ಪಾಟ್ನಾ, ಜೂ.28-ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಬಿಹಾರ ಪೊಲೀಸರ ಆರ್ಥಿಕ ಅಪರಾಧಗಳ ಘಟಕ ಪಶ್ಚಿಮ ಬಂಗಾಳದ ಮೂವರು ಸೇರಿದಂತೆ ನಾಲ್ವರನ್ನು ಬಂಧಿಸಿದೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ನಿವಾಸಿಗಳಾದ ಕೌಶಿಕ್ ಕುಮಾರ್ ಕರ್,ಸಂಜಯ್ ದಾಸ್ ಮತ್ತು ಕೋಲ್ಕತ್ತಾದ ಸುಮನ್ ಬಿಸ್ವಾಸ್ ಹಾಗೂ ಉತ್ತರ ಪ್ರದೇಶದ ಲಕ್ನೋ ಮೂಲದ ನಿವಾಸಿ ಸೌರಭ್ ಬಂಧೋಪಾಧ್ಯಾಯ್ ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಜೂನ್ 5 ರಂದು ಬಿಹಾರದ ನಿವಾಸಿಗಳಾದ ಅಶ್ವನಿ ರಂಜನ್, ವಿಕ್ಕಿ ಕುಮಾರ್ ಮತ್ತು ಅನಿಕೇತ್ ಅವರನ್ನು ಬಂಧಿಸಿತ್ತು ಮತ್ತು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಇವರು ಅಂತಾರಾಜ್ಯ ಸಂಜೀವ್ ಮುಖಿಯಾ ಗ್ಯಾಂಗ್‌ನ ಸದಸ್ಯರು.
ಬಿಹಾರ ಲೋಕ ಸೇವಾ ಆಯೋಗದ ಶಿಕ್ಷಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಈಗಾಗಲೇ ಮುಖಿಯಾ ಗ್ಯಾಂಗ್‌ನ ಹಲವಾರು ಸದಸ್ಯರನ್ನು ಬಂಧಿಸಿದ್ದಾರೆ.
ಇದುವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 74 ಎಫ್‌ಐಆರ್‌ಗಳನ್ನು ದಾಖಲಿಸಿದೆ ಮತ್ತು ವಿವಿಧ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ 150 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಕೌಶಿಕ್ ಕುಮಾರ್‌ನ ಕೋಲ್ಕತ್ತಾ ಮೂಲದ ಸಂಸ್ಥೆಯಾದ ಕ್ಯಾಲ್ಟೆಕ್ಸ್ ಮಲ್ಟಿವೆಂಚರ್ ಸಂಸ್ಥೆ ಬಿಹಾರದ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಲು ಮತ್ತು ಪೂರೈಸುವ ಗುತ್ತಿಗೆಯನ್ನು ಪಡೆದುಕೊಂಡಿದೆ. ಆದಾಗ್ಯೂ, ಸಂಸ್ಥೆ ಯಾವುದೇ ಉದ್ಯೋಗಿಗಳಿಲ್ಲದ ಒಂದು ಕೋಣೆಯ ಶೆಲ್ ಸಂಸ್ಥೆಯಾಗಿದೆ ಎಂದು ಗೊತ್ತಾಗಿದೆ.
ಪ್ರಶ್ನೆ ಪತ್ರಿಕೆಗಳ ಮುದ್ರಣ ಮತ್ತು ಪೂರೈಕೆಯನ್ನು ಈತ ಅವರ ಪತ್ನಿ ನಿರ್ದೇಶಕರಾಗಿದ್ದ ಬ್ಲೆಸ್ಸಿಂಗ್ ಸೆಕ್ಯೂರ್ಡ್ ಪ್ರೆಸ್ ಪ್ರೈವೇಟ್ ಲಿಮಿಟೆಡ್‌ಗೆ ಹೊರಗುತ್ತಿಗೆ ನೀಡಿದ್ದ. ಕಳೆದ 2019 ರಲ್ಲಿ ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗ ಮತ್ತು 2022 ರಲ್ಲಿ ಅರುಣಾಚಲ ಪ್ರದೇಶ ಲೋಕಸೇವಾ ಆಯೋಗ ನಡೆಸಿದ ನೇಮಕಾತಿ ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಕೌಶಿಕ್ ಕುಮಾರ್ ಭಾಗಿಯಾಗಿದ್ದ ಎಂದು ಹೆಚ್ಚಿನ ತನಿಖೆಯಲ್ಲಿ ಬಹಿರಂಗೊಂಡಿದೆ.ಮುದ್ರಿತ ಪ್ರಶ್ನೆ ಪತ್ರಿಕೆಗಳನ್ನು ವ್ಯವಸ್ಥಿತವಾಗಿ ಕಳ್ಳ ಮಾರ್ಗದ ಮೂಲಕ ಬಂಧಿತ ಆರೋಪಿಗಳು ದಂಧೆ ನಡೆಸಿ ಕೋಟ್ಯಂತರ ರೂ.ಗಳನ್ನು ಸಂಪಾದಿಸಿದ್ದಾರೆ.