ಬೆಂಗಳೂರು,ಜೂ.30- ಅಬಕಾರಿ ಇಲಾಖೆಯಲ್ಲಿ ಬೆಂಗಳೂರು ವ್ಯಾಪ್ತಿಯ ಎಂಟು ಉಪ ಆಯಕ್ತರ ಪೈಕಿ ನಾಲ್ವರನ್ನು ತಮದೇ ಜಾತಿಯ ಅಧಿಕಾರಿಗಳನ್ನು ನೇಮಕ ಮಾಡಿಕೊಂಡಿರುವುದನ್ನು ರಾಜ್ಯ ಬಿಜೆಪಿ ವಿರೋಧಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಸ್ವಜನ ಪಕ್ಷಪಾತದ ಗಂಭೀರ ಆರೋಪ ಮಾಡಿದೆ.
ಅಬಕಾರಿ ಇಲಾಖೆಯಲ್ಲಿ ಜಾತಿ ತಾರತಮ್ಯ ಮಾಡಲಾಗಿದೆ. ಒಂದೇ ಸಮುದಾಯದ ನಾಲ್ವರಿಗೆ ಸ್ಥಾನಮಾನ ನೀಡಲಾಗಿದೆ. ವರ್ಗಾವಣೆ ಹಾಗೂ ನೇಮಕಾತಿಯಲ್ಲಿ ಕೆಲ ಸಚಿವರ ಆಪ್ತರಿಗೆ ಮಣೆ ಹಾಕಲಾಗಿದೆ ಎಂದು ದೂರಿದೆ.
ಈ ಹಿಂದೆಯೂ ರಾಜ್ಯ ಸರ್ಕಾರದ ವಿರುದ್ಧ ಸ್ವಜನಪಕ್ಷಪಾತ ಆರೋಪ ಕೇಳಿಬಂದಿತ್ತು. ಇದೀಗ ಮತ್ತೆ ಸ್ವಜನ ಪಕ್ಷಪಾತ ಆರೋಪ ಕೇಳಿ ಬಂದಿದ್ದು, ಈ ವಿಚಾರವಾಗಿ ರಾಜ್ಯಪಾಲರಿಗೆ ಪತ್ರ ಬರೆಯುವುದಾಗಿ ತಿಳಿಸಿದೆ.
ಅಬಕಾರಿ ಇಲಾಖೆ ಒಂದೇ ಅಲ್ಲ ಇನ್ನಿತರ ಇಲಾಖೆಯಲ್ಲೂ ಸ್ವಜನಪಕ್ಷಪಾತ ನಡೆಯುತ್ತಿದೆ. ಕಾಂಗ್ರೆಸ್ ಅಂದರೆ ಸ್ವಜನ ಪಕ್ಷಪಾತ. ಗಾಂಧಿ ಕುಟುಂಬವೇ ಇದಕ್ಕೆ ಉದಾಹರಣೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ. ಸಚಿವರು ವರ್ಗಾವಣೆ ದಂಧೆ ಮಾಡುತ್ತಿದ್ದಾರೆ. ಎಲ್ಲ ಇಲಾಖೆಗಳಲ್ಲೂ ವರ್ಗಾವಣೆ ದಂಧೆ ಜೋರಾಗಿದೆ. ಹೀಗಾಗಿ ಸಚಿವರು ತಮ ಸಮುದಾಯದವರಿಗೆ ಸ್ಧಾನಮಾನ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಇತ್ತಿಚೆಗೆ ಇಲಾಖೆಗಳಲ್ಲಿ ಸಿಂಡಿಕೇಟ್‌ಗಳೇ ಇಲಾಖೆಯ ವರ್ಗಾವಣೆಯನ್ನು ನಿರ್ಧಾರ ಮಾಡುತ್ತಾರೆ. ಇದೇ ಸಿಂಡಿಕೇಟ್‌ಗಳೇ ಸಚಿವರ ಮೇಲೂ ಪ್ರಭಾವ ಬೀರುತ್ತಾರೆ. ಸಚಿವರು ವರ್ಗಾವಣೆಯನ್ನು ಹೋಲ್ ಸೇಲ್ ವ್ಯಾಪಾರ ಮಾಡಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪ ಮಾಡಿದ್ದಾರೆ.