Saturday, August 16, 2025
Homeರಾಜ್ಯಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ : ಡಿಕೆಶಿ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ

ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ : ಡಿಕೆಶಿ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ

Big conspiracy against Dharmasthala: Mixed response to DK's statement

ಬೆಂಗಳೂರು, ಆ.16– ಧರ್ಮಸ್ಥಳದ ವಿರುದ್ಧ ದೊಡ್ಡ ಪ್ರಮಾಣದ ಷಡ್ಯಂತ್ರ ನಡೆದಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಕಾಂಗ್ರೆಸ್‌‍ ವಿರುದ್ಧ ಧರ್ಮ ರಾಜಕಾರಣವನ್ನು ಆಧರಿಸಿ, ಮುಗಿಬೀಳಲು ಮುಂದಾಗಿದ್ದ ಬಿಜೆಪಿ ಹಾಗೂ ಜೆಡಿಎಸ್‌‍ ಪಕ್ಷಗಳಿಗೆ, ಡಿಕೆಶಿವಕುಮಾರ್‌ ಅವರ ಹೇಳಿಕೆ ಗೊಂದಲ ಮೂಡಿಸಿದಂತಾಗಿದೆ. ವಿರೋಧ ಪಕ್ಷಗಳು ಹೇಳುತ್ತಿದ್ದ ಅಭಿಪ್ರಾಯಗಳನ್ನು ಡಿ.ಕೆ. ಶಿವಕುಮಾರ್‌ ಉಪಮುಖ್ಯಮಂತ್ರಿಯಾಗಿ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.

ಸರ್ಕಾರದ ಪ್ರತಿನಿಧಿಗಳೇ ಷಡ್ಯಂತ್ರ ಎಂದ ಮೇಲೆ ಸರ್ಕಾರವನ್ನು ಮತ್ತೆ ಯಾವ ರೀತಿಯಲ್ಲಿ ಟೀಕಿಸಬೇಕು ಎಂಬ ಗೊಂದಲ ವಿರೋಧ ಪಕ್ಷಗಳನ್ನು ಕಾಡುತ್ತಿದೆ. ಜನರ ಭಾವನೆಗಳ ಆಧಾರದ ಮೇಲೆ ಡಿ.ಕೆ.ಶಿವಕುಮಾರ್‌ ಇತ್ತೀಚೆಗೆ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್‌‍ ಪಕ್ಷಕ್ಕೆ ಹಿಡಿದಿರುವ ಜಡತ್ವವನ್ನು ಹೋಗಲಾಡಿಸಲು ಯತ್ನಿಸುತ್ತಿದ್ದಾರೆ.

ವಿಧಾನಸಭೆಯಲ್ಲಿ ಈ ಬಗ್ಗೆ ನಡೆದಿರುವ ಚರ್ಚೆಯಲ್ಲಿ ವಿರೋಧ ಪಕ್ಷಗಳ ಶಾಸಕರು ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರ ಮಾಡಲು ಅನಾಮಿಕ ಮಾಸ್ಕ್‌ ಮ್ಯಾನ್‌ನನ್ನು ಬಳಸಿಕೊಳ್ಳಲಾಗಿದೆ. ಹಿಂದೂ ಧಾರ್ಮಿಕ ಕ್ಷೇತ್ರಗಳ ವಿರುದ್ಧ ನಿರಂತರವಾದ ಷಡ್ಯಂತ್ರಗಳಾಗುತ್ತಿವೆ. ಹಲವಾರು ಧರ್ಮಕ್ಷೇತ್ರಗಳ ಬಳಿಕ ಈಗ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂಬ ಟೀಕೆಗಳನ್ನು ಮಾಡಿದರು.

ಅನಾಮಿಕ ದೂರುದಾರ ತಲೆಬುರುಡೆ ತಂದುಕೊಟ್ಟು, ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದಾಗ ತನಿಖೆ ನಡೆಯಲೇಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಯಿತು. ಸ್ಥಳೀಯ ಪೊಲೀಸರಿಂದ ತನಿಖೆ ನಡೆಸಿದ್ದರೇ ಮತ್ತೆ ಅನುಮಾನಗಳು ಸೃಷ್ಟಿಯಾಗಬಹುದು ಎಂಬ ಹಿನ್ನೆಲೆಯಲ್ಲಿ ಸರ್ಕಾರ ಎಸ್‌‍ಐಟಿ ತನಿಖೆಗೆ ಆದೇಶಿಸಿತ್ತು.

ಧರ್ಮಸ್ಥಳದ ಸುತ್ತಮುತ್ತ ನೂರಾರು ಶವಗಳನ್ನು ಸಂಸ್ಕಾರ ಮಾಡಲಾಗಿದೆ ಎಂದು ಅನಾಮಧೇಯ ವ್ಯಕ್ತಿ ಹೇಳಿದ ಬಳಿಕ ನಾನಾ ರೀತಿಯ ಅನುಮಾನಗಳು ಹುಟ್ಟಿಕೊಂಡವು. ಅನುಮಾನಗಳನ್ನು ಬಗೆ ಹರಿಸಲು ಅನಿವಾರ್ಯವಾಗಿ ತನಿಖೆ ಮಾಡಬೇಕಾಗಿತ್ತು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ವಿಧಾನಸಭೆಯಲ್ಲಿ ಔಪಚಾರಿಕ ಸಮರ್ಥನೆ ನೀಡಿದ್ದಾರೆ. ಸೋಮವಾರ ಸುದೀರ್ಘವಾದ ಉತ್ತರ ನೀಡುವುದಾಗಿ ತಿಳಿಸಿದ್ದಾರೆ.

ಧರ್ಮಸ್ಥಳದಲ್ಲಿ ಎಸ್‌‍ಐಟಿ ತನಿಖೆ ನಡೆಸುವಾಗ ಸಾಮಾನ್ಯ ಜ್ಞಾನ ಬಳಕೆ ಮಾಡಲಾಗಿಲ್ಲ, ಅನಾಮಿಕ ಹೇಳಿದ ಜಾಗಗಳನ್ನೆಲ್ಲ ಅಗೆದು, ಅಪಚಾರ ಮಾಡಲಾಗಿದೆ ಎಂಬ ಟೀಕೆಗಳಿವೆ.
ವಿರೋಧ ಪಕ್ಷಗಳ ವಾಗ್ದಾಳಿಗೂ ಮುನ್ನವೇ ಡಿ.ಕೆ.ಶಿವಕುಮಾರ್‌ ಅವರೇ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯಲಿದೆ. ಶ್ರೀ ಕ್ಷೇತ್ರಕ್ಕೆ ಅಪಚಾರ ಮಾಡಿದವರನ್ನು ಸುಮನೆ ಬಿಡುವುದಿಲ್ಲ ಎಂದು ಹೇಳಿದ ಬಳಿಕ, ಎಸ್‌‍ಐಟಿ ತನಿಖೆ ಅನಾಮಿಕನತ್ತ ಮುಖ ಮಾಡಿದೆ ಎಂದು ತಿಳಿದು ಬಂದಿದೆ.

ಮಾಸ್ಕ್‌ಮ್ಯಾನ್‌ ಹೇಳಿದ ಅಷ್ಟೂ ಜಾಗಗಳಲ್ಲಿ ಉತ್ಖನನ ನಡೆಸಲಾಗಿತ್ತು. ಈವರೆಗೂ ಆರೋಪವನ್ನು ಸಮರ್ಥಿಸುವಂತಹ ಯಾವುದೇ ಪುರಾವೆಗಳು ದೊರಕಿಲ್ಲ. ಲಭ್ಯವಾಗಿರುವ ಸಣ್ಣಪುಟ್ಟ ಅಂಶಗಳನ್ನು ಪರಿಶೀಲನೆಗೆ ಒಳಪಡಿಸಿದ ಬಳಿಕ ಎಸ್‌‍ಐಟಿ ದೂರುದಾರನ ವಿರುದ್ಧವೇ ತನಿಖೆ ನಡೆಸಲು ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಎಸ್‌‍ಐಟಿ ವರದಿ ನೀಡುವವರೆಗೂ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಮೌನಕ್ಕೆ ಶರಣಾಗಿದ್ದರು. ವಿಧಾನಸಭೆಯಲ್ಲಿ ಭಾರೀ ಚರ್ಚೆಗಳು ನಡೆದಾಗಲೂ ಯಾವ ಸಚಿವರೂ ಸೊಲ್ಲು ಎತ್ತಲಿಲ್ಲ. ಆದರೆ ಡಿ.ಕೆ.ಶಿವಕುಮಾರ್‌ ಮೊದಲಿಗರಾಗಿ ಶ್ರೀ ಕ್ಷೇತ್ರವನ್ನು ಸಮರ್ಥಿಸಿಕೊಂಡಿದ್ದಾರೆ.

ಡಿ.ಕೆ.ಶಿವಕುಮಾರ್‌ ಹೇಳಿಕೆ ನೀಡುತ್ತಿದ್ದಂತೆ ಅವರಿಗೆ ಬೆಂಬಲವಾಗಿ ಬಹಳಷ್ಟು ಸಚಿವರು ಶ್ರೀ ಕ್ಷೇತ್ರದ ಪರವಾಗಿ ಮಾತನಾಡಿದ್ದಾರೆ. ಎಸ್‌‍ಐಟಿ ತನಿಖೆ ಪೂರ್ಣಗೊಳ್ಳುವ ಮುನ್ನವೇ ಡಿ.ಕೆ.ಶಿವಕುಮಾರ್‌ ಷಡ್ಯಂತ್ರ ನಡೆದಿದೆ ಎಂದಿರುವುದು ಮತ್ತೊಂದು ಗುಂಪಿನ ಕೆಂಗಣ್ಣಿಗೂ ಗುರಿಯಾಗಿದೆ.

ತನಿಖೆ ನಡೆದು ವರದಿ ಸಲ್ಲಿಕೆಯಾದ ಬಳಿಕ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿದ್ದರೂ ಅದು ಸಮರ್ಥನೀಯ. ಆದರೆ ಎಸ್‌‍ಐಟಿ ತನಿಖೆ ಪ್ರಗತಿಯಲ್ಲಿರುವ ಹಂತದಲ್ಲೇ ಪ್ರಭಾವಿ ಸ್ಥಾನದಲ್ಲಿರುವವರು ಈ ರೀತಿ ಹೇಳಿರುವುದು ಸರಿಯಲ್ಲ. ನ್ಯಾಯಾಲದಲ್ಲಿ ಇದು ಪ್ರಶ್ನಾರ್ಹವಾಗಲಿದೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.

ಒಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಡಿ.ಕೆ.ಶಿವಕುಮಾರ್‌ ಎದುರಾಳಿಗಳಿಗೆ ಅವಕಾಶವೇ ಇಲ್ಲದಂತೆ ರಾಜಕೀಯ ಪಗಡೆಯಾಟವನ್ನು ಮುನ್ನಡೆಸುತ್ತಿದ್ದು, ಅದರಲ್ಲೂ ಕೋಮು ರಾಜಕಾರಣದಲ್ಲಿ ಬಿಜೆಪಿಗಿಂತ ಒಂದು ಹೆಜ್ಜೆ ಮುಂದಿಡುತ್ತಿದ್ದಾರೆ.

RELATED ARTICLES

Latest News