ಬೆಂಗಳೂರು,ಜು.16- ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ವಿಧಾನಸಭೆಯಲ್ಲಿಂದು ಜರುಗಿತು.ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಅಕ್ರಮವಾಗಿ ದುರುಪಯೋಗವಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸು ತ್ತಿದ್ದಂತೆ ಕಾಂಗ್ರೆಸ್ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಭಾರಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಬೋವಿ ನಿಗಮ, ಬಂಜಾರ ನಿಗಮದಲ್ಲಿ ಅವ್ಯವಹಾರವಾಗಿದೆ. ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲೂ ಅವ್ಯವಹಾರವಾಗಿದೆ. ಅಲ್ಲಿಗೂ ಇ.ಡಿ ಮತ್ತು ಸಿಬಿಐ ಅನ್ನು ಕಳುಹಿಸಿ. ಎಲೆಕ್ಟೊರಲ್ ಬಾಂಡ್‌್ಸನಲ್ಲೂ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ರಾಜಕೀಯ ದುರುದ್ದೇಶದಿಂದ ಮಾತನಾಡಿದ್ದಾರೆ. ಅವರಿಗೆ ಶೋಭೆ ತರುವುದಿಲ್ಲ ಎಂದು ಛೇಡಿಸಿದರು. ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಮಧ್ಯಪ್ರವೇಶಿಸಿ, ದಲಿತರ ಪರವಾಗಿ ಮೊಸಳೆ ಕಣ್ಣೀರು ಸುರಿಸಿದ್ದಾರೆ. ದಲಿತರ ಉದ್ಧಾರಕ್ಕೆ ಎಸ್ಸಿಪಿ/ಟಿಎಸ್ಪಿ ಕಾಯ್ದೆಯನ್ನು ನಾವು ತಂದಿದ್ದೇವೆ ಎಂದರು.
ಈ ಹಂತದಲ್ಲಿ ಆಡಳಿತ ಮತ್ತು ಬಿಜೆಪಿ ಶಾಸಕರ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆದು ಸದನದಲ್ಲಿ ಗೊಂದಲದ ವಾತಾವರಣ ಉಂಟಾಯಿತು.ಒಂದು ಹಂತದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ದೇವರಾಜ ಅರಸು ಅಭಿವೃದ್ಧಿ ನಿಗಮ, ತಾಂಡಾ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರವಾಗಿದ್ದರೆ ತನಿಖೆ ಮಾಡಿಸಿ ಎಂದು ತಿರುಗೇಟು ನೀಡಿದರು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ದೇವರಾಜು ಅರಸು ಟ್ರಕ್ ಟರ್ಮಿನಲ್, ತಾಂಡಾ ಅಭಿವೃದ್ಧಿ ನಿಗಮದಲ್ಲೂ ಅವ್ಯವಹಾರವಾಗಿದೆ. ಅಲ್ಲಿಗೂ ಇ.ಡಿ., ಐಟಿ ಅಧಿಕಾರಿಗಳನ್ನು ಕಳುಹಿಸಿ ಎಂದು ಒತ್ತಾಯಿಸಿದರು.
ಇದೇ ರೀತಿ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆಯಿತು. ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್‌ರವರು ಆಡಳಿತ ಮತ್ತು ವಿಪಕ್ಷ ಶಾಸಕರನ್ನು ಸಮಾಧಾನಪಡಿಸಿ ಮುಖ್ಯಮಂತ್ರಿಯವರು ಹೇಳಿಕೆ ನೀಡಲು ಅನುವು ಮಾಡಿಕೊಟ್ಟರು.