Friday, November 22, 2024
Homeರಾಜ್ಯಬಿಜೆಪಿ ಮಂಡ್ಯದಲ್ಲಿ ತಮ್ಮ ಪ್ರಯೋಗ ಆರಂಭಿಸಿದೆ : ಸಚಿವ ಖರ್ಗೆ ಕಿಡಿ

ಬಿಜೆಪಿ ಮಂಡ್ಯದಲ್ಲಿ ತಮ್ಮ ಪ್ರಯೋಗ ಆರಂಭಿಸಿದೆ : ಸಚಿವ ಖರ್ಗೆ ಕಿಡಿ

ಬೆಂಗಳೂರು,ಜ.29- ಇಷ್ಟು ದಿನ ಕರಾವಳಿಯನ್ನು ಕೋಮು ರಾಜಕಾರಣದ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡಿದ್ದ ಬಿಜೆಪಿ ಹಾಗೂ ಸಂಘ ಪರಿವಾರ ಈಗ ಮಂಡ್ಯದಲ್ಲಿ ತಮ್ಮ ಪ್ರಯೋಗ ಆರಂಭಿಸಿದೆ. ಸಮಾಜ ಶಾಂತಿಯುತವಾಗಿದ್ದರೆ ಬಿಜೆಪಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ ಎನಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ರೋಶ ಹೊರಹಾಕಿರುವ ಅವರು, ಮಂಡ್ಯದಲ್ಲಿ ಬೆಂಕಿ ಹತ್ತಿಸಿ ಆ ಬೆಂಕಿಯಲ್ಲಿ ರಾಜಕೀಯದ ಚಳಿ ಕಾಯಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರು ಅತ್ಯಂತ ಕೀಳು ಮಟ್ಟಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದ್ದಾರೆ.

ವಿರೋಧ ಪಕ್ಷದ ನಾಯಕನೆಂದರೆ ಘನತೆಯುಕ್ತ ಸ್ಥಾನ, ಆ ಸ್ಥಾನದ ಗೌರವವನ್ನು ಮಣ್ಣುಪಾಲು ಮಾಡುತ್ತಿರುವ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಗಮನಕ್ಕೆ ಕೆಲವು ವಿಚಾರಗಳನ್ನು ತರಬಯಸುವುದಾಗಿ ಹೇಳಿದ್ದಾರೆ. 2023 ರ ಡಿಸೆಂಬರ್ 23 ರಂದು ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜವನ್ನು ಮಾತ್ರ ಹಾರಿಸುತ್ತೇವೆ ಎಂದು ಶ್ರೀ ಗೌರಿಶಂಕರ ಸೇವಾ ಟ್ರಸ್ಟ್‍ನವರು ಧ್ವಜ ಸ್ಥಂಭಕ್ಕೆ ಅನುಮತಿ ಕೇಳಿದ್ದಾರೆ.

2024ರ ಜನವರಿ 17 ರಂದು ಧ್ವಜ ಸ್ಥಂಭದಲ್ಲಿ ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜವನ್ನು ಬಿಟ್ಟು ಇನ್ನಿತರ ಯಾವುದೇ ರಾಜಕೀಯ, ಧಾರ್ಮಿಕ ಧ್ವಜವವನ್ನು ಹಾರಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟು ಸಹಿ ಮಾಡಿದ್ದಾರೆ. 2024ರ ಜನವರಿ 18 ರಂದು ಕೆರೆಗೋಡು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜಾರೋಹಣಕ್ಕೆ ಮಾತ್ರ ಷರತ್ತುಗಳೊಂದಿಗೆ ಅನುಮತಿ ಪತ್ರ ನೀಡಿದ್ದಾರೆ. ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾಡುವ ಮಾರ್ಪಾಡುಗಳಿಗೆ ಬದ್ಧರಾಗಿರಬೇಕೆಂದು ತಿಳಿಸಲಾಗಿದೆ.

ಯಾವುದೇ ಗಲಭೆಗಳಿಗೆ ಅವಕಾಶ ಮಾಡಿಕೊಡದಂತೆ ಷರತ್ತು ವಿಸಲಾಗಿದೆ. ಧ್ವಜಾರೋಹಣ ಮಾಡುವ 6-7 ದಿನ ಮುಂಚಿತವಾಗಿ ಗ್ರಾಮ ಪಂಚಾಯಿತಿ ಹಾಗೂ ಪೊಲೀಸರಿಗೆ ತಿಳಿಸುವಂತೆ ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ. ರಾಷ್ಟ್ರ ಧ್ವಜದ ಬದಲು ಏಕಾಏಕಿ ಭಾಗವಾಧ್ವಜ ಹಾರಿಸುವ ಷಡ್ಯಂತ್ರ ರೂಪಿಸಿದ್ದು ಯಾರು? ಎಂಬ ಪ್ರಶ್ನೆಗೆ ಬಿಜೆಪಿ ಉತ್ತರಿಸಲೇಬೇಕಿದೆ.

ಪೊಲೀಸರಿಗೆ ಶರಣಾದ ನಕ್ಸಲರು

ಅನುಮತಿ ಪತ್ರದ ಷರತ್ತುಗಳನ್ನು ಉಲ್ಲಂಘಿಸಲು ಪ್ರೇರೇಪಿಸಿದ್ದು ಯಾರು? ಬಿಜೆಪಿ ಅದೆಷ್ಟು ದಿನಗಳಿಂದ ಶಾಂತಿ ಕೆಡಿಸುವ ಸಂಚು ರೂಪಿಸಿತ್ತು? ಕಾನೂನು, ನೀತಿ ನಿಯಮಗಳೇನು ಬಿಜೆಪಿ ಕಾಲ ಕೆಳಗಿನ ಕಸದಂತೆ ನೋಡುವುದೇಕೆ? ತ್ರಿವರ್ಣ ಧ್ವಜವನ್ನು ವಿರೋಧಿಸಿದ್ದ ಆರ್‍ಎಸ್‍ಎಸ್ ಹೇಳಿಕೊಟ್ಟ ಪಾಠದಂತೆ ಬಿಜೆಪಿಯೂ ತಿರಂಗಾ ಕಂಡರೆ ಉರಿದು ಬೀಳುತ್ತಿದೆ, ರಾಷ್ಟ್ರ ಧ್ವಜಕ್ಕೆ ಕೈ ಮುಗಿಯುವ ಬದಲು ಕೆಂಡ ಕಾರುತ್ತಿದೆ ಎಂದು ಆರೋಪಿಸಿದ್ದಾರೆ.

ಬಿ.ವೈ.ವಿಜಯೇಂದ್ರ ಹಾಗೂ ಆರ್.ಅಶೋಕ್‍ರವರು ಸರ್ಕಾರ ರಾಷ್ಟ್ರ ಧ್ವಜವನ್ನು ಹಾರಿಸುವ ಮೂಲಕ ಆ ಧ್ವಜ ಸ್ಥಂಭದ ಉದ್ದೇಶವನ್ನು ಈಡೇರಿಸಿದೆ, ಹೀಗಿದ್ದೂ ನಿಮಗೆ ಇಷ್ಟೊಂದು ಉರಿ, ತಾಪವೇಕೆ ಎಂದು ಲೇವಡಿ ಮಾಡಿದ್ದಾರೆ.

ರಾಷ್ಟ್ರ ಧ್ವಜವನ್ನು ದ್ವೇಷಿಸುವ ಮೂಲಕ ಬಿಜೆಪಿಗರು ತಮಗೆ ತಾವೇ ದೇಶದ್ರೋಹಿಗಳು ಎಂದು ಸರ್ಟಿಫಿಕೇಟ್ ಕೊಟ್ಟುಕೊಂಡಿದ್ದಾರೆ. ಬಿಜೆಪಿಗರಿಗೆ ದೇಶದ ಧ್ವಜ, ದೇಶದ ಸಂವಿಧಾನ, ದೇಶದ ಐಕ್ಯತೆ ಇಷ್ಟವಿಲ್ಲವೆಂದರೆ ಅವರ ಪ್ರೀತಿಪಾತ್ರವಾದ ಪಾಕಿಸ್ತಾನಕ್ಕೆ ಹೋಗಲಿ. ಬಿಜೆಪಿಯ ಯಾವುದೇ ತಂತ್ರ, ಕುತಂತ್ರಗಳಿಗೆ ನಾವು ಬಗ್ಗುವುದಿಲ್ಲ, ಬಗ್ಗುಬಡಿಯುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

RELATED ARTICLES

Latest News