Sunday, November 10, 2024
Homeರಾಜಕೀಯ | Politicsಬಿಜೆಪಿ ಭಿನ್ನಮತೀಯರ ಬಾಯಿಗೆ ಹೈಕಮಾಂಡ್ ಬೀಗ

ಬಿಜೆಪಿ ಭಿನ್ನಮತೀಯರ ಬಾಯಿಗೆ ಹೈಕಮಾಂಡ್ ಬೀಗ

BJP High Command warn leaders

ಬೆಂಗಳೂರು,ಸೆ.9– ಕೆಲವೇ ದಿನಗಳ ಹಿಂದೆ ಮನೆಯೊಂದು ಮೂರು ಬಾಗಿಲು ಎಂಬಂತಿದ್ದ ಬಿಜೆಪಿಯಲ್ಲಿ ಸದ್ಯ ಕೈ ಕಟ್! ಬಾಯ್ ಮುಚ್..! ಎಂಬ ಪರಿಸ್ಥಿತಿ ಇದೆ.ಪಕ್ಷದ ತೀರ್ಮಾನಗಳು, ನಿರ್ಣಯ ಹಾಗೂ ಸ್ವಪಕ್ಷೀಯರ ವಿರುದ್ಧ ಯಾರೊಬ್ಬರೂ ಬಾಯ್ಬಿಟ್ಟು ಮಾಧ್ಯಮಗಳ ಮುಂದೆ ಮಾತನಾಡದಂತೆ ಕಟ್ಟುನಿಟ್ಟಿನ ಕಟ್ಟಪ್ಪಣೆ ವಿಧಿಸಿರುವ ಬಿಜೆಪಿ ವರಿಷ್ಠರು ಬಾಯಿ ಬಿಟ್ಟರೆ ಜೋಕೆ! ಎಂಬ ಎಚ್ಚರಿಕೆ ಸಂದೇಶ ವನ್ನು ರವಾನಿಸಿದ್ದಾರೆ.

ಹೀಗಾಗಿಯೇ ಸ್ವಪಕ್ಷೀಯರ ವಿರುದ್ದವೇ ಆಗಾಗ್ಗೆ ಗುಡುಗುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಬಿ.ಪಿ.ಹರೀಶ್, ಪ್ರತಾಪ್ ಸಿಂಹ, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ್ ಸೇರಿದಂತೆ ಬಿಜೆಪಿಯ ಖಾಯಂ ಭಿನ್ನಮತೀಯ ನಾಯಕರ ಬಾಯಿಗೆ ಬೀಗ ಬಿದ್ದಿದೆ. ಕಳೆದ ಕೆಲವು ದಿನಗಳಿಂದ ಭಿನ್ನಮತೀಯ ನಾಯಕರು ಅಪ್ಪಿತಪ್ಪಿಯೂ ಬಾಯಿ ಬಿಡುತ್ತಿಲ್ಲ. ತುಟಿಗೆ ಬೀಗ ಬಿದ್ದವರಂತೆ ಎಲ್ಲದಕ್ಕೂ ಮೌನದಿಂದಲೇ ಉತ್ತರಿಸುತ್ತಾ ಪಕ್ಷದ ವಿರುದ್ಧವಾಗಲಿ ಇಲ್ಲವೇ ಅಧ್ಯಕ್ಷರ ವಿರುದ್ಧ ನಾವು ಹೇಳಿಕೆ ನೀಡುವುದಿಲ್ಲ ಎಂದು ಮೌನಕ್ಕೆ ಶರಣಾಗುತ್ತಿದ್ದಾರೆ.

ಹೀಗಾಗಿ ಬಿಜೆಪಿಯಲ್ಲಿ ಸದ್ಯ ಭಿನ್ನಮತೀಯ ಚಟುವಟಿಕೆಗಳಿಗೆ ಸಂಪೂರ್ಣವಾದ ಕಡಿವಾಣ ಬಿದ್ದಿದೆ. ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ನಡೆಸಿದಾಗ ಯತ್ನಾಳ್ ಸೇರಿದಂತೆ ಹಲವರು ಆಟ ಕೆಡಿಸುವ ಕೆಲಸಕ್ಕೆ ಕೈ ಹಾಕಿದ್ದರು.

ಅದರಲ್ಲೂ ಬಿಜೆಪಿಯ ಫೈರ್ ಬ್ರ್ಯಾಂಡ್ ನಾಯಕ ಎಂದೇ ಗುರುತಿಸಿಕೊಂಡಿರುವ ಯತ್ನಾಳ್ ಪಾದಯಾತ್ರೆ ಉದ್ದೇಶವನ್ನೇ ಪ್ರಶ್ನೆ ಮಾಡಿದ್ದರು. ವಿಶೇಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಗುರಿಯಾಗಿಟ್ಟುಕೊಂಡು ವಾಚಮಾಚಗೋಚರವಾಗಿ ಟೀಕೆ ಮಾಡಿದ್ದರು.ಜೊತೆಗೆ ಬಸವ ಕಲ್ಯಾಣದಿಂದ ಬೀದರ್ವರೆಗೆ ಪ್ರತ್ಯೇಕ ಪಾದಯಾತ್ರೆ ನಡೆಸುವುದಾಗಿ ಹೇಳಿದ್ದರು. ಇದು ಬಿಜೆಪಿಗೆ ಸಾಕಷ್ಟು ಮುಜುಗರ ಸೃಷ್ಟಿಸಿತ್ತು.

ಕಡಿವಾಣ ಹಾಕಿಸಿದ ವಿಜಯೇಂದ್ರ:
ಯಾವಾಗ ಪಕ್ಷದ ವಿರುದ್ಧವೇ ಪ್ರತ್ಯೇಕವಾಗಿ ಸಭೆ ಮತ್ತು ಪಾದಯಾತ್ರೆ ನಡೆಸುತ್ತೇವೆ ಎಂದು ಭಿನ್ನಮತೀಯರು ಸಭೆ ನಡೆಸಿದರೂ ಎಚ್ಚೆತ್ತುಕೊಂಡ ವಿಜಯೇಂದ್ರ ತಕ್ಷಣವೇ ದೆಹಲಿಗೆ ತೆರಳಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ವಸ್ತುಸ್ಥಿತಿಯನ್ನು ವಿವರಿಸಿದರು.

ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಹಲವರನ್ನು ಭೇಟಿಯಾಗಿ ಕರ್ನಾಟಕದ ಬೆಳವಣಿಗೆಗಳ ಕುರಿತು ಮಾಹಿತಿಯನ್ನು ನೀಡಿದರು.

ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಯಶಸ್ವಿಯಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದೆ. ಇದನ್ನು ಸಹಿಸದ ಕೆಲವರು ಪಕ್ಷದ ವಿರುದ್ಧವೇ ಚಟುವಟಿಕೆ ನಡೆಸುತ್ತಿದ್ದಾರೆ. ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿಕೊಂಡರು.

ಇದನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ನಾಯಕರು ತಕ್ಷಣವೇ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಮತ್ತಿತರರನ್ನು ದೆಹಲಿಗೆ ಕರೆಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸುವುದಾಗಲಿ ಇಲ್ಲವೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ತಾಕೀತು ಮಾಡಿದರು.

ಏನೇ ಸಮಸ್ಯೆಗಳಿದ್ದರೂ ವೇದಿಕೆಯೊಳಗೆ ಚರ್ಚಿಸಬೇಕು. ನೀವು ಪಾದಯಾತ್ರೆ ನಡೆಸುವುದಾದರೆ ಪಕ್ಷದ ಚಿಹ್ನೆಯಡಿ ನಡೆಸಬೇಕು. ರಾಜ್ಯಾದ್ಯಕ್ಷರ ಜೊತೆ ಮಾತುಕತೆ ನಡೆಸಿ ಎಂದು ಸೂಚನೆ ಕೊಟ್ಟರು.

ಅಲ್ಲದೆ ಇನ್ನು ಮುಂದೆ ಪ್ರತ್ಯೇಕ ಸಭೆ ನಡೆಸುವುದು ಕೂಡ ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ ಎಂದು ಸ್ಪಷ್ಟ ಮಾತುಗಳಲ್ಲಿ ಭಿನ್ನಮತೀಯರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದರು. ಈ ಎಲ್ಲ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡ ಭಿನ್ನಮತೀಯರು ಸದ್ಯಕ್ಕೆ ತಮ ಎಲ್ಲ ಆಟಾಟೋಪಗಳಿಗೆ ಕಡಿವಾಣ ಹಾಕಿಕೊಂಡಿದ್ದಾರೆ.

RELATED ARTICLES

Latest News