ಬೆಂಗಳೂರು,ಏ.21- ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿಎಲ್) ಅಳವಡಿಸುವ ಸ್ಮಾರ್ಟ್ ಮೀಟರ್‌ನಲ್ಲಿ ಕೋಟ್ಯಂತರ ಅವ್ಯವಹಾರ ನಡೆದಿರುವ ಪ್ರಕರಣ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಬಿಜೆಪಿ ಲೋಕಾಯುಕ್ತಕ್ಕೆ ದೂರು ನೀಡಿದೆ. ಲೋಕಾಯುಕ್ತ ಎಸ್ಪಿ ಅವರಿಗೆ ಭೇಟಿ ಮಾಡಿದ ಶಾಸಕರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಎಸ್.ಆರ್.ವಿಶ್ವನಾಥ್, ಧೀರಜ್ ಮುನಿರಾಜು, ಸಿ.ಕೆ.ರಾಮಮೂರ್ತಿ ಮತ್ತಿತರ ನಿಯೋಗವು ಲಿಖಿತ ದೂರು ನೀಡಿತು.ಈ ಪ್ರಕರಣದಲ್ಲಿ ನೂರಾರು ಕೋಟಿ ಅವ್ಯವಹಾರವಾಗಿದ್ದು, ಸರ್ಕಾರ ಮುಚ್ಚು ಹಾಕುವ ಪ್ರಯತ್ನ ಮಾಡುತ್ತಿದೆ. ಹೀಗಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಕೆಟಿಟಿಪಿ ನಿಯಮ ಗಾಳಿಗೆ ತೂರಿ ರಾಜಶ್ರೀ ಎಲೆಕ್ಟಿಕಲ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ಜೇಬು ತುಂಬಿಸಲು ಸ್ಟಾರ್ಟ್ ಮೀಟರ್ ಖರೀದಿ ಹಾಗೂ ನಿರ್ವಹಣೆಗೆ ದುಬಾರಿ ದರ ನಿಗದಿ ಮಾಡಿವೆ. ಪರಿಣಾಮ ಎಸ್ಕಾಂಗಳು ಹಾಗೂ ಸಾರ್ವಜನಿಕರಿಗೆ ಸೇರಿದ ಬರೋಬ್ಬರಿ 15,568 ಕೋಟಿ ಹಣ ಲೂಟಿಯಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ತಮ್ಮ ಆಪ್ತರಲ್ಲಿ ಒಬ್ಬರಾದ ಕೆ.ಜೆ.ಜಾರ್ಜ್ ಅವರ ಮೂಗಿನ ಅಡಿಯಲ್ಲೇ ಇಷ್ಟು ಬೃಹತ್ ಹಗರಣ ನಡೆಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮ್ಮನಿರುವುದು ಯಾಕೆ ಎಂದು ಬಿಜೆಪಿ ನಾಯಕರು ಪ್ರಶ್ನೆ ಮಾಡಿದ್ದಾರೆ. ಸ್ಮಾರ್ಟ್ ಮೀಟರ್ ಅಳವಡಿಕೆಗೆ ಕೇಂದ್ರ ಸರ್ಕಾರ 900 ರೂ. ಸಹಾಯ ಧನ ನೀಡುತ್ತದೆ. ಅನ್ಯ ರಾಜ್ಯಗಳಲ್ಲಿ ಗುತ್ತಿಗೆದಾರ ಸಂಸ್ಥೆಗೆ ಆರಂಭದಲ್ಲಿ ಈ ಸಹಾಯಧನದ ಮೊತ್ತ 900 ರೂ. ಮಾತ್ರ ನೀಡಲಾಗುತ್ತದೆ. ಆದರೆರಾಜ್ಯದಲ್ಲಿ ಆರಂಭದಲ್ಲೇ ಗುತ್ತಿಗೆದಾರರ ಸಂಸ್ಥೆಗೆ ಸ್ಮಾರ್ಟ್ ಮೀಟರ್ನನ ಸಂಪೂರ್ಣ ಮೊತ್ತ 8510 ರೂ.ಪಾವತಿಯಾಗುವಂತೆ ವ್ಯವಸ್ಥೆ ಮಾಡಲಾಗಿದೆ.
ಅನ್ಯ ರಾಜ್ಯಗಳಲ್ಲಿ ಗುತ್ತಿಗೆದಾರರ ಆರಂಭದಲ್ಲಿ 900 ರೂ. ಪಡೆದ ನಂತರ ಉಳಿದ ಸ್ಟಾರ್ಟ್ ಮೀಟರ್ ಮೊತ್ತವನ್ನು ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚದಲ್ಲಿ (ಒ ಆ್ಯಂಡ್ ಎಂ) ಸೇರಿಸಿ ಪ್ರತಿ ತಿಂಗಳು 65 ರೂ.ಗಳಿಂದ 90 ರೂ.ಗಳವರೆಗೆ 10 ವರ್ಷಗಳವರೆಗೆ ಪಡೆಯಬೇಕು. ಅಂದರೆ ಗ್ರಾಹಕರಿಗೆ ಹೊರೆಯಾಗದಂತೆ ಈ ಮೊತ್ತ ಸಂಗ್ರಹಿಸುವ ವ್ಯವಸ್ಥೆ ರೂಪಿಸಲಾಗಿದೆ. ಆದರೆ ರಾಜ್ಯದಲ್ಲಿ ಸ್ಟಾರ್ಟ್ ಮೀಟರ್ಗೆ ಸರಾಸರಿ 8,510 ರೂ. ಮೊದಲ ದಿನವೇ ಸಾರ್ವಜನಿಕರ ಜೇಬಿನಿಂದ ಕಿತ್ತುಕೊಳ್ಳುವುದು ಮಾತ್ರವಲ್ಲ, ಮೀಟರ್ ಕಾರ್ಯಾಚರಣೆ ಹಾಗೂ ನಿರ್ವಹಣಾ ವೆಚ್ಚ ಪ್ರತಿ ತಿಂಗಳಿಗೆ 71 ರೂ.ಗಳಂತೆ 120 ತಿಂಗಳಿಗೆ (10 ವರ್ಷ) ಸೇರಿ ಪ್ರತಿ ಮೀಟರ್‌ಗೆ ಬರೋಬ್ಬರಿ 17,000 ರೂ. ಸಂಗ್ರಹಿಸಿದಂತಾಗುತ್ತದೆ.
ಅಂದರೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಪ್ರತಿ ಮೀಟರ್‌ಗೆ 9,260 ರೂ. ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿದ್ದು, ತನ್ಮೂಲಕ 10 ವರ್ಷದಲ್ಲಿ 15,568 ಕೋಟಿ ರೂ.ಗಳನ್ನು ಟೆಂಡರ್‌ದಾರರ ಜೇಬಿಗೆ ತುಂಬಲಾಗುತ್ತಿದೆ.
ಇಷ್ಟು ದೊಡ್ಡ ಮೊತ್ತ ಗುತ್ತಿಗೆದಾರನಿಗೆ ಸಂಪೂರ್ಣವಾಗಿ ವೈಟ್ ಮನಿಯಾಗಿಯೇ ಲಭಿಸುತ್ತದೆ. ಈ ರೀತಿ ಗುತ್ತಿಗೆದಾರ ಸಂಸ್ಥೆಗೆ ದೊಡ್ಡ ಮೊತ್ತದ ಲಾಭ ಮಾಡಿಕೊಟ್ಟಿರುವ ಈ ವೈಟ್ ಕಾಲರ್ ಹಗರಣದ ಹಿಂದೆ ಯಾವ ಕೈಗಳು ಕೆಲಸ ಮಾಡಿವೆ ಎಂಬುದು ಪತ್ತೆಯಾಗಬೇಕಾದರೆ ಈ ಬಗ್ಗೆ ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಕೆಟಿಟಿಪಿ ಕಾಯ್ದೆ ಸ್ಪಷ್ಟ ಉಲ್ಲಂಘನೆ:
ಬೆಸ್ಕಾಂ ವ್ಯಾಪ್ತಿಯಲ್ಲೇ ರಾಜಶ್ರೀ ಎಲೆಕ್ಸಿಕಲ್ಸ್ ಕಂಪನಿಯ ಅಂದಾಜು ಟೆಂಡರ್ ವೆಚ್ಚ 4,800 ಕೋಟಿ ರೂ. ಆಗಲಿದೆ. ಆದರೆ ಟೆಂಡರ್‌ನಲ್ಲಿ 571 ಕೋಟಿ ರು. ಎಂದು ನಮೂದಿಸಿ ಬಳಿಕ 997.23 ಕೋಟಿ ರೂ. ಎಂದು ತಿದ್ದುಪಡಿ ಮಾಡಲಾಗಿದೆ. ಟೆಂಡರ್ ಒಪ್ಪಂದ ಮಾಡಿಕೊಂಡಿರುವ ಒತ್ತದ ಶೇ.30ರಷ್ಟು ಹಣಕಾಸು ಸಾಮರ್ಥ್ಯ ತೋರಿಸಬೇಕು. ಅಂದರೆ 1,440 ಕೋಟಿ ಹಣ ಹೊಂದಿರುವುದಾಗಿ ಸಾಬೀತುಪಡಿಸಬೇಕಾಗಿತ್ತು. ಆದರೆ ವಾರ್ಷಿಕ ಪಾವತಿಯ ಶೇ.25ರಷ್ಟು ಎಂದು ಮಾಡಿ ಕೇವಲ 107 ಕೋಟಿ ರೂ. ಹಣಕಾಸು ಸಾಮರ್ಥ್ಯ ಮಾತ್ರ ಕೇಳಲಾಗಿದೆ. ಟೆಂಡರ್ ಬಗ್ಗೆ ಪತ್ರಿಕಾ ಪ್ರಕಟಣೆಯನ್ನೂ ನೀಡಿಲ್ಲ. ಆಡಳಿತ ಮಂಡಳಿಯಿಂದ ಅನುಮತಿಯನ್ನೂ ಪಡೆದಿಲ್ಲ ಎಂದು ದೂರಲಾಗಿದೆ.