ಮೈಸೂರು, ಮೇ 11- ಲೋಕಸಭಾ ಚುನಾವಣೆಯ ಬಳಿಕ ವಿಧಾನಪರಿಷತ್ ಚುನಾವಣೆಯಲ್ಲಿಯೂ ಬಿಜೆಪಿ- ಜೆಡಿಎಸ್ ಮೈತ್ರಿ ಮುಂದುವರೆಯಲಿದೆ. ಯಾವುದೇ ಭಂಗವಾಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯಾಗಿ ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸಲಾಗಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೆಚ್ಚು ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ.
ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಗದ್ದುಗೆ ಏರಲಿದ್ದಾರೆ. ಸೂರ್ಯ- ಚಂದ್ರ ಇರೋದು ಎಷ್ಟು ಸತ್ಯನೋ ಮೋದಿಯವರು ಮೂರನೇ ಭಾರಿಗೆ ಪ್ರಧಾನಿಯಾಗುವುದು ಅಷ್ಟೇ ಸತ್ಯ ಎಂದು ತಿಳಿಸಿದರು. ಮುಂದೆ ಪ್ರಧಾನಿಯಾಗಿ ಏನು ಕೆಲಸ ಕಾರ್ಯ ಮಾಡಬೇಕೆಂಬುದನ್ನು ಈಗಲೇ ರೂಪರೇಷೆಗಳನ್ನು ಮೋದಿಯವರು ಸಿದ್ಧಮಾಡಿಕೊಂಡು ದೇಶದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಲಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಕನಿಷ್ಠ 24ರಿಂದ 25 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಕಾಂಗ್ರೆಸ್‌ನವರು ಏನೇ ಹೇಳಿದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ ಪ್ರಧಾನಿಯಾಗುವ ಅರ್ಹತೆ ಯಾರಿಗಿದೆ ಎಂದು ಪ್ರಶ್ನಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪಾರದರ್ಶಕವಾಗಿ ನಡೆಯಬೇಕೆಂದರೆ ಸಿಬಿಐ ಗೆ ಕೊಡಬೇಕು. ಈಶ್ವರಪ್ಪನವರ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರ ಬಗ್ಗೆ ಮಾತನಾಡಲು ಇಷ್ಟ ಪಡುವುದಿಲ್ಲ. ಶಿವಮೊಗ್ಗದಲ್ಲಿ ರಾಘವೇಂದ್ರ ಅವರ ಎರಡೂವರೆ ಲಕ್ಷ ಲೀಡ್‌ನಿಂದ ಗೆದ್ದೇ ಗೆಲ್ಲುತ್ತಾರೆ.
ವಿಧಾಪರಿಷತ್ ಚುನಾವಣೆ ಮೈತ್ರಿ ಕುರಿತಂತೆ ಜೆಡಿಎಸ್‌ಗೆ ಎರಡು ಸ್ಥಾನ ಬಿಟ್ಟುಕೊಟ್ಟು ನಾವು ನಾಲ್ಕು ಸ್ಥಾನದಲ್ಲಿ ಸ್ಪರ್ಧೆ ಮಾಡುತ್ತೇವೆ. ಎಲ್ಲಿ ಬಿಟ್ಟುಕೊಡಬೇಕು ಎಂಬುದರ ಬಗ್ಗೆ ತೀರ್ಮಾನವಾಗಿಲ್ಲ ಎಂದರು.