ಹೈದರಾಬಾದ್,ಜ.17– ಕರ್ನಾಟಕವನ್ನು ಬೆಚ್ಚಿ ಬೀಳುವಂತೆ ಮಾಡಿದ್ದ, ಬೀದರ್‌ನಲ್ಲಿ ಎಟಿಎಂಗೆ ಹಣ ತೆಗೆದುಕೊಂಡು ಹೋಗುವ ವೇಳೆ ಒಬ್ಬನನ್ನು ಹತ್ಯೆಗೈದು ದರೋಡೆ ಮಾಡಿದ್ದ ದುಷ್ಕರ್ಮಿಗಳನ್ನು ಹೈದರಾಬಾದ್‌ನಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಸದ್ಯ ಪೊಲೀಸರ ವಶದಲ್ಲಿರುವ ಆರೋಪಿಗಳು ಬೀದರ್‌ನಲ್ಲಿ ನಡೆದ ದರೋಡೆಗೆ ಸಂಬಂಧಪಟ್ಟಿದ್ದಾರೆಯೇ? ಎಂಬುದು ದೃಢಪಟ್ಟಿಲ್ಲ. ಪೊಲೀಸರು ದುಷ್ಕರ್ಮಿಗಳನ್ನು ವಿಚಾರಣೆಗೊಳಪಡಿಸಿದ್ದು, ನಂತರ ಸತ್ಯಾಂಶ ಹೊರಬೀಳಲಿದೆ.
ಬೀದರ್‌ನಲ್ಲಿ ನಿನ್ನೆ ಬೆಳಗ್ಗೆ 10 ಗಂಟೆಗೆ ಎಟಿಎಂಗೆ ಹಣ ತುಂಬಲು ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ನುಗ್ಗಿದ ದರೋಡೆಕೋರರು ಹಣವಿದ್ದ ಬಾಕ್‌್ಸ ಅನ್ನು ಹೊತ್ತೊಯ್ದಿದ್ದರು. ಈ ವೇಳೆಗೆ ಒಬ್ಬ ಭದ್ರತಾ ಸಿಬ್ಬಂದಿಯನ್ನು ಗುಂಡು ಹಾರಿಸಿ ಹತ್ಯೆಗೈಯ್ದಿದ್ದರೆ, ಮತ್ತೊಬ್ಬನ ಮೇಲೂ ಗುಂಡು ಹಾರಿಸಿದ್ದು, ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಣ ದೋಚಿದ ದರೋಡೆಕೋರರು ಬೀದರ್‌ನಿಂದ ಹೈದರಾಬಾದ್‌ಗೆ ತೆರಳಿ ಅಲ್ಲಿಂದ ಛತ್ತೀಸ್‌ಘಡದ ರಾಜಧಾನಿ ರಾಯಪುರಕ್ಕೆ ತೆರಳಲು ಸಜ್ಜಾಗಿದ್ದರು. ಇವರ ಜಾಡು ಹಿಡಿದು ಬೀದರ್‌ನ ಪೊಲೀಸರ ತಂಡ ಹೈದರಾಬಾದ್‌ಗೆ ತೆರಳಿತು.
ರಾತ್ರಿ ಹೈದರಾಬಾದ್‌ನಿಂದ ರೋಷನ್ ಟ್ರಾವೆಲ್‌್ಸನಲ್ಲಿ ರಾಯಪುರಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿಸಿದ್ದರು. ಈ ವೇಳೆ ಅವರು ದೊಡ್ಡ ಗಾತ್ರದ ಬ್ಯಾಗ್ ಹಿಡಿದುಕೊಂಡು ಬಸ್ ಹತ್ತಲು ಮುಂದಾದಾಗ ಅನುಮಾನಗೊಂಡ ಟ್ರಾವೆಲ್‌್ಸ ಮ್ಯಾನೇಜರ್ ಪರಿಶೀಲನೆಗೆ ಮುಂದಾದರು.
ಇದರಿಂದ ಗಲಿಬಿಲಿಗೊಂಡ ದರೋಡೆಕೋರರು ಟ್ರಾವೆಲ್ಸ್ ಮ್ಯಾನೇಜರ್ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಇದರ ಸುಳಿವು ಅರಿತಿದ್ದ ಪೊಲೀಸರು ತಲೆಮರೆಸಿಕೊಳ್ಳಲು ಯತ್ನಿಸಿದ ಒಬ್ಬ ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ.
ಇಬ್ಬರು ತಲೆಮರೆಸಿಕೊಂಡಿದ್ದು, ಹೈದರಾಬಾದ್‌ನಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಪೊಲೀಸ್ ವಶದಲ್ಲಿರುವ ಆರೋಪಿಯನ್ನು ಬೀದರ್‌ಗೆ ಕರೆತರಲಾಗಿದ್ದು, ದರೋಡೆ ಪ್ರಕರಣಕ್ಕೂ ಇವರಿಗೂ ಸಂಬಂಧವಿತ್ತೇ ಎಂಬುದು ಗೊತ್ತಾಗಲಿದೆ.
ಹೈದರಾಬಾದ್‌ನಿಂದ ರಾಯಪುರಕ್ಕೆ ಹೊರಟ ವೇಳೆ ಟ್ರಾವೆಲ್‌್ಸ ಮ್ಯಾನೇಜರ್ ಬ್ಯಾಗ್‌ನ್ನು ತಪಾಸಣೆ ನಡೆಸಬೇಕೆಂದು ಸೂಚಿಸಿದಾಗ ದರೋಡೆಕೋರರು ಆತನ ಜೊತೆ ಜಗಳ ತೆಗೆದಿದ್ದರಿಂದಲೇ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಮ್ಯಾನೇಜರ್ ಜೊತೆ ಮಾತಿನ ಚಕಮಕಿ ನಡೆಸಿದಾಗ ಪಟ್ಟು ಬಿಡದ ಸಿಬ್ಬಂದಿಗಳು ಬ್ಯಾಗ್ ತಪಾಸಣೆ ನಡೆಸಿದ್ದಾರೆ. ಈ ವೇಳೆ ಭಾರೀ ಪ್ರಮಾಣದ ನಗದು ಇರುವುದು ಪತ್ತೆಯಾಯಿತು.
ಬೀದರ್ ಘಟನೆಗೂ ಇದಕ್ಕೂ ಸಂಬಂಧವಿದೆಯೇ ಎಂದು ವಿಚಾರಣೆ ನಡೆಸುತ್ತಿದ್ದಂತೆ ಓರ್ವ ದುಷ್ಕರ್ಮಿ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಪಟ್ಟು ಬಿಡದ ಪೊಲೀಸರು ಹಾಗೂ ಟ್ರಾವೆಲ್ಸ್ ಸಿಬ್ಬಂದಿ ಒಬ್ಬನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಈತ ಹೈದರಾಬಾದ್‌ನ ಅಫ್ಜಲ್‌ಗಂಜ್ ಪೊಲೀಸರ ವಶದಲ್ಲಿದ್ದು ನಂತರ ಬೀದರ್ ಪೊಲೀಸರ ವಶಕ್ಕೆ ಹಸ್ತಾಂತರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಿಸಲು ಬ್ಯಾಂಕ್‌ನಿಂದ ನಗದು ತೆಗೆದುಕೊಂಡು ಹೋಗಲು ಸಿಬ್ಬಂದಿ ಸಜ್ಜಾಗಿದ್ದರು. ಈ ವೇಳೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸೆಕ್ಯುರಿಟಿ ಏಜೆನ್ಸಿ ಸಿಬ್ಬಂದಿ ಮೇಲೆ ದರೋಡೆಕೋರರು ಖಾರದಪುಡಿ ಎರಚಿ 93 ಲಕ್ಷ ಹಣವನ್ನು ದೋಚಿದ್ದರು.
ಬೀದರ್‌ನ ಶಿವಾಜಿ ಸರ್ಕಲ್ ಬಳಿಯ ಹೃದಯ ಭಾಗದಲ್ಲಿರುವ ಎಸ್‌ಬಿಐ ಬ್ಯಾಂಕ್‌ನ ಮುಖ್ಯ ಕಚೇರಿ ಬಳಿಯೇ ಈ ಘಟನೆ ನಡೆದಿತ್ತು. ಅದರಲ್ಲೂ ಪಕ್ಕದಲ್ಲೇ ಜಿಲ್ಲಾಧಿಕಾರಿಗಳ ಕಚೇರಿ ಕೂಡ ಕಾರ್ಯ ನಿರ್ವಹಿಸುತ್ತಿದೆ. ಘಟನೆಯಲ್ಲಿ ವೆಂಟಕಗಿರಿ ಎಂಬ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಖಾತೆ ಸಚಿವ ಈಶ್ವರ್ ಖಂಡ್ರೆ ಅವರ ಕಳೆದ ರಾತ್ರಿಯೇ ಹೈದರಾಬಾದ್‌ಗೆ ತೆರಳಿ ಘಟನೆಯಲ್ಲಿ ಗಾಯಗೊಂಡಿರುವ ಸಿಬ್ಬಂದಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆಸ್ಪತ್ರೆಯ ವೈದ್ಯರ ಜೊತೆ ಮಾತುಕತೆ ನಡೆಸಿದ್ದಾರೆ.