ಬೆಂಗಳೂರು,ಫೆ.24- ಅಯೋಧ್ಯೆಯಿಂದ ಮರಳುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಬೆದರಿಕೆ ಹಾಕಲಾಗಿದೆ ಎಂಬ ಪ್ರಕರಣವನ್ನು ಅನಗತ್ಯವಾಗಿ ವೈಭವೀಕರಿಸಲಾಗುತ್ತಿದೆ. ಭಾವನಾತ್ಮಕ ವಿಚಾರಗಳನ್ನು ಕೆಣಕಿ ವ್ಯವಸ್ಥೆ ಹಾಳು ಮಾಡುವುದರಿಂದ ದೇಶಕ್ಕೆ ಉಳಿಗಾಲ ಇರುವುದಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 75 ವರ್ಷಗಳಿಂದಲೂ ದೇಶ ಸೌಹಾರ್ದಯುತವಾಗಿ ನಡೆದುಕೊಂಡು ಬರುತ್ತಿದೆ. ಬಿಜೆಪಿಯವರು ಈವರೆಗೂ ಅಭಿವೃದ್ಧಿ ವಿಚಾರವನ್ನು ಚರ್ಚೆ ಮಾಡುತ್ತಿಲ್ಲ. ಬೇರೆ ಧರ್ಮದವರನ್ನು ದ್ವೇಷಿಸುವುದು, ಅದಕ್ಕಾಗಿ ಪ್ರಚೋದಿಸುವಂತಹ ಭಾವನಾತ್ಮಕ ವಿಚಾರಗಳನ್ನೇ ಪ್ರಸ್ತಾಪಿಸುತ್ತಿದ್ದಾರೆ. ಇದು ದೇಶಕ್ಕೆ ಒಳ್ಳೆಯದಲ್ಲ. ದ್ವೇಷ ಭಾವನೆಯನ್ನು ವ್ಯಾಪಕವಾಗಿ ಬಿತ್ತಲಾಗುತ್ತಿದೆ. 75 ವರ್ಷಗಳಿಂದಲೂ ಇಲ್ಲದೇ ಇರುವಂತಹ ಅಸಹನೀಯ ವಾತಾವರಣವನ್ನುಸೃಷ್ಟಿಸಲು ಯತ್ನಿಸಲಾಗುತ್ತಿದೆ ಎಂದು ದೂರಿದರು.
ವರ್ಗಾವಣೆ ಮಾಡಿ ಇಲ್ಲವೇ ದಯಾ ಮರಣಕ್ಕೆ ಅವಕಾಶ ನೀಡಿ: ಪತ್ರ ಬರೆದ ಪೊಲೀಸರು
ಅಯೋಧ್ಯೆಯಿಂದ ಮೈಸೂರಿಗೆ ಪ್ರಯಾಣಿಸುತ್ತಿದ್ದ ಆಸ್ತ ರೈಲನ್ನು ಹೊಸಪೇಟೆಯಲ್ಲಿ ನೀರು ತುಂಬಿಸಿಕೊಳ್ಳಲು ನಿಲ್ಲಿಸಿದ್ದಾರೆ. ಅದೇ ಸಂದರ್ಭದಲ್ಲಿ ಮತ್ತೊಂದು ಫ್ಲಾಟ್‍ಫಾರಂನಲ್ಲಿ ಬೇರೊಂದು ರೈಲು ನಿಂತಿದೆ. ಅದರಲ್ಲಿ ನಿಂತಿದ್ದ ಮುಸಲ್ಮಾನ ವ್ಯಕ್ತಿಯೊಬ್ಬ ಸ್ಕೈವಾಕ್‍ನಲ್ಲಿ ದಾಟಿ ಆ ಕಡೆಗೆ ಹೋಗುವ ಬದಲಾಗಿ ನಿಂತಿದ್ದ ರೈಲುಗಳ ನಡುವಿನಿಂದಲೇ ಹಾದು ಹೋಗಿದ್ದಾರೆ. ಆತ ಗಡ್ಡ ಬಿಟ್ಟಿದ್ದ. ಮುಸಲ್ಮಾನ್ ಎಂದು ಗೊತ್ತಾಗುತ್ತಿದ್ದಂತೆ ಆತನನ್ನು ಛೇಡಿಸಿ, ಬೈದು, ಗಲಾಟೆ ಮಾಡಿದ್ದಾರೆ. ಆತ ರೈಲನ್ನು ಸುಟ್ಟುಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಲಾಗಿದೆ. ಪ್ರಕರಣ ದಾಖಲಾಗಿದೆ. ರೈಲಿನಲ್ಲಿ ಅಷ್ಟೊಂದು ಜನ ಇದ್ದಾಗ ಒಬ್ಬ ವ್ಯಕ್ತಿ ಸುಟ್ಟು ಹಾಕುತ್ತೇನೆ ಎಂದು ಹೇಳಿಕೆ ನೀಡಿದ್ದಾನೆಯೋ, ಇಲ್ಲವೋ ಗೊತ್ತಿಲ್ಲ. ಪರಿಶೀಲನೆ ನಡೆಯುತ್ತಿದೆ. ಆತ ಪಾಕಿಸ್ತಾನದ ಪರವಾಗಿ ಮಾತನಾಡಿದ್ದ ಎಂದೆಲ್ಲಾ ವೈಭವೀಕರಣ ಮಾಡಿದ್ದಾರೆ ಎಂದು ದೂರಿದರು.
ಆತ ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತನಾದ ಬಳಿಕ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಆತನನ್ನು ಬಂಧಿಸಿ ಬಿಟ್ಟು ಕಳುಹಿಸಿಲ್ಲ. ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆನಂತರವೂ ಆತ ಎಲ್ಲಿ ಹೋಗುತ್ತಾನೆ. ಚಲನವಲನಗಳೇನು ಎಂಬ ಬಗ್ಗೆ ನಿಗಾ ವಹಿಸಲಾಗುತ್ತದೆ ಎಂದರು.
ಬಿಜೆಪಿಯವರಿಗೆ ಬೇರ ಸಮುದಾಯದವರ ಮೇಲೆ ದ್ವೇಷ ಸೃಷ್ಟಿಸಿ ಅಶಾಂತಿ ನಿರ್ಮಿಸುವುದೇ ಅವರ ಉದ್ದೇಶ. ಇದರಿಂದ ದೇಶಕ್ಕೆ ಉಳಿಗಾಲ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ನಿನ್ನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರ ನೇತೃತ್ವದಲ್ಲಿ ನಡೆದ ಭೋಜನಾಕೂಟದಲ್ಲಿ ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚೆಗಳಾಗಿವೆ ಎಂದರು. ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗೆ ಈಗಾಗಲೇ ಒಂದು ಬಾರಿ ಸ್ಕ್ರೀನಿಂಗ್ ಕಮಿಟಿಯಲ್ಲಿ ಚರ್ಚೆಯಾಗಿದೆ. 2ನೇ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸ್ಸು ಮಾಡಲಾಗುತ್ತದೆ. ಸಚಿವರ ಸ್ಪರ್ಧೆಯ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿ ನಿರ್ಧಾರ ತೆಗೆದುಕೊಳ್ಳಲಾಗುವುದು. ನಿನ್ನೆಯ ಸಭೆಯಲ್ಲಿ ಇಂತಹ ಯಾವುದೇ ವಿಷಯ ಚರ್ಚೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಪಕ್ಷದಲ್ಲಿ ಲೋಕಸಭೆ ಚುನಾವಣೆಯ ಬಗ್ಗೆ ತಯಾರಿ ನಡೆದಿದೆ. ಕಾರ್ಯಕರ್ತರು ಸಜ್ಜುಗೊಂಡಿದ್ದಾರೆ. ತುಮಕೂರು ಲೋಕಸಭೆ ಚುನಾವಣೆ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಯಾವ ಪಕ್ಷಕ್ಕೆ ಹೋಗುತ್ತದೆ ಎಂಬುದು ನಮಗೆ ಮುಖ್ಯವಲ್ಲ ಎಂದರು.
ಎಸ್.ಪಿ.ಮುದ್ದಹನುಮೇಗೌಡ ಮರು ಸೇರ್ಪಡೆಗೆ ಯಾರಿಗೂ ಅಸಮಾಧಾನವಿಲ್ಲ. ಶಾಸಕರಾದ ಷಡಾಕ್ಷರಿ, ಟಿ.ಬಿ.ಜಯಚಂದ್ರ ಅವರು ಎಸ್.ಪಿ.ಮುದ್ದಹನುಮೇಗೌಡರು ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು ಎಂದ ಮಾತ್ರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದು ಸರಿಯಲ್ಲ. ಪಕ್ಷ ತೀರ್ಮಾನ ಮಾಡಿದ ಮೇಲೆ ನಾವೆಲ್ಲಾ ಕೆಲಸ ಮಾಡಲೇಬೇಕಿದೆ ಎಂದು ತಿಳಿಸಿದರು. ರಾಜ್ಯಸಭಾ ಚುನಾವಣೆಯಲ್ಲಿ ಯಾರು, ಯಾರಿಗೆ ಮತ ಹಾಕಬೇಕು ಎಂಬುದನ್ನು ರಾಜ್ಯನಾಯಕರು ನಿರ್ಧರಿಸಿ ಶಾಸಕರಿಗೆ ಸೂಚನೆ ನೀಡಲಿದ್ದಾರೆ. ಅದರಂತೆ ಮತದಾನ ನಡೆಯಲಿದೆ ಎಂದರು.
ಮಂಡ್ಯಗೆ ಸುಮಲತಾ, ಬೆಂ.ಗ್ರಾಮಾಂತರಕ್ಕೆ ಡಾ.ಮಂಜುನಾಥ್‌ಗೆ ಬಿಜೆಪಿ ಟಿಕೆಟ್..!
ವಿರೋಧಪಕ್ಷದ ಅಭ್ಯರ್ಥಿಗಳು ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿ ಮತ ಸೆಳೆಯಲು ಅಡ್ಡ ಮತದಾನ ಹಾಕಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬುದರ ಕುರಿತು ಈಗಾಗಲೇ ಶಾಸಕರು ದೂರು ನೀಡಿದ್ದಾರೆ. ಅದರ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಕಾನೂನಾತ್ಮಕವಾಗಿ ತಮ್ಮದೇ ಆದ ಕ್ರಮ ಕೈಗೊಳ್ಳುತ್ತಾರೆ. ಕುಪೇಂದ್ರ ರೆಡ್ಡಿಯವರನ್ನು ವಿಚಾರಣೆ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ಪೊಲೀಸರು ನಿರ್ಧರಿಸುತ್ತಾರೆ. ಜೊತೆಗೆ ದೂರಿನ ಅಂಶಗಳ ಮೇಲೆ ನಿರಂತರವಾಗಿ ನಿಗಾ ವಹಿಸುತ್ತಾರೆ. ಇನ್ನು ಪಕ್ಷವಾಗಿ ಕಾಂಗ್ರೆಸ್ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೊ ಅದರ ಬಗ್ಗೆ ಈಗಾಗಲೇ ಗಮನ ಹರಿಸಿದೆ ಎಂದು ಹೇಳಿದರು.