ಬೆಂಗಳೂರು,ಫೆ.22- ಕರ್ನಾಟಕ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ವಿರೋಧಿ ಬಣ ಬಹಿರಂಗವಾಗಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದು, ಸದ್ಯ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗಳ ನಡುವೆಯೇ ಪಕ್ಷದ ಹೈಕಮಾಂಡ್ ಮಹತ್ವದ ನಿರ್ಧಾರಕ್ಕೆ ಬಂದಿದೆ.
ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಕೈ ಮೇಲಾಗುತ್ತಾ? ಎಂಬ ಪ್ರಶ್ನೆಗೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ. ಇದರ ಬೆನ್ನಲ್ಲೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ರೆಬೆಲ್ ಟೀಂ ಫುಲ್ ಸೈಲೆಂಟ್ ಆಗಿದ್ದು, ಯತ್ನಾಳ್ ಅವರ ಮುಂದಿನ ನಡೆಯೂ ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ ಎನ್ನುವ ಚರ್ಚೆ ಕಮಲ ಪಾಳೆಯದಲ್ಲಿ ನಡೆಯುತ್ತಿದೆ. ಆದರೆ ಭಿನ್ನಮತೀಯರ ವಿರೋಧವನ್ನು ಲೆಕ್ಕಿಸದೆ ಕರ್ನಾಟಕದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲು ಒಲವು ತೋರದ ಕೇಂದ್ರ ವರಿಷ್ಠರು, ಹಾಲಿ ಅಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಅವರನ್ನೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಲು ಮುಂದಾಗಿದ್ದಾರೆ.
ಬಿಜೆಪಿಯ ಇತಿಹಾಸದಲ್ಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹಣಾಹಣಿ ನಡೆದ ಉದಾಹರಣೆ ಇಲ್ಲ. ಹೀಗಾಗಿ ಈ ಸಂಪ್ರದಾಯವನ್ನು ಮುರಿಯದೆ ಇರಲು ಬಿಜೆಪಿ ಹೈಕಮಾಂಡ್ ತಿರ್ಮಾನ ಮಾಡಿದೆ ಎಂದು ಹೇಳಲಾಗಿದೆ. ಬಿಜೆಪಿಯ ಉನ್ನತ ನಾಯಕರು ಮತಪತ್ರದ ಮೂಲಕ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಒತ್ತಾಯಿಸಿದ್ದಾರೆ. ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರೋಧದ ನಡುವೆ ಬಿ.ವೈ. ವಿಜಯೇಂದ್ರ ವಿರುದ್ಧ ಸಮರ್ಥ ನಾಯಕತ್ವ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿಯಲ್ಲಿ ಚರ್ಚಿಸಲಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರಿರುವ ಬಣದಲ್ಲಿ ಮಹತ್ವದ ಸಭೆಗಳು ನಡೆದಿವೆ. ಹೀಗಾಗಿ ಕರ್ನಾಟಕದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆಗಳು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಮುಂದಿನ ಮೂರು ವರ್ಷಗಳ ಅವಧಿಗೆ ಹಾಲಿ ಅಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಅವರನ್ನೇ ಮುಂದುವರೆಸಲು ಕೇಂದ್ರ ವರಿಷ್ಠರು ಸಮ್ಮತಿಸಿದ್ದಾರೆ ಎಂದು ಹೇಳಲಾಗಿದೆ.
ಚುನಾವಣೆ ಇಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ನಡೆಯುವುದು ಬಹುತೇಕ ಖಾತ್ರಿಯಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅವರನ್ನೇ ಮುಂದುವರಿಸುವ ಸಾಧ್ಯತೆ ಬಲವಾಗಿದೆ. ಈಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ವರಿಷ್ಠರು ಒಲವು ತೋರದೇ ಇರುವುದರಿಂದ ಯಾರು ರಾಜ್ಯಾಧ್ಯಕ್ಷ ಎಂಬ ಪ್ರಶ್ನೆ ಉದ್ಭವವಾಗಿತ್ತು. ಇದೀಗ ವಿಜಯೇಂದ್ರ ಅವರೇ ಈ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆ ಅಧಿಕವಾಗಿದೆ ಎಂದು ತಿಳಿದುಬಂದಿದೆ.
ಇದೇ ತಿಂಗಳ ಅಂತ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ. ಇದರ ಭಾಗವಾಗಿ ಶೇ.50ರಷ್ಟು ರಾಜ್ಯಗಳಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣವಾಗಬೇಕು. ಹಲವು ರಾಜ್ಯಗಳಲ್ಲಿ ಜಿಲ್ಲಾ ಹಾಗೂ ರಾಜ್ಯಾಧ್ಯಕ್ಷರ ಪಟ್ಟಿ ಪ್ರಕಟವಾಗಲಿದೆ. ಅಲ್ಲದೇ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಇದು ಅಧಿಕೃತವಾಗಿ ಪ್ರಕಟವಾಗಲಿದ್ದು, ವಿಜಯೇಂದ್ರ ಅವರನ್ನು ಬದಲಾವಣೆಗೆ ಪಟ್ಟು ಹಿಡಿದಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅವರ ತಂಡಕ್ಕೆ ಭಾರೀ ಹಿನ್ನಡೆಯಾಗುವ ಸಾಧ್ಯತೆ ಇದೆ.
ಮೊದಲ ಬಾರಿಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ತವರು ಕ್ಷೇತ್ರ ಶಿಕಾರಿಪುರದಲ್ಲಿ ಗೆದ್ದು ಬೀಗಿದ್ದ ಶಾಸಕ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಜವಾಬ್ದಾರಿ ಕಬ್ಬಿಣದ ಕಡಲೆಯಂತಾಗಿತ್ತು. ಈಗಾಗಲೇ ಕಮಲ ಪಾಳೆಯದಲ್ಲಿ ಬಣ ರಾಜಕೀಯಕ್ಕೆ ಬ್ರೇಕ್ ಹಾಕಲು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕರ್ನಾಟಕದಲ್ಲಿ ಬಿಜೆಪಿಯ ಸಾಂಸ್ಥಿಕ ಚುನಾವಣೆಗಳ ಉಸ್ತುವಾರಿಯಾಗಿ ಕೇಂದ್ರ ವರಿಷ್ಠರು ನಿಯೋಜಿಸಿದ್ದಾರೆ.
ಇತ್ತ ಬಿಜೆಪಿ ರಾಜ್ಯಾಧ್ಯಕ್ಷಸ್ಥಾನದಲ್ಲಿ ವಿಜಯೇಂದ್ರ ತಾವೇ ಮುಂದುವರೆಯುವ ಅಧಿಕಾರದಲ್ಲಿ ಉಳಿಯುವ ವಿಶ್ವಾಸ ವ್ಯಕ್ತಪಡಿಸಿದ ಬೆನ್ನಲ್ಲೇ ಚುನಾವಣೆಗೆ ಬ್ರೇಕ್ ಹಾಕಲು ವರಿಷ್ಠರು ಮುಂದಾಗಿದ್ದಾರೆ ಎನ್ನಲಾಗಿದೆ.
ವಿಜಯೇಂದ್ರ ವಿರುದ್ಧ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ಯತ್ನಾಳ್ ದಿಢೀರ್ ಆಗಿ ಮೌನಕ್ಕೆ ಶರಣಾಗಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಮಾಧ್ಯಮಗಳ ಮೇಲೆ ಕೆಂಡಕಾರಿದ್ದ ಯತ್ನಾಳ್ ನೋಟಿಸ್ ಎಲ್ಲವೂ ವಿಜಯೇಂದ್ರ ಸೃಷ್ಟಿ ಎಂದು ಕಿಡಿಕಾರಿದ್ದರು. ನೋಟಿಸ್‌ಗೆ ಉತ್ತರ ಕೊಟ್ಟಿದ್ದೀರಾ? ಎಂಬ ಪ್ರಶ್ನೆಗೂ ಸರಿಯಾಗಿ ಉತ್ತರ ನೀಡದೆ ತೆರಳಿದ್ದರು.
ಈ ನಡುವೆ ಮೈಸೂರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ತೆರಳಿದ್ದ ಯತ್ನಾಳ್ ಅವರು ಮುಜುಗರ ಎದುರಿಸುವ ಸನ್ನಿವೇಶ ಸೃಷ್ಟಿಯಾಗಿತ್ತು. ಯತ್ನಾಳ್ ಮುಂದೆಯೇ ವಿಜಯೇಂದ್ರ ಬೆಂಬಲಿಗರು ವಿಜಯೇಂದ್ರ ಪರವಾಗಿ ಘೋಷಣೆ ಕೂಗಿದ್ದರು. ಆದರೆ ಈ ಸಂದರ್ಭದಲ್ಲಿ ಯತ್ನಾಳ್ ಪ್ರತಿಕ್ರಿಯೆ ನೀಡದೆ ಸುಮ್ಮನಾದರು. ಬಳಿಕ ಮಾಧ್ಯಮಗಳಿಗೂ ಯಾವುದೇ ಹೇಳಿಕೆ ನೀಡದೆ ತೆರಳಿದರು.
ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ರೆಬೆಲ್ ಟೀಂಗೆ ಹಿನ್ನಡೆ ಉಂಟಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಯತ್ನಾಳ್ ನೇತೃತ್ವದಲ್ಲಿ ಮುಂದಿನ ಹೋರಾಟದ ಬಗ್ಗೆ ರೆಬೆಲ್ ಟೀಂ ಚರ್ಚೆ ನಡೆಸಿದೆ. ಆದರೆ ಯಾವುದೇ ಸ್ಪಷ್ಟವಾದ ತೀರ್ಮಾನಕ್ಕೆ ಬಂದ ಹಾಗಿಲ್ಲ. ಆದರೆ ಹೈಕಮಾಂಡ್ ನಿಂದ ನಿರೀಕ್ಷಿತ ಸ್ಪಂದನೆ ಸಿಗದೆ ಇರುವುದು ರೆಬೆಲ್ ಟೀಮ್ನ ಬೇಸರಕ್ಕೂ ಕಾರಣವಾಗಿದೆ.
ಯತ್ನಾಳ್ ಹಾಗೂ ಟೀಂ ವಿಜಯೇಂದ್ರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸುತ್ತಿದ್ದರೂ ವಿಜಯೇಂದ್ರ ತಾಳ್ಮೆ ಕಳೆದುಕೊಳ್ಳದೆ ನಡೆದುಕೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸೈಲೆಂಟಾಗಿಯೇ ವಿಜಯೇಂದ್ರ ತಮ್ಮ ಕಾರ್ಯತಂತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ ಎಂಬುವುದು ಗೋಚರಿಸುತ್ತಿದೆ.
ಒಂದೆರಡು ಬಾರಿ ಅಷ್ಟೇ ವಿಜಯೇಂದ್ರ ಯತ್ನಾಳ್ ವಿರುದ್ಧ ನೇರವಾಗಿ ಕಿಡಿಕಾರಿದ್ದರು. ಆದರೆ ಹೈಕಮಾಂಡ್ ಮಟ್ಟದಲ್ಲಿ ವಿಜಯೇಂದ್ರಗೆ ಬೆಂಬಲ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತಿದೆ. ವರಿಷ್ಟರ ಅಭಯದಿಂದಲೇ ವಿಜಯೇಂದ್ರ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದಾರೆ ಎಂಬ ಮಾತುಗಳೂ ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.