ಬೆಂಗಳೂರು, ಜೂ.26– ಬಿಜೆಪಿ ರೈತರ ವಿರೋಧಿ ಎಂದು ವಾಗ್ದಾಳಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಲಿನ ಬೆಲೆಯನ್ನು ಯಾರು, ಏನೇ ಹೇಳಲಿ ರೈತರ ಹಿತದೃಷ್ಟಿಯಿಂದ ಮತ್ತಷ್ಟು ಹೆಚ್ಚಿಸಬೇಕಿತ್ತು ಎಂದು ಪ್ರತಿಪಾದಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಾಲಿನ ಬೆಲೆಯನ್ನು ಏರಿಸುವುದರ ಮೂಲಕ ತಮ್ಮ ರೈತ ವಿರೋಧಿ ನಿಲುವನ್ನು ಬಯಲು ಮಾಡಿಕೊಂಡಿದ್ದಾರೆ.
ರೈತರು ಹಸುಗಳನ್ನು ಸಾಕಲಾರದೆ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಪ್ಯಾಕೆಟ್ ಹಾಲಿನ ಬೆಲೆ 2 ರೂ. ಹೆಚ್ಚಿಸಿರುವುದನ್ನು ವಿವಾದ ಮಾಡಿ ಗೊಂದಲ ಮಾಡುತ್ತಿರುವವರು ರೈತರ ಸಂಕಷ್ಟಗಳನ್ನು ಒಮ್ಮೆ ಬಂದು ಕೇಳಲಿ ಎಂದು ತಿರುಗೇಟು ನೀಡಿದರು.
ಹಾಲಿನ ದರ ಹೆಚ್ಚಳದಿಂದ ರೈತರಿಗೆ ಲಾಭವಾಗಲಿದೆ. ಕೆಎಂಎಫ್ ಎಂದರೆ ಅದು ರೈತರ ಸಂಸ್ಥೆ. ಅಲ್ಲಿ ವರ್ತಕರು ಯಾರೂ ಇಲ್ಲ. ಬಿಜೆಪಿಯವರು ಉದ್ದೇಶಪೂರ್ವಕವಾಗಿ ವಿವಾದ ಮಾಡಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ರೈತರ ಹಿತರಕ್ಷಣೆಗಾಗಿ 2 ರೂ.ಗಿಂತಲೂ ಹೆಚ್ಚಾಗಿ ದರ ಹೆಚ್ಚಿಸಬೇಕಿತ್ತು ಎಂದರು.
ಪಶು ಆಹಾರದ ಬೆಲೆ ತೀವ್ರವಾಗಿದೆ. ಇದಕ್ಕೆ ತೆರಿಗೆ ಪದ್ಧತಿ ಕಾರಣ. ಬಿಜೆಪಿಯವರು ಇದರ ಬಗ್ಗೆ ಮಾತನಾಡುವುದಿಲ್ಲ. ಹಸು ಸಾಕಾಣಿಕೆ ದುಬಾರಿಯಾಗಿದೆ. ನೆರೆ ರಾಜ್ಯವಾದ ಮಹಾರಾಷ್ಟ್ರದಲ್ಲಿ ಪ್ರತೀ ಲೀಟರ್‌ಗೆ ಹಾಲಿನ ಬೆಲೆ ಎಷ್ಟಿದೆ ಎಂದು ಬಿಜೆಪಿಯವರಿಗೆ ಗೊತ್ತಿದೆಯೇ?, ಗುಜರಾತಿನ ಅಮೂಲ್ ಹಾಲಿನ ದರವೂ ನಮಗಿಂತ ಹೆಚ್ಚಿದೆ. ರೈತರಿಗೆ ಅನುಕೂಲ ಆಗುವುದನ್ನು ಬಿಜೆಪಿಯವರಿಂದ ಸಹಿಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿ ವಿವಾದ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ರಾಹುಲ್‌ಗಾಂಧಿ ಆಯ್ಕೆಯಾಗಿರುವುದರಿಂದ ದೇಶದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಅವಕಾಶವಾಗುತ್ತದೆ. ಜನರ ಬಯಕೆ ರಾಹುಲ್‌ಗಾಂಧಿ ವಿಪಕ್ಷ ನಾಯಕರಾಗಬೇಕು ಎಂಬುದಾಗಿತ್ತು. ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜನರ ಭಾವನೆಗಳಿಗೆ ಸ್ಪಂದಿಸಿ ರಾಹುಲ್‌ಗಾಂಧಿ ಜವಾಬ್ದಾರಿ ಒಪ್ಪಿಕೊಳ್ಳುವಂತೆ ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದರು.
ಮುಂದಿನ ದಿನಗಳಲ್ಲಿ ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಉಳಿವಿಗೆ ರಾಹುಲ್‌ಗಾಂಧಿ ಹೋರಾಟ ನಡೆಸುವ ವಿಶ್ವಾಸವಿದೆ ಎಂದು ಹೇಳಿದರು.