ಬೆಂಗಳೂರು, ಆ.22– ಕಾರಿಗೆ ಬೈಕ್ ತಾಗಿದ್ದಕ್ಕೆ ಕೋಪಗೊಂಡು ಕಾರಿನಿಂದ ಬೈಕ್ಗೆ ಗುದ್ದಿಸಿ ಸವಾರನನ್ನು ಕೊಲೆ ಮಾಡಿರುವ ದಾರುಣ ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಚಾಮುಂಡಿ ಲೇಔಟ್ ನಿವಾಸಿ ಮಹೇಶ್(21) ಕೊಲೆಯಾದ ಬೈಕ್ ಸವಾರ. ಈತ ಬಿಕಾಂ ವ್ಯಾಸಂಗ ಮಾಡಿದ್ದು, ನಂತರ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದನು. ಈ ಹಿಂದೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ನಂತರ ಕೆಲಸವನ್ನು ಬಿಟ್ಟಿದ್ದನು.
ನಿನ್ನೆ ರಾತ್ರಿ 7.30ರ ಸುಮಾರಿನಲ್ಲಿ ಮಹೇಶ್ ಬೈಕ್ ತೆಗೆದುಕೊಂಡು ತನ್ನ ಸ್ನೇಹಿತರಾದ ನಿಖಿಲ್ ಮತ್ತು ಬಾಲಾಜಿಯನ್ನು ಬೈಕ್ನಲ್ಲಿ ಹಿಂದೆ ಕೂರಿಸಿಕೊಂಡು ಕಾಫಿ ಕುಡಿಯಲು ಹೋಗಿದ್ದನು.ಕಾಫಿ ಕುಡಿದುಕೊಂಡು ಈ ಮೂವರು ಒಂದೇ ಬೈಕ್ನಲ್ಲಿ ಹಿಂದಿರುಗುತ್ತಿದ್ದಾಗ ಮಾರ್ಗಮಧ್ಯೆ ಜಿಕೆವಿಕೆ ಬಳಿ ಹಿಂದೆ ಬರುತ್ತಿದ್ದ ಕಾರು ಸೈಡ್ ಬಿಡುವಂತೆ ಹಾರನ್ ಮಾಡಿದರೂ ಮಹೇಶ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಾರು ಚಾಲಕ ಬೈಕ್ ಪಕ್ಕಕ್ಕೆ ಬಂದಾಗ ಕಾರಿಗೆ ತಾಗಿದೆ.
ಆ ವೇಳೆ ಕಾರು ಚಲಾಯಿಸುತ್ತಿದ್ದ ಖಾಸಗಿ ಬ್ಯಾಂಕ್ ಮ್ಯಾನೇಜರ್ ಅರವಿಂದ್ ಅವರು ಬೈಕ್ ನಿಲ್ಲಿಸುವಂತೆ ಹೇಳಿದ್ದಾರೆ. ಆದರೆ ಅವರ ಮಾತಿಗೆ ಕಿವಿ ಕೊಡದೆ ಮುಂದೆ ಹೋಗುತ್ತಿದ್ದಾಗ ಕೋಪಗೊಂಡ ಅರವಿಂದ್ ಬೈಕ್ನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ.
ಆ ವೇಳೆ ಬೈಕ್ನಲ್ಲಿ ಹಿಂದೆ ಕುಳಿತಿದ್ದ ಮಹೇಶನ ಇಬ್ಬರು ಗೆಳೆಯರು ತಿರುವಿನ ಬಳಿ ಕೆಳಗೆ ಬಿದ್ದು ತಪ್ಪಿಸಿಕೊಂಡು ಹೋಗಿದ್ದಾರೆ. ಆದರೆ ಇಷ್ಟಕ್ಕೆ ಸುಮನಾಗದ ಅರವಿಂದ್ ಅವರು ಬೈಕ್ ಚಲಾಯಿಸುತ್ತಿದ್ದ ಮಹೇಶ್ನನ್ನು ಹಿಂಬಾಲಿಸಿಕೊಂಡು ಹೋದಾಗ ಗಾಬರಿಗೊಂಡ ಮಹೇಶ್ ತನ್ನ ಬೈಕ್ನ್ನು ಸಪ್ತಗಿರಿ ಲೇಔಟ್ಗೆ ತಿರುಗಿಸಿದ್ದಾನೆ.
ಆದರೂ ಬಿಡದ ಅರವಿಂದ್ ಬೆನ್ನಟ್ಟಿಕೊಂಡು ಹೋಗಿ ಬೈಕ್ಗೆ ಕಾರಿನಿಂದ ಡಿಕ್ಕಿ ಹೊಡೆಸಿದ ಪರಿಣಾಮ ಮಹೇಶ್ ಮನೆಯೊಂದರ ಕಾಂಪೌಂಡ್ಗೆ ಡಿಕ್ಕಿ ಹೊಡೆದು ಉರುಳಿಬಿದ್ದಿದ್ದಾನೆ.ಪರಿಣಾಮ ಹೆಲೆಟ್ ಧರಿಸದ ಕಾರಣ ತಲೆಗೆ ಗಂಭೀರ ಪೆಟ್ಟಾಗಿದೆ. ಅರವಿಂದ್ ಹಾಗೂ ಆತನ ಸ್ನೇಹಿತ ಚೆನ್ನಕೇಶವ ತಕ್ಷಣ ಮಹೇಶ್ನನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.
ಸುದ್ದಿ ತಿಳಿದು ವಿದ್ಯಾರಣ್ಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಹೋದಾಗ ಮೊದಲು ಅಪಘಾತವೆಂದು ಮೇಲ್ನೋಟಕ್ಕೆ ಕಂಡು ಬಂದಿದೆ. ನಂತರ ಪರಿಶೀಲಿಸಿ ವಿಚಾರಣೆ ನಡೆಸಿದಾಗ ಕಾರು ಡಿಕ್ಕಿ ಹೊಡೆಸಿ ಬೈಕ್ ಸವಾರನನ್ನು ಕೊಲೆ ಮಾಡಿರುವುದು ತಿಳಿದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇಬ್ಬರು ವಶಕ್ಕೆ:
ಕಾರು ಡಿಕ್ಕಿ ಹೊಡೆಸಿ ಬೈಕ್ ಸವಾರನ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಹಾಗೂ ಆತನ ಸ್ನೇಹಿತ ಚೆನ್ನಕೇಶವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.