Sunday, July 7, 2024
Homeರಾಜಕೀಯಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮುಂದುವರೆಯುತ್ತಾ ಬಿಜೆಪಿ-ಜೆಡಿಎಸ್‌‍ ದೋಸ್ತಿ..?

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮುಂದುವರೆಯುತ್ತಾ ಬಿಜೆಪಿ-ಜೆಡಿಎಸ್‌‍ ದೋಸ್ತಿ..?

ಬೆಂಗಳೂರು, ಜೂ.17– ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌‍ನ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಹೆಚ್ಚಿನ ಸ್ಥಾನ ಗಳಿಸಿರುವ ಬಿಜೆಪಿ-ಜೆಡಿಎಸ್‌‍ ಎನ್‌ಡಿಎ ಮೈತ್ರಿಕೂಟ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಂದುವರೆಸಲು ಉತ್ಸುಕತೆ ತೋರಿದೆ.

ಕಾಂಗ್ರೆಸ್‌‍ನ ನಾಗಲೋಟಕ್ಕೆ ಕಡಿವಾಣ ಹಾಕಬೇಕಾದರೆ ಎನ್‌ಡಿಎ ಮೈತ್ರಿಕೂಟದಿಂದ ಮಾತ್ರ ಸಾಧ್ಯ ಎಂಬುದನ್ನು ಮನಗೊಂಡಿರುವ ಉಭಯ ಪಕ್ಷಗಳ ಮುಖಂಡರು, ಜಿಲ್ಲಾ , ತಾಲ್ಲೂಕು ಪಂಚಾಯ್ತಿ ಹಾಗೂ ಬಿಬಿಎಂಪಿ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲೂ ಮೈತ್ರಿಗೆ ಒಲವು ತೋರಿದ್ದಾರೆ.

ಸದ್ಯದಲ್ಲೇ ಜರುಗಬಹುದಾದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲೂ ಜೆಡಿಎಸ್‌‍-ಬಿಜೆಪಿ ಎನ್‌ಡಿಎ ಮೈತ್ರಿಕೂಟ ಒಮತದ ಕಣಕ್ಕಿಳಿಸುವ ಸಾಧ್ಯತೆ ಇದೆ.

ಜೆಡಿಎಸ್‌‍-ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಮತ ವಿಭಜನೆಯಾಗಿ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಎಂಬಂತೆ ಕಾಂಗ್ರೆಸ್‌‍ ಪರಿಸ್ಥಿತಿಯ ಲಾಭ ಪಡೆಯಬಹುದೆಂಬುದು ಅರಿವಾಗಿರುವುದರಿಂದ ಮೈತ್ರಿಯನ್ನು ಇನ್ನಷ್ಟು ಗಟ್ಟಿಗೊಳಿಸಲು ಕಾರ್ಯತಂತ್ರ ರೂಪಿಸಲಾಗಿದೆ.

ಸ್ಥಳೀಯ ಮಟ್ಟದಲ್ಲಿ ಏನೇ ಸಣ್ಣಪುಟ್ಟ ಸಮಸ್ಯೆಗಳಿದ್ದರೂ ಮೊದಲ ಹಂತದ ನಾಯಕರು ಸರಿಪಡಿಸಿಕೊಂಡು ಭವಿಷ್ಯದಲ್ಲಿ ಕಾಂಗ್ರೆಸ್‌‍ ಎಲ್ಲಿಯೂ ಅಧಿಕಾರಕ್ಕೆ ಬಾರದಂತೆ ತಡೆಯಲು ಮೈತ್ರಿ ಅನಿವಾರ್ಯ ಎಂಬ ಸಂದೇಶ ಕೇಂದ್ರ ನಾಯಕರಿಂದಲೇ ಬಂದಿದೆ.

ಅದರಲ್ಲೂ ವಿಶೇಷವಾಗಿ ಹಳೇ ಮೈಸೂರು ಭಾಗದ ಬಿಜೆಪಿ ಸಂಸದರು ಮುಂಬರುವ ಬಿಬಿಎಂಪಿ ಮತ್ತು ಜಿಲ್ಲಾ ಪಂಚಾಯಿತಿ/ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲೂ ಮೈತ್ರಿ ಮುಂದುವರಿಸಲು ಉತ್ಸುಕರಾಗಿದ್ದಾರೆ.

ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜೆಡಿಎಸ್‌‍ ಮತಗಳನ್ನು ತಮ್ಮ ಪರವಾಗಿ ಪರಿವರ್ತಿಸುವುದರೊಂದಿಗೆ ಮೈತ್ರಿಯು ಲೋಕಸಭಾ ಚುನಾವಣಾ ಫಲಿತಾಂಶಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದ್ದು, ಬಿಜೆಪಿ ಸಂಸದರು ಪ್ರಭಾವಿತರಾಗಿದ್ದಾರೆ. ಬಿಬಿಎಂಪಿ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೆ ಉಭಯ ಪಕ್ಷಗಳಿಗೆ ಅನುಕೂಲವಾಗುತ್ತದೆ ಎಂಬುದು ಬಹುತೇಕ ಅಭಿಪ್ರಾಯವಾಗಿದೆ.

ಉದಾಹರಣೆಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌‍ ಪಕ್ಷದ ಕಾರ್ಯಕರ್ತರು ಬೆಂಬಲ ಸೂಚಿಸಿದ್ದರಿಂದ ಅವರು ಗೆಲುವು ಸಾಧಿಸಿದ್ದು, ಉಭಯ ಪಕ್ಷಗಳ ನಾಯಕರು ಅವರಿಗೆ ಅಭಿನಂದನೆ ಸಲ್ಲಿಸಿದರು. ಭವಿಷ್ಯದಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಬಹುದು ಎಂದು ಹೆಸರು ಹೇಳಲು ಇಚ್ಛಿಸದ ಪ್ರಮುಖರೊಬ್ಬರು ತಿಳಿಸಿದ್ದಾರೆ.

ವೀರಶೈವ ಲಿಂಗಾಯತ ಸಮುದಾಯದವರಾದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಹಾಗೂ ಜಲಶಕ್ತಿ ಸಚಿವ ವಿ ಸೋಮಣ್ಣ ಅವರು ಜೆಡಿಎಸ್‌‍ ವರಿಷ್ಠ ಎಚ್‌ಡಿ ದೇವೇಗೌಡ ಮತ್ತು ಕೇಂದ್ರದ ಭಾರೋ ಕೈಗಾರಿಕೆ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಮುಂಬರುವ ಚುನಾವಣೆಗಳಲ್ಲೂ ಮೈತ್ರಿ ಮುಂದುವರಿಸಲು ಉತ್ಸುಕರಾಗಿದ್ದಾರೆ.

ಹಳೇ ಮೈಸೂರು ಭಾಗದ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ವಿ.ಸೋಮಣ್ಣ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವಿಚಾರದಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಮಾತು ಮುಖ್ಯವಾಗಿತ್ತು. ಹೀಗಾಗಿ, ಬಿಬಿಎಂಪಿ ಮತ್ತು ಜಿಲ್ಲಾ/ತಾಲ್ಲೂಕು ಪಂಚಾಯಿತಿ ಚುನಾವಣೆ ಸೇರಿದಂತೆ ಮುಂದಿನ ಚುನಾವಣೆಗಳಲ್ಲಿ ಈ ಪ್ರದೇಶದಲ್ಲಿ ಜೆಡಿಎಸ್‌‍ ಜೊತೆಗೆ ಮೈತ್ರಿ ಮುಂದುವರಿಯಲಿದೆ ಎಂದು ತಿಳಿದುಬಂದಿದೆ.

ಮೈತ್ರಿ ಮುಂದುವರಿಸಲು ಸಂಸದರು ಒಪ್ಪಿಗೆ ಸೂಚಿಸಿದ್ದರೂ, ಜೆಡಿಎಸ್‌‍ ಜೊತೆಗೆ ಮೈತ್ರಿ ಮುಂದುವರಿಸಿದ್ದೇ ಆದರೆ ಭವಿಷ್ಯದಲ್ಲಿ ಪಕ್ಷದ ಮುಂದಿನ ಯೋಜನೆಗಳಲ್ಲಿ ತಮ ಪ್ರಭಾವ ಕುಗ್ಗುತ್ತದೆ ಎಂದು ಕೆಲವು ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಮೈತ್ರಿಯ ಬಲದಿಂದ ರಾಜ್ಯದಲ್ಲಿ ಯಶಸ್ವಿಯಾದ ನಂತರ ಬಿಜೆಪಿ ರಾಷ್ಟ್ರೀಯ ನಾಯಕರು ಮತ್ತು ಸಂಸದರು ಜೆಡಿಎಸ್‌‍ನ ರಾಜ್ಯ ನಾಯಕತ್ವದ ಜೊತೆಗೆ ಉತ್ತಮವಾದ ಸಂಬಂಧ ಹೊಂದುತ್ತಲೇ ಇರುವುದರಿಂದ ಬಿಜೆಪಿಯೊಳಗಿನ ಇತರ ನಾಯಕರಿಗೆ ಅವಕಾಶಗಳು ಕಡಿಮೆಯಾಗುತ್ತವೆ.

ಇದರಿಂದ ಬಿಜೆಪಿಯೊಳಗಿನ ಒಕ್ಕಲಿಗ ನಾಯಕರು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್‌‍ ಯಡಿಯೂರಪ್ಪ ಸೇರಿದ್ದಾರೆ. ಒಕ್ಕಲಿಗ ಸಮುದಾಯ ಮತ್ತು ಜೆಡಿಎಸ್‌‍ (ಜನತಾ ದಳ (ಜಾತ್ಯತೀತ) ಎರಡಕ್ಕೂ ಭದ್ರಕೋಟೆಯಾಗಿರುವ ಹಳೆ ಮೈಸೂರು ಭಾಗದಲ್ಲಿ ಇದು ವಿಶೇಷವಾಗಿ ನಿಜವಾಗಿದೆ. ಈ ಪ್ರದೇಶದಲ್ಲಿ, ಮೈತ್ರಿಯು ಬಿಜೆಪಿ ನಾಯಕರ ಪ್ರಭಾವ ಮತ್ತು ಅವಕಾಶಗಳನ್ನು ಸೀಮಿತಗೊಳಿಸಬಹುದು ಎಂಬ ಆತಂಕವೂ ಇದೆ.

RELATED ARTICLES

Latest News