Home ಇದೀಗ ಬಂದ ಸುದ್ದಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಕಾಮುಕರು ಅರೆಸ್ಟ್

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಕಾಮುಕರು ಅರೆಸ್ಟ್

0
ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಕಾಮುಕರು ಅರೆಸ್ಟ್

ಬೀದರ್,ಸೆ.6- ಬಸವ ಕಲ್ಯಾಣದಲ್ಲಿ ನಡೆದಿದ್ದ ಪರಿಶಿಷ್ಟ ಜಾತಿಗೆ ಸೇರಿದ 19 ವರ್ಷದ ಯುವತಿ ಮೇಲಿನ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಬೀದರ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಅತ್ಯಾಚಾರ ಮತ್ತು ಕೊಲೆ ಆರೋಪದಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಬೀದರ್ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದ್ದಾರೆ.

ಮೂವರು ಆರೋಪಿಗಳಲ್ಲಿ ಒಬ್ಬರು ಅದೇ ಗ್ರಾಮದವರು (ಬಾಲಕಿಯದು). ಉಳಿದ ಇಬ್ಬರು ಪಕ್ಕದ ಗ್ರಾಮದವರು. ಮೂವರನ್ನು ಬಂಧಿಸಲಾಗಿದೆ ಮತ್ತು ಅವರ ವಿರುದ್ಧ ಕಾನೂನು ಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಳೆದ ಆ.29 ರಂದು ಯುವತಿ ನಾಪತ್ತೆಯಾಗಿದ್ದರು. ಆಕೆಯ ಪೋಷಕರು ಎರಡು ದಿನ ಹುಡುಕಾಟ ನಡೆಸಿ ಕೊನೆಗೆ ಆ.31ರಂದು ಪೊಲೀಸರಿಗೆ ದೂರು ನೀಡಿದ್ದರು.ದೂರು ದಾಖಲಿಸಿಕೊಂಡು ಕಾರ್ಯಚರಣೆ ನಡೆಸಿದ ಪೊಲೀಸರು ಸೆ.1ರಂದು ಪೊದೆಯಲ್ಲಿ ಎಸೆಯಲಾಗಿದ್ದ ಯುವತಿ ಶವ ವಶಪಡಿಸಿಕೊಂಡಿದ್ದರು.

ಮರಣೋತ್ತರ ಪರೀಕ್ಷೆ ಮತ್ತು ವಿಧಿವಿಜ್ಞಾನ ಪರೀಕ್ಷೆ ನಂತರ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿತ್ತು. ಹೀಗಾಗಿ ಆರೋಪಿಗಳ ಎಡೆಮುರಿ ಕಟ್ಟಲು ಕಂಕಣಬದ್ಧರಾದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಖಂಡಿಸಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವಿವಿಧ ಸಂಘಟನೆಗಳು ಮತ್ತು ವಿರೋಧ ಪಕ್ಷ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದರು.