ಹೆಲ್ಮೆಟ್ ಧರಿಸದೇ ಟ್ರಿಪಲ್ ರೈಡಿಂಗ್, ಡಿವೈಡರ್ಗೆ ಬೈಕ್ ಡಿಕ್ಕಿಹೊಡೆದು ಮೂವರ ಸಾವು..!
ಬೆಂಗಳೂರು,ಮೇ6- ಮೂವರು ಸ್ನೇಹಿತರು ಒಂದೇ ಬೈಕ್ನಲ್ಲಿ ಹೋಗುತ್ತಿದ್ದಾಗ ಅತಿವೇಗದಿಂದಾಗಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಇಂಜಿನಿಯರ್ಸ್ಗಳಾದ ಅನಿಲ್(28), ಕಾರ್ತಿಕ್(27) ಮತ್ತು ಶ್ರೀನಾಥ್(28) ಮೃತಪಟ್ಟ ಸ್ನೇಹಿತರು. ಈ ಮೂವರು ಪ್ರತಿಷ್ಠಿತ ಕಂಪನಿಗಳಲ್ಲಿ ಇಂಜಿಯರ್ಗಳಾಗಿ ಉದ್ಯೋಗ ಮಾಡುತ್ತಿದ್ದರು. ಇದೇ ಗುರುವಾರ ಅನಿಲ್ಗೆ ಎಂಗೇಜ್ಮೆಂಟ್ ನಿಶ್ಚಯವಾಗಿತ್ತು.
ಅತಿವೇಗದಿಂದಾಗಿ ಪವಿತ್ರ ಪ್ಯಾರಡೈಸ್ನ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಈ ಮೂವರ ತಲೆ ಡಿವೈಡರ್ ಹಾಗೂ ಕಂಬಕ್ಕೆ ಬಡಿದು ತೀವ್ರ ಗಾಯಗೊಂಡು ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.
ಮೂವರು ಟೆಕ್ಕಿಗಳು ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಬಸವೇಶ್ವರ ನಗರದ ಪವಿತ್ರ ಪ್ಯಾರಡೈಸ್ ಕಡೆಯಿಂದ ಮಾಗಡಿ ರಸ್ತೆ ಕಡೆ ಹೋಗುತ್ತಿದ್ದರು. ಈ ವೇಳೆ ಕಾರ್ತಿಕ್ ಎಂಬಾತ ಯಮಹ ಆರ್ 15 ಬೈಕನ್ನು ವೇಗವಾಗಿ ಚಲಾಯಿಸಿದ್ದಾನೆ. ಪರಿಣಾಮ ಬೈಕ್ ರಸ್ತೆ ಬದಿಯಲ್ಲಿದ್ದ ಬೆಸ್ಕಾಂ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ನಂತರ ಡಿವೈಡರ್ಗೆ ಗುದ್ದಿದೆ.