ಬೆಂಗಳೂರು,ಮೇ 18- ಬಿಜೆಪಿಯವರು ಪದೇಪದೇ ಭಾರತೀಯ ಸೇನೆಗೆ ಅಪಮಾನ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದನೆ ವಿರುದ್ಧ ಕೇಂದ್ರ ಸರ್ಕಾರ ಜರುಗಿಸಿರುವ ಎಲ್ಲಾ ಕ್ರಮಗಳಿಗೂ ಸರ್ವಪಕ್ಷಗಳೂ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಆದರೂ ಕೇಂದ್ರ ಸರ್ಕಾರ ಅಮೆರಿಕದ ಆಣತಿಯಂತೆ ನಡೆಯುತ್ತಿರುವುದೇಕೆ? ಎಂದು ಪ್ರಶ್ನಿಸಿದರು.
ಕದನ ವಿರಾಮದ ಕೀರ್ತಿ ಅಮೆರಿಕದ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ಅವರಿಗೆ ಸಿಗಬೇಕು ಎಂದು ಅವರ ಕಾರ್ಯದರ್ಶಿ ದೊಡ್ಡದಾಗಿ ಪೋಸ್ಟ್ ಹಾಕುತ್ತಿದ್ದಾರೆ. ಭಾರತದ ವಿದೇಶಾಂಗ ನೀತಿಯನ್ನು ಅಮೆರಿಕದ ಅಧ್ಯಕ್ಷರು ನಿಯಂತ್ರಿಸುತ್ತಿದ್ದಾರೆ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯ ತಿರಂಗಾ ಯಾತ್ರೆ ಹಾಸ್ಯಾಸ್ಪದ. ಮಧ್ಯಪ್ರದೇಶದ ಸಚಿವ ಸೇನೆಯ ಸೋಫಿಯಾ ಖುರೇಷಿ ಬಗ್ಗೆ ಅಪಮಾನಕಾರಿಯಾಗಿ ಮಾತನಾಡಿದ್ದಾರೆ. ಅವರನ್ನು ಈವರೆಗೂ ಏಕೆ ವಜಾಗೊಳಿಸಿಲ್ಲ ಎಂಬುದನ್ನು ತಿರಂಗಾ ಯಾತ್ರೆಯಲ್ಲಿ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ಹೆಸರು ಇರುವ ಕಡೆಗೆ ಹೆಚ್ಚು ವೈಭವೀಕರಣ ಮಾಡಿಕೊಳ್ಳುತ್ತಾರೆ. ಕೆಟ್ಟ ಹೆಸರು ಬರುವ ಕಡೆಗೆ, ಇಮೇಜ್ ಡ್ಯಾಮೇಜ್ ಆಗುವ ಕಡೆಗೆ ಕಾಲಿಡುವುದಿಲ್ಲ. ಮಣಿಪುರದಲ್ಲಿ ಏನೆಲ್ಲಾ ನಡೆದಿದೆ ಎಂದು ಇಡೀ ಜಗತ್ತಿಗೇ ಗೊತ್ತು. ಈವರೆಗೂ ಅಲ್ಲಿಗೆ ಪ್ರಧಾನಿ ಹೋಗಿಲ್ಲ. ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿದೆ. ಆದರೆ ಪ್ರಧಾನಿಯವರು ಈ ಬಗ್ಗೆ ಚಕಾರ ಎತ್ತುವುದಿಲ್ಲ ಎಂದರು.
ಅಮೆರಿಕ ಅಧ್ಯಕ್ಷರು ಭಾರತದ ವಿರುದ್ಧ ಪದೇಪದೇ ಅವಹೇಳನಕಾರಿ ಮಾತನಾಡುತ್ತಿದ್ದಾರೆ. ಆ್ಯಪಲ್ ಸಂಸ್ಥೆ ಭಾರತದಲ್ಲಿ ಐ ಫೋನ್‌ಗಳನ್ನು ಉತ್ಪಾದಿಸುವುದೇಕೆ ಎಂದು ಟ್ರಂಪ್ ಧಮ್ಕಿ ಹಾಕಿದ್ದಾರೆ.
ತೆರಿಗೆ ಶೂನ್ಯ ಎಂದು ಹೇಳುತ್ತಿದ್ದಾರೆ. ಇದಕ್ಕೆಲ್ಲಾ ಯಾರು ಉತ್ತರ ಕೊಡಬೇಕು? ಇಲ್ಲಿನ ಅಶೋಕ್, ವಿಜಯೇಂದ್ರ ಹೇಳಬೇಕೇ?, ಪ್ರಧಾನಿಯಲ್ಲವೇ? ಎಂದು ಪ್ರಶ್ನಿಸಿದರು.
ಪಾಕಿಸ್ತಾನದ ಪ್ರಧಾನಿ ನಿನ್ನೆಯಷ್ಟೇ ಹೇಳಿಕೆ ನೀಡಿ, ಭಾರತ ದೇಶದ ಮುಖ್ಯಸ್ಥರು ಕದನ ವಿರಾಮ ಕೇಳಿಕೊಂಡಿದ್ದರು ಎಂದಿದ್ದಾರೆ. ಕದನವನ್ನು ನಾವು ಗೆದ್ದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಸತ್ಯ ಏನು? ಸಂಸತ್ ಅಧಿವೇಶನ ಕರೆದು ಕೇಂದ್ರ ಸರ್ಕಾರ ಸ್ಪಷ್ಟ ಉತ್ತರ ಕೊಡಲಿ ಎಂದು ಆಗ್ರಹಿಸಿದರು.
ನಾವು ಸೇನೆಯ ಜೊತೆಗೆ ದೃಢವಾಗಿ ನಿಂತಿದ್ದೇವೆ. ನಾವಂತೂ ರಾಜಕೀಯ ಮಾಡುತ್ತಿಲ್ಲ. ಬಿಜೆಪಿಯ ತಿರಂಗಾ ಯಾತ್ರೆಯಲ್ಲಿ ಮೋದಿ ಫೋಟೋಗೆ ಸೇನೆಯ ಸಮವಸ್ತ್ರ ಅಳವಡಿಸಲಾಗಿದೆ. ರಾಜಕೀಯ ಯಾರು ಮಾಡುತ್ತಿದ್ದಾರೆ ಎಂದು ಇದರಿಂದ ಗೊತ್ತಾಗುತ್ತದೆ. ದಾಳಿ ನಡೆದ ಪಹಲ್ಗಾಮ್ ಸ್ಥಳಕ್ಕೆ ಮೋದಿ ಈವರೆಗೂ ಭೇಟಿಯನ್ನೂ ನೀಡಿಲ್ಲ. 10 ವರ್ಷಗಳಿಂದಲೂ ಎಲ್ಲೆಲ್ಲಿ ಇಕ್ಕಟ್ಟಿನ ಪರಿಸ್ಥಿತಿ ಇದೆ, ಅಲ್ಲಿಗೆ ಮೋದಿ ತಲೆ ಹಾಕುವುದಿಲ್ಲ. ಒಳ್ಳೆಯ ಹೆಸರು ಬರುವ ಕಡೆಗೆ ಮಾತ್ರ ಅವರು ವೈಭವೀಕರಣಗೊಳ್ಳುತ್ತಾರೆ ಎಂದು ಹೇಳಿದರು.
ಭಾರತದ ಗಡಿಭಾಗಕ್ಕೆ ಹತ್ತಿರವಾಗಿರುವ ರಾಜಸ್ಥಾನ, ಪಂಜಾಬ್‌ಗೆ ಭೇಟಿ ನೀಡಬಹುದಿತ್ತು. ಪ್ರಧಾನಿಯವರು ಎನ್‌ಡಿಎ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತ್ರ ಸಮಾಲೋಚನೆ ನಡೆಸುತ್ತಾರಂತೆ. ಪಂಜಾಬ್, ಜಮು-ಕಾಶೀರ, ಹಿಮಾಚಲ ಪ್ರದೇಶ ರಾಜ್ಯಗಳು ದೇಶದ ಗಡಿಯಲ್ಲಿವೆ. ಅವರೊಂದಿಗೆ ಮಾಹಿತಿ ಹಂಚಿಕೊಳ್ಳಬಾರದೆ? ಇದನ್ನು ನೋಡಿದರೆ ಕೇಂದ್ರ ಸರ್ಕಾರ ಕೇವಲ ರಾಜಕೀಯ ಮಾಡುತ್ತದೆ. ಇವರಿಗೆ ದೇಶದ ಹಿತಾಸಕ್ತಿ ಮುಖ್ಯ ಅಲ್ಲ ಎಂದರು.
ಸಾಧನಾ ಸಮಾವೇಶದ ಬಳಿಕ ಸಂಪುಟ ವಿಸ್ತರಿಸುವ ಚರ್ಚೆಗಳು ನಡೆದಿಲ್ಲ. ಇದು ಮಾಧ್ಯಮಗಳ ಸೃಷ್ಟಿ ಮಾತ್ರ. ಸದ್ಯಕ್ಕೆ ನಮ ಮುಂದೆ ಜನಪಯೋಗಿ ಯೋಜನೆಗಳನ್ನು ಜಾರಿಗೊಳಿಸುವುದಷ್ಟೇ ಉದ್ದೇಶವಿದೆ ಎಂದರು.