ಬೆಂಗಳೂರು,ಜ.23- ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೇರಿರುವ ಬೆನ್ನಲ್ಲೇ ಪಕ್ಷದಿಂದ ಮತ್ತೊಬ್ಬ ಮಾಜಿ ಶಾಸಕ ದೂರ ಸರಿಯುವ ಮುನ್ಸೂಚನೆ ನೀಡಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್ ಅವರು ಶೀಘ್ರದಲ್ಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ.
ನನ್ನನ್ನು ಪಕ್ಷದೊಳಗೆ ವ್ಯವಸ್ಥಿತವಾಗಿ ತುಳಿಯುವ ಷಡ್ಯಂತ್ರ ನಡೆದಿದೆ. ರಾಜಕೀಯ ಭವಿಷ್ಯಕ್ಕಾಗಿ ಅನಿವಾರ್ಯವಾಗಿ ಯಾವ ಪಕ್ಷದ ಸಿದ್ದಾಂತವನ್ನು ವಿರೋಧ ಮಾಡಿದ್ದವೋ ಈಗ ಅದನ್ನೇ ಸೇರುವ ಪರಿಸ್ಥಿತಿ ಬಂದಿದೆ ಎಂದು ವಿಷಾದಿಸಿದರು.
ನಾನು ಕನಸಿನಲ್ಲೂ ಕಾಂಗ್ರೆಸ್ ಸೇರುವ ಬಗ್ಗೆ ಯೋಚನೆ ಮಾಡಿರಲಿಲ್ಲ. ಆದರೆ ಇತ್ತೀಚೆಗೆ ಬರುತ್ತಿರುವ ಹೇಳಿಕೆಗಳು, ಪಕ್ಷದೊಳಗೆ ನಡೆಯುತ್ತಿರುವ ವಿದ್ಯಮಾನಗಳು, ರಾಜ್ಯಾಧ್ಯಕ್ಷ ನಿರ್ಲಕ್ಷ್ಯ ಇದೆಲ್ಲವೂ ನಮನ್ನು ಪಕ್ಷ ಬಿಡುವಂತೆ ಮಾಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಪಕ್ಷದೊಳಗೆ ನಡೆಯುತ್ತಿರುವ ಬೆಳವಣಿಗೆಗಳಿಂದಲೇ ಬೇಸತ್ತು ಬಿಜೆಪಿ ಬಿಡುವ ತೀರ್ಮಾನ ಮಾಡಿದ್ದೇನೆ. ಹೀಗಾಗಿಯೇ ವಿಧಾನಪರಿಷತ್ ಚುನಾವಣೆಯಲ್ಲಿ ಪರಿಷತ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದೆ. ನನಗೆ ಸೋಲಾಗಿರಬಹುದು. ಆದರೆ ಜನಬೆಂಬಲವಿದೆ. ಮುಂದಿನ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಸ್ಪರ್ಧೆಗೆ ಸಿದ್ದ ಎಂದು ಘೋಷಿಸಿದರು.