ಬೆಂಗಳೂರು, ಮೇ 27- ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಬಂಡವಾಳ ಶಾಹಿಗಳು ಮತ್ತು ಭೂಮಿಯ ಮೇಲೆ ಬಹಳ ಭ್ರಷ್ಟರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕೆಪಿಸಿಸಿ ವತಿಯಿಂದ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ದೇಶದ ಮೊದಲ ಪ್ರಧಾನಿ ದಿವಂಗತ ಜವಹರಲಾಲ್ ನೆಹರು ಅವರ ಪುಣ್ಯಸರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಅಷ್ಟೊಂದು ಭ್ರಷ್ಟಚಾರ ಇರಲಿಲ್ಲ. 1983ವರೆಗೂ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಭ್ರಷ್ಟಚಾರ ನಿಯಂತ್ರಣದಲ್ಲಿ ಇತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಚಾರ ಹೆಚ್ಚಾಗಿದೆ ಎಂದು ಆರೋಪಿಸಿದರು.
ನೆಹರು ಕುಟುಂಬಕ್ಕೆ ಭಾರಿ ಶ್ರೀಮಂತಿಕೆಯಿತ್ತು. ಅದನ್ನೆಲ್ಲಾ ಬದಿಗೊತ್ತಿ ದೇಶ ಸೇವೆಗೆ ನಿಂತರು. ಮೂಲತಃ ಸಮಾಜವಾದಿಯಾಗಿದ್ದ ನೆಹರು ಪ್ರಧಾನಿಯಾದ ಬಳಿಕ ತಮ ಸಿದ್ಧಾಂತಕ್ಕೆ ತಿಲಾಂಜಲಿ ನೀಡಲಿಲ್ಲ. ಬಂಡವಾಳಶಾಹಿ ಮತ್ತು ಸಮಾಜವಾದಿ ಸಿದ್ಧಾಂತಗಳ ಮಿಶ್ರಣದೊಂದಿಗೆ ದೇಶ ಮುನ್ನೆಡೆಸಿದರು. ದೇಶದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದ್ದರೆ ಅದು ಕಾಂಗ್ರೆಸ್‌ನಿಂದ ಮಾತ್ರ, ಬಿಜೆಪಿಯಿಂದ ಅಲ್ಲ ಎಂದರು.
ಯೋಜನಾ ಆಯೋಗ ರಚನೆ, ಸಾರ್ವಜನಿಕ ಉದ್ದಿಮೆಗಳ ಸ್ಥಾಪನೆ, ಅಣೆಕಟ್ಟು ನಿರ್ಮಾಣ, ಕೃಷಿ ಮತ್ತು ಕೈಗಾರಿಕೆಗಳಿಗೆ ಆಧುನಿಕ ಮತ್ತು ವೈಜ್ಞಾನಿಕ ಸ್ಪರ್ಶ ನೀಡಿದ್ದು ನೆಹರು. ಅವರು ದೊಡ್ಡ ಮೇಧಾವಿ, ಆರ್ಥಿಕ ತಜ್ಞರಾಗಿದ್ದರು. ಅದರಿಂದಾಗಿಯೇ ದೇಶಕ್ಕೆ ಭದ್ರ ಅಡಿಪಾಯ ಸಿಕ್ಕಿದೆ ಎಂದರು.
ಸ್ವಾತಂತ್ರ್ಯದ ವೇಳೆ ಆಹಾರಕ್ಕಾಗಿ ಬೇರೆ ದೇಶಗಳ ಮುಂದೆ ಕೈ ಚಾಚುವ ಸ್ಥಿತಿ ಇತ್ತು. ನೆಹರು ಕೈಗೊಂಡ ಕ್ರಮಗಳಿಂದಾಗಿ ಆಹಾರ ಸ್ವಾವಲಂಬನೆ ಸಾಧಿಸಿ, ಅನ್ನಭಾಗ್ಯ ಜಾರಿಗೊಳಿಸಲು ಸಾಧ್ಯವಾಗಿದೆ. 17 ವರ್ಷ ಕೊನೆ ಉಸಿರು ಇರುವವರೆಗೂ ಪ್ರಧಾನಿಯಾಗಿದ್ದ ನೆಹರು, ದೇಶಕ್ಕೆ ಆರ್ಥಿಕ, ಸಾಮಾಜಿಕ, ಔದ್ಯೋಗಿಕವಾಗಿ ಶಕ್ತಿ ತುಂಬಿದರು.
ನೆಹರು ಹೆಸರು ಅಳಿಸಲು ಬಿಜೆಪಿಯವರು ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟ ಮಾಡದ ಬಿಜೆಪಿಯ ಗಿರಾಕಿಗಳು ನಮಗೆ ದೇಶ ಪ್ರೇಮದ ಪಾಠ ಮಾಡುತ್ತಾರೆ. ಬಿಜೆಪಿಯವರು ಇದ್ದಕ್ಕಿದ್ದ ಹಾಗೇ ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಷ್‌ಚಂದ್ರ ಬೋಸ್, ಅಂಬೇಡ್ಕರ್ ಮೇಲೆ ಪ್ರೀತಿ ತೋರಿಸುತ್ತಾರೆ. ಅಂಬೇಡ್ಕರ್ ಸೋಲಿಸಿದ್ದು ಕಾಂಗ್ರೆಸ್ ಎಂದು ಸುಳ್ಳು ಆರೋಪ ಮಾಡುತ್ತಾರೆ. ತಮನ್ನು ಸೋಲಿಸಿದ್ದು ಹಿಂದು ಮಹಾಸಭಾದ ಅಧ್ಯಕ್ಷ ಸಾರ್ವಕರ್ ಮತ್ತು ಕಮ್ಯೂನಿಸ್ಟ್ ಡಾಂಗೆ ಸೋಲಿಸಿದ್ದು ಎಂದು ಅಂಬೇಡ್ಕರ್ ಖುದ್ದು ಬರೆದುಕೊಂಡಿದ್ದಾರೆ. ಅಷ್ಟು ನೀಚರು ಅವರು ಎಂದು ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯಸಚೇತಕ ರವಿಕುಮಾರ್ ಭಾಷಣ ಮಾಡುತ್ತಾ ಕಲ್ಬುರ್ಗಿ ಜಿಲ್ಲೆಯ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನದಿಂದ ಬಂದಿರಬೇಕು ಎಂದು ಹೇಳಿದ್ದಾರೆ. ಅದಕ್ಕೆ ಅಲ್ಲಿದ್ದವರು ಚಪ್ಪಾಳೆ ತಟ್ಟುತ್ತಾರೆ ಎಂದು ಟೀಕಿಸಿದರು.ಬಿಜೆಪಿಯವರು ಹಿಂಸೆಗೆ ಪ್ರಚೋದನೆ ನೀಡುತ್ತಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನವರು ಎಂದಿಗೂ ಹಿಂಸೆಯಲ್ಲಿ ಬಲಿ ಪಶುಗಳಾಗುವುದಿಲ್ಲ. ದಲಿತ, ಹಿಂದುಳಿದವರ್ಗದವರು ಸಿಲುಕುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ನೆಹರು ಬಗ್ಗೆ ದಿನಗಟ್ಟಲೆ ಮಾತನಾಡುವಷ್ಟು ವಿಷಯಗಳಿವೆ. ನಿನ್ನ ಮೇಲೆ ನೀನು ನಂಬಿಕೆ ಇಟ್ಟುಕೊಳ್ಳಬೇಕು. ನಂತರ ಎಲ್ಲವೂ ತಾನಾಗಿಯೇ ಮುಂದುವರೆಸಿಕೊಂಡು ಹೋಗುತ್ತದೆ ಎಂದು ನೆಹರು ಹೇಳಿದ್ದರು. ಗಡಿಯಾರ ನೋಡಿ ಸಮಯ ಲೆಕ್ಕ ಹಾಕಬೇಡ. ಸಿಕ್ಕ ವೇಳೆಯಲ್ಲಿ ಏನು ಸಾಧನೆ ಮಾಡಿದೆ ಎಂದು ಲೆಕ್ಕ ಹಾಕು ಎಂದು ನೆಹರು ಹೇಳಿದರು ಎಂದು ಸರಿಸಿಕೊಂಡರು.
ದೆಹಲಿ ಸೇರಿ ಹಲವು ಕಡೆ ಇದ್ದಂತಹ ನೂರಾರು ಕೋಟಿ ರೂಪಾಯಿಗಳ ಸ್ವಂತ ಆಸ್ತಿಗಳನ್ನು ನೆಹರು ಕುಟುಂಬ ಸರ್ಕಾರಕ್ಕೆ ಬರೆದುಕೊಟ್ಟಿದೆ. ಇಂದಿನ ಬಿಜೆಪಿ ಸರ್ಕಾರ ನೆಹರು ಕುಟುಂಬದ ಮೇಲೆ ಇಡಿ ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿದೆ. ಅದನ್ನು ಹೆದರಿಸುವ ಶಕ್ತಿ ಆ ಕುಟುಂಬಕ್ಕಿದೆ ಎಂದರು.
ನೆಹರು ಇಲ್ಲದೆ ದೇಶ ಇಲ್ಲ. ಹೆಚ್‌ಎಎಲ್ ಸೇರಿ ಅನೇಕ ಸಾರ್ವಜನಿಕ ಉದ್ದಿಮೆಗಳನ್ನು ಬೆಂಗಳೂರಿನಲ್ಲಿ ಆರಂಭಿಸಿದರು. ಅಂಬೇಡ್ಕರ್ ಬರೆದ ಸಂವಿಧಾನ ದೇಶದ ಗ್ರಂಥ. ಅಂಬೇಡ್ಕರ್‌ರನ್ನು ಗುರುತಿಸಿ ಕಾನೂನು ಸಚಿವರನ್ನಾಗಿ ಮಾಡಿದ್ದು ನೆಹರು. ಚುನಾವಣೆಯಲ್ಲಿ ಸೋಲಲಿ, ಗೆಲ್ಲಲಿ ಅದನ್ನು ಲೆಕ್ಕಿಸದೆ ಸಂವಿಧಾನ ರಚನೆಯ ಜವಾಬ್ದಾರಿಯನ್ನು ಅಂಬೇಡ್ಕರ್ ಅವರಿಗೆ ನೀಡಿದರು. ಪಂಚ ವಾರ್ಷಿಕ ಯೋಜನೆಗಳ ಮೂಲಕ ದೇಶ ಯಾವ ದಿಕ್ಕಿನಲ್ಲಿ ಅಭಿವೃದ್ಧಿಯಾಗಬೇಕು ಎಂಬ ದಿಕ್ಕೂಚಿ ನೀಡಲಾಗಿತ್ತು ಎಂದರು.
ನೆಹರು ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಬಿಜೆಪಿ ಟೀಕೆಗೆ ಕಾಂಗ್ರೆಸಿಗರು ಅಭಿವೃದ್ಧಿ ಯೋಜನೆಗಳ ಮೂಲಕವೇ ಉತ್ತರಿಸಬೇಕಿದೆ. ಶಿಕ್ಷಣ, ಮಾಹಿತಿ, ಉದ್ಯೋಗದ ಹಕ್ಕುಗಳು, ಭೂಮಿ ಹಕ್ಕು, ಎಲ್ಲವೂ ಕಾಂಗ್ರೆಸ್ ಕೊಡುಗೆಗಳಾಗಿವೆ. ನೆಹರು, ಇಂದಿರಾ ಗಾಂಧಿ ಕಾಲದಲ್ಲಿ ವಿದೇಶಾಂಗ ನೀತಿ ಉತ್ತಮವಾಗಿತ್ತು. ಈಗ ಯಾವ ದೇಶವೂ ಭಾರತದ ಜೊತೆಯಲ್ಲಿ ಇಲ್ಲ ಎಂದು ಟೀಕಿಸಿದರು.
ನಾಳೆ ಬೆಳಗ್ಗೆ 9 ಗಂಟೆಗೆ ಜೈ ಹಿಂದ್ ಸಭೆಯನ್ನು ಟೌನ್‌ಹಾಲ್‌ನಲ್ಲಿ ಆಯೋಜಿಸಲಾಗಿದೆ. ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಎಲ್ಲಾ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಇದು ದೇಶಕ್ಕಾಗಿ ಹೋರಾಟ ನಡೆಸುವ ಸೈನಿಕರಿಗಾಗಿ ಆಯೋಜಿಸಲಾಗಿರುವ ಕಾರ್ಯಕ್ರಮ. ಕಾಂಗ್ರೆಸ್ ಕಾರ್ಯಕ್ರಮಕ್ಕೆ ಆಗಮಿಸುವ ಪಕ್ಷದ ಮುಖಂಡರು ಸಭಾಂಗಣದ ಹೊರಗೆ ಕುಳಿತು ವೀಕ್ಷಿಸಬೇಕು. ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಒಳಗೆ ಪ್ರವೇಶವಿಲ್ಲ. ಟೌನ್‌ಹಾಲ್ ಸಾಮರ್ಥ್ಯ 1200 ಸೀಟುಗಳು, ಅಷ್ಟರಲ್ಲೂ ಮಾಜಿ ಸೈನಿಕರು ಇರುತ್ತಾರೆ. ಪಕ್ಷದವರಿಗೆ ಮಾಹಿತಿ ನೀಡುತ್ತಿದ್ದೇನೆ. ಎಲ್ಲರೂ ಬಂದು ಮುಂದೆ ಕುಳಿತುಕೊಳ್ಳಬೇಡಿ ಎಂದು ಸೂಚನೆ ನೀಡಿದರು.