Friday, October 3, 2025
Homeರಾಜ್ಯಸಮೀಕ್ಷೆ ಕುರಿತು ಬಿಜೆಪಿ ಅಪಪ್ರಚಾರ ನಡೆಸುತ್ತಿದೆ : ಬಿ.ಕೆ.ಹರಿಪ್ರಸಾದ್‌ ಆರೋಪ

ಸಮೀಕ್ಷೆ ಕುರಿತು ಬಿಜೆಪಿ ಅಪಪ್ರಚಾರ ನಡೆಸುತ್ತಿದೆ : ಬಿ.ಕೆ.ಹರಿಪ್ರಸಾದ್‌ ಆರೋಪ

BJP is spreading misinformation about the survey: B.K. Hariprasad

ಬೆಂಗಳೂರು, ಸೆ.29– ಸಾಮಾಜಿಕ, ಶೈಕ್ಷಣಿಕ ಸಮಿಕ್ಷೆ ನಡೆದು ವರದಿ ಜಾರಿಯಾದರೆ, ಅವಕಾಶ ವಂಚಿತರು, ತುಳಿತಕ್ಕೊಳಗಾದವರು ಮುನ್ನೆಲೆಗೆ ಬರುತ್ತಾರೆಂಬ ಆತಂಕದಿಂದ ಕೆಲವರು ಅಪಪ್ರಚಾರ ಮಾಡಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌‍ನ ಹಿರಿಯ ನಾಯಕ ಹಾಗೂ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌‍ ಸರ್ಕಾರ ಜಾತಿ ಜನಗಣತಿ ಮಾಡುತ್ತಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುತ್ತಿದೆ. ಕೇಂದ್ರ ಸಚಿವರು, ಬಿಜೆಪಿಯ ಸಂಸದರು ಸೇರಿದಂತೆ ಆ ಪಕ್ಷದ ನಾಯಕರು ಅನಾರೋಗ್ಯದ ಮನಸ್ಸಿನಿಂದ ಟೀಕೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಬಿಜೆಪಿಯ ಪಿತೃಪಕ್ಷ ಆರ್‌ಎಸ್‌‍ಎಸ್‌‍ ಹಿಂದುಳಿದ ವರ್ಗ, ಶೂದ್ರರು ಮತ್ತು ಪಂಚಮರ ಏಳಿಗೆಗೆ ಎಂದೂ ಶ್ರಮಿಸಿಲ್ಲ. ಶೋಷಿತರನ್ನು ಕಾಲಾಳುಗಳನ್ನಾಗಿ ಬಳಸಿಕೊಂಡಿದೆ. ಅವರಿಗೆ ಸೌಲಭ್ಯಗಳು ಸಿಕ್ಕಿ ಸ್ವಾವಲಂಬಿಗಳಾದರೆ, ಕೋಮುವಾದಿಗಳಿಗೆ ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಆಟವಾಡಲು ಸಾಧ್ಯವಾಗುವುದಿಲ್ಲ. ಈ ಅನಾರೋಗ್ಯಕರ ಮನಸ್ಸಿನಿಂದ ವಿರೋಧ ಮಾಡುತ್ತಿದ್ದಾರೆ ಎಂದು ಹೇಳಿದರು. ಇಡಬ್ಲ್ಯೂಎಸ್‌‍ ಜಾರಿಯಾಗಿ 7 ವರ್ಷವಾಗಿದೆ.

ಕರ್ನಾಟಕದಲ್ಲಿ ಮೇಲ್ಜಾತಿ ಎನಿಸಿಕೊಂಡಿರುವವರು ಮೀಸಲಾತಿಯ ವ್ಯಾಪ್ತಿಯಲ್ಲಿ ಬರುತ್ತಿಲ್ಲ. ಇಡಬ್ಲ್ಯೂಎಸ್‌‍ಗೆ ರಾಜ್ಯದಲ್ಲಿ ಅವಕಾಶವಿಲ್ಲ. ಅವಕಾಶ ವಂಚಿತ ಸಮುದಾಯಗಳು ಮುನ್ನೆಲೆಗೆ ಬರಬಹುದು ಎಂಬ ದುಗುಡದಿಂದ ನಾನಾ ರೀತಿಯ ತಪ್ಪು ವ್ಯಾಖ್ಯಾನ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಾತಿ ಅಥವಾ ಜನಗಣತಿ ಮಾಡಲು ಕೇಂದ್ರ ಸರ್ಕಾರದ ರಿಜಿಸ್ಟಾರ್‌ ಆಫ್‌ ಸರ್ವೇಯವರಿಗೆ ಮಾತ್ರ ಅವಕಾಶವಿದೆ ಎಂಬುದು ಕೇಂದ್ರ ಸಚಿವರಿಗೆ, ಸಂಸದರಿಗೆ ಅರಿವಿಲ್ಲ. ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ ಎಂದರು.
ಈ ಆಯೋಗ ಸುಪ್ರೀಂಕೋರ್ಟಿನ ಅದೇಶದ ಮೇರೆಗೆ ರಚನೆಯಾಗಿದೆ. ಅದರ ಜವಾಬ್ದಾರಿಗಳಲ್ಲಿ 10 ವರ್ಷಕ್ಕೊಮೆ ಸಮೀಕ್ಷೆ ನಡೆಸಿ, ಹಿಂದುಳಿದ ವರ್ಗಗಳ ಸ್ಥಿತಿಗತಿ ತಿಳಿದುಕೊಳ್ಳಬೇಕೆಂಬ ನಿಯಮವಿದೆ. ಮೂರ್ಖ ಶಿಖಾಮಣಿಗಳಿಗೆ ಇದು ತಿಳಿಯುತ್ತಿಲ್ಲ ಎಂದರು.

ಸಮೀಕ್ಷೆ ಹಂತದಲ್ಲಿನ ಲೋಪಗಳನ್ನು ಸರಿಪಡಿಸಲು ಈಗಾಗಲೇ ಸರ್ಕಾರ ಕ್ರಮಕೈಗೊಂಡಿದ್ದು, ತೀವ್ರಗತಿಯಲ್ಲಿ ಕಾರ್ಯಾಚರಿಸುತ್ತಿದೆ. ಅ. 7ರ ವೇಳೆಗೆ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಯಾವ ಸಮುದಾಯವಾದರೂ ಮೀಸಲಾತಿ ಪಟ್ಟಿಗೆ ಸೇರಲು ಅವಕಾಶ ಇದೆ. ಆದರೆ ಪರಿಶಿಷ್ಟ ಪಂಗಡದ ವ್ಯಾಪ್ತಿಗೆ ಕುರುಬ ಸಮುದಾಯವನ್ನು ಸೇರಿಸಲು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿರುವ ಪರಿಶಿಷ್ಟ ಪಂಗಡಗಳು ಪರಾಮರ್ಶೆ ನಡೆಸಬೇಕು. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ನಂತರ ಸಂಸತ್‌ನಲ್ಲಿ ಚರ್ಚೆ ಮಾಡಿ, ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಇದೆಲ್ಲಾ ಅಷ್ಟು ಸುಲಭದ ವಿಚಾರ ಅಲ್ಲ ಎಂದರು.

RELATED ARTICLES

Latest News