಲಿ ಇಲ್ಲಿನ ರೀತಿ ಇಲ್ಲ. ಅಲ್ಲಿ ಆಯಾ ರಾಜ್ಯದ ಭಾಷೆಯನ್ನು ಕಲಿಯಬೇಕಾಗಿದೆ. ನಾವು ದುರಭಿಮಾನಿಗಳಲ್ಲ. ಆದರೆ ಕನ್ನಡದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಕನ್ನಡ ನಾಡು-ನುಡಿ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಹೊಂದಿದಾಗ ಮಾತ್ರ ಕನ್ನಡ ಉಳಿಯಲಿದೆ ಎಂದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಆಡಳಿತದಲ್ಲಿ ಕನ್ನಡ ಕಡ್ಡಾಯ ಕಾನೂನು ತಂದವರು ನಾವು. ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿಯ ಕಂಚಿನ ಪ್ರತಿಮೆ ನಿರ್ಮಾಣ ಮಾಡಲು ಇಂದು ಭೂಮಿ ಪೂಜೆ ನೆರವೇರಿಸಿದ್ದೇವೆ. ಕನ್ನಡದ ಉಸಿರು ಉಳಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಮಾತನಾಡಿ, ನಾಡದೇವಿ ಭುವನೇಶ್ವರಿ ಪ್ರತಿಮೆ ನಿರ್ಮಾಣವಾಗಬೇಕೆಂಬುದು ಎಲ್ಲರ ಆಶಯವಾಗಿತ್ತು. ಮುಂದಿನ ನ.1 ಕ್ಕೆ ಪ್ರತಿಮೆ ಪೂರ್ಣಗೊಳಿಸುತ್ತೇವೆ. ಕರ್ನಾಟಕ ನಾಮಕರಣಗೊಂಡು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಾಡು-ನುಡಿ ಕುರಿತಂತೆ ರಾಜ್ಯದಲ್ಲಿ ಹಲವು ಕಾರ್ಯಕ್ರಮ ಹಮಿಕೊಂಡಿದ್ದೇವೆ. ಸರ್ಕಾರ ಕನ್ನಡ ನೆಲ-ಜಲ-ಭಾಷೆ ಬಗ್ಗೆ ಒತ್ತು ನೀಡಿದೆ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಎಚ್‌.ಕೆ.ಪಾಟೀಲ್‌, ಡಾ.ಎಂ.ಸಿ.ಸುಧಾಕರ್‌, ಕೆ.ಎನ್‌.ರಾಜಣ್ಣ, ಸತೀಶ್‌ ಜಾರಕಿಹೊಳಿ ಸೆೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

RELATED ARTICLES

Latest News