ಬೆಂಗಳೂರು, ಫೆ.24- ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿಯಾಗಿ ಸಾರ್ವಜನಿಕರ ಪ್ರಾಣಕ್ಕೆ ಹಾಗೂ ಆಸ್ತಿಗೆ ತೊಂದರೆ ಉಂಟಾಗುವಂತೆ ವಾಹನಗಳನ್ನು ಚಲಾಯಿಸಿ ವೀಲಿಂಗ್ ಮಾಡುತ್ತಿದ್ದ 8 ಯುವಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸಾರಿಗೆ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಮತ್ತು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ನಗರದ ಸಂಚಾರ ವಿಭಾಗದಲ್ಲಿ ವೀಲಿಂಗ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಪಶ್ಚಿಮ ವಿಭಾಗದ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3, ಬ್ಯಾಟರಾಯನಪುರ 2, ಕಾಮಾಕ್ಷಿಪಾಳ್ಯ, ಅಶೋಕನಗರ, ವಿಜಯನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ತಲಾ 1 ರಂತೆ ಒಟ್ಟು 8 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪಾಯಕಾರಿಯಾಗಿ ಸಾರ್ವಜನಿಕರ ಪ್ರಾಣಕ್ಕೆ ಹಾಗೂ ಆಸ್ತಿಗೆ ತೊಂದರೆ ಉಂಟಾಗುವಂತೆ ವಾಹನಗಳನ್ನು ಚಲಾಯಿಸುತ್ತಿದ್ದ 7 ಪ್ರಕರಣಗಳಲ್ಲಿ 8 ಯುವಕರ ವಿರುದ್ಧ ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರಿಸಲಾಗಿದೆ.
ಮಂಡ್ಯಗೆ ಸುಮಲತಾ, ಬೆಂ.ಗ್ರಾಮಾಂತರಕ್ಕೆ ಡಾ.ಮಂಜುನಾಥ್‌ಗೆ ಬಿಜೆಪಿ ಟಿಕೆಟ್..!
ಮುಂದೆಯೂ ಈ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗದಂತೆ, ಸಾಮಾಜಿಕ ಶಾಂತಿಗೆ ಭಂಗ ತಂದ ಕಾರಣದಿಂದಾಗಿ ವ್ಹೀಲಿಂಗ್ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆಯನ್ನು ವಿಭಾಗದ ಎಲ್ಲಾ ಸಹಾಯಕ ಪೊಲೀಸ್ ಆಯುಕ್ತರು ಮತ್ತು ಇನ್ಸ್‍ಪೆಕ್ಟರ್ ಅವರ ನೇತೃತ್ವದಲ್ಲಿ ಠಾಣಾವಾರು ತಂಡವನ್ನು ರಚಿಸಿಕೊಂಡು ತನಿಖೆ ಕೈಗೊಂಡಿರುತ್ತದೆ. ಈ ರೀತಿ ಸಾಮಾಜಿಕ ಶಾಂತಿಯ ಭಂಗಕ್ಕೆ ಕಾರಣರಾದವರ ವಿರುದ್ಧ ಕಾನೂನಿನ ಅಡಿಯಲ್ಲಿ ಮುಂದಿನ ದಿವಸಗಳಲ್ಲಿಯೂ ಸಹ
ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದುದೆಂದು ಪಶ್ಚಿಮ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಅನಿತಾ ಬಿ ಹದ್ದಣ್ಣವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಬ್ಬಾಳ- ರಿಂಗ್ ರಸ್ತೆ ಬಳಿ ಅಪಾಯಕಾರಿ ರೀತಿಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಸವಾರನನ್ನು ದ್ವಿಚಕ್ರ ವಾಹನ ಸಮೇತ ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಹೆಬ್ಬಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರಿಂಗ್ ರಸ್ತೆಯಲ್ಲಿ ಈ ಸವಾರ ಮೊನ್ನೆ ವ್ಹೀಲಿಂಗ್ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿಯೆಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಸವಾರರ ವಿರುದ್ಧ ಎಫ್‍ಐಆರ್
ಬೆಂಗಳೂರು, ಫೆ.24- ಸುರಂಜನ್ ದಾಸ್ ಮುಖ್ಯ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ದ್ವಿಚಕ್ರ ವಾಹನ ಸವಾರರ ವಿರುದ್ಧ ಪ್ರತ್ಯೇಕ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಜೆಬಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಹೀಲಿಂಗ್ ಮಾಡುವವರನ್ನು ಪತ್ತೆ ಹಚ್ಚಲು ವಿಶೇಷ ಕಾರ್ಯಾಚರಣೆ ಕೈಗೊಂಡು ಠಾಣಾ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಸುರಂಜನ್ ದಾಸ್ ಮುಖ್ಯರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ದ್ವಿಚಕ್ರ ವಾಹನ ಸವಾರರನ್ನು ಪತ್ತೆ ಹಚ್ಚಿ 2 ದ್ವಿಚಕ್ರ ವಾಹನಗಳ ಸಮೇತ ವಶಕ್ಕೆ ಪಡೆಯಲಾಗಿದೆ.
ಈ ಇಬ್ಬರು ಸವಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆಯೆಂದು ಪೂರ್ವ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಆರ್.ಜೈನ್ ಅವರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.