ಬೆಂಗಳೂರು,ನ.22-ಸಿನೀಮಿಯ ಶೈಲಿಯಲ್ಲಿ 7.11 ಕೋಟಿ ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದ ಖದೀಮರನ್ನು ಬೆನ್ನಟ್ಟಿ ಬೇಟೆಯಾಡಿರುವ ಪೊಲೀಸರು ಕೇವಲ 60 ಗಂಟೆಗಳಲ್ಲೇ ಪ್ರಮುಖ ಆರೋಪಿಗಳ ಪೈಕಿ ಮೂವರನ್ನು ಬಂಧಿಸಿ 5.76 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಪ್ರಕರಣದ ಕಿಂಗ್‌ಪಿನ್ ಎನ್ನಲಾದ ಗೋವಿಂದಪುರ ಠಾಣೆಯ ಕಾನ್‌್ಸಟೇಬಲ್ ಅಣ್ಣಪ್ಪನಾಯಕ್, ಸಿಎಂಎಸ್ ಸಂಸ್ಥೆಯ ಹಾಲಿ ನೌಕರ ಗೋಪಿ ಹಾಗೂ ಮಾಜಿ ನೌಕರ ಕ್ಸೆವಿಯರ್ ಎಂದು ಗುರುತಿಸಲಾಗಿದೆ.
ಇಡೀ ಪ್ರಕರಣದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿಂದು ಇಂಚಿಂಚೂ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರು ಪ್ರಕರಣ ನಡೆದ ಕೇವಲ 54 ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 60 ಗಂಟೆಗೊಳಗಾಗಿ 5.76 ಕೋಟಿ ರೂ.ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ವಾಹನ ವಶಪಡಿಸಿಕೊಳ್ಳಲಾಗಿದೆ ಎಂದರು.
ನ.19 ರ ಮಧ್ಯಾಹ್ನ ನಡೆದ ಈ ದರೋಡೆ ಪ್ರಕರಣದಲ್ಲಿ 6 ರಿಂದ 8 ಮಂದಿ ಭಾಗಿಯಾಗಿದ್ದು, ದಕ್ಷಿಣ ವಿಭಾಗದ 11 ಇನ್‌್ಸಪೆಕ್ಟರ್‌ಗಳು, ಇಬ್ಬರು ಎಸಿಪಿಗಳು,ಸಿಸಿಬಿ ವಿಭಾಗದ 6 ಮಂದಿ ಇನ್‌್ಸಪೆಕ್ಟರ್‌ಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆಂದು ತಿಳಿಸಿದರು.
ಇಡಿ ನಗರವನ್ನು ಬೆಚ್ಚಿ ಬೀಳಿಸಿದ್ದ ಈ ದರೋಡೆ ಪ್ರಕರಣ ಪೂರ್ವನಿಯೋಜಿತವಾಗಿದ್ದು ಆರೋಪಿಗಳು ಯಾವುದೇ ಸುಳಿವು ನೀಡದಂತೆ ಎಚ್ಚರಿಕೆ ವಹಿಸಿದ್ದರು.ಅಪರಾಧಿಗಳು ಸಿಸಿ ಕ್ಯಾಮೆರಾಗಳು ಇಲ್ಲದ ಪ್ರದೇಶಗಳಲ್ಲಿ ವಾಹನ ನಿಲುಗಡೆ ಮಾಡಿದ್ದರು. ಕಾರ್ಯಾಚರಣೆ ಸಂದರ್ಭದಲ್ಲಿ ಮೊಬೈಲ್ ಫೋನ್‌ಗಳನ್ನು ಬಳಕೆ ಮಾಡಿರಲಿಲ್ಲ, ತನಿಖೆ ದಾರಿ ತಪ್ಪಿಸಲು ಹಲವು ಭಾಷೆಗಳಲ್ಲಿ ಸಂವಹನ ನಡೆಸುತ್ತಿದ್ದರು. ಹಾಗೂ ಕಾರ್ಯಾಚರಣೆಗೆ ಹಲವಾರು ವಾಹನಗಳನ್ನು ಬಳಸಿ ಅವುಗಳ ನಂಬರ್‌ಪ್ಲೇಟ್‌ಗಳನ್ನು ಪದೇ ಪದೇ ಬದಲಾಯಿಸುತ್ತಿದ್ದರು.
ಪೊಲೀಸರಿಗೆ ತಲೆನೋವಾಗಿದ್ದ ಈ ಪ್ರಕರಣವನ್ನು ಬೇಧಿಸಲೇ ಬೇಕು ಎಂದು ಛಲತೊಟ್ಟ ನಮ ಪೊಲೀಸರು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ,ರಾಜ್ಯದ ಹಲವು ಪ್ರದೇಶಗಳಲ್ಲಿ ಆರೋಪಿಗಳಿಗಾಗಿ ಶೋಧ ನಡೆಸಿದ್ದರು.
ಕೆಲವು ಪೊಲೀಸ್ ತಂಡಗಳು ಗೋವಾ ರಾಜ್ಯದ ವ್ಯಾಪ್ತಿಯವರೆಗೂ ತೆರಳಿ ತನಿಖೆ ನಡೆಸಿದ್ದರು. ಇದರ ಜೊತೆಗೆ 30ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.
ಆರೋಪಿಗಳು ಬಳಸಿದ್ದ ವಾಹನಗಳ ಚಲನವಲನ, ಸಿಸಿ ಟಿವಿ ದೃಶ್ಯಾವಳಿ ಹಾಗೂ ಸ್ಥಳೀಯ ಗುಪ್ತಚರ ಮಾಹಿತಿಯನ್ನು ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.
ಪ್ರಕರಣದ ಹಿನ್ನೆಲೆ:
ನ.19 ರ ಮಧ್ಯಾಹ್ನ 1.30 ರ ಸುಮಾರಿಗೆ 7.11 ಕೋಟಿ ಹಣ ಹೊಯ್ಯುತ್ತಿದ್ದ ಸಿಎಂಎಸ್ ಸಂಸ್ಥೆಯ ವಾಹನವನ್ನು ಡಿಜೆ ಹಳ್ಳಿ ಸಮೀಪ ಆರ್‌ಬಿಐ ಅಧಿಕಾರಿಗಳಂತೆ ಪೋಸ್ ನೀಡಿ ತಡೆದಿದ್ದ ದರೋಡೆಕೋರರು ನಂತರ ವಾಹನವನ್ನು ಡೈರಿ ಸರ್ಕಲ್ ವೃತ್ತದ ಮೇಲ್ಸೇತುವೆ ಸಮೀಪ ಕರೆತಂದು ಶಸ್ತ್ರ ತೋರಿಸಿ 7.11 ಕೋಟಿ ಹಣವಿದ್ದ ಟ್ರಂಕ್‌ಗಳನ್ನು ದೋಚಿ ಪರಾರಿಯಾಗಿದ್ದರು.
ಈ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
