Sunday, September 8, 2024
Homeರಾಜಕೀಯ | Politicsವಿಧಾನಪರಿಷತ್‌ ಚುನಾವಣೆ ಕುರಿತು ಜೆ.ಪಿ.ಭವನದಲ್ಲಿ ಬಿಜೆಪಿ-ಜೆಡಿಎಸ್‌‍ ಸಮನ್ವಯ ಸಮಿತಿ ಸಭೆ

ವಿಧಾನಪರಿಷತ್‌ ಚುನಾವಣೆ ಕುರಿತು ಜೆ.ಪಿ.ಭವನದಲ್ಲಿ ಬಿಜೆಪಿ-ಜೆಡಿಎಸ್‌‍ ಸಮನ್ವಯ ಸಮಿತಿ ಸಭೆ

ಬೆಂಗಳೂರು, ಮೇ 26- ವಿಧಾನಪರಿಷತ್‌ನ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್‌‍ ಸಮನ್ವಯ ಸಮಿತಿ ಸಭೆ ಇಂದು ಜೆ.ಪಿ.ಭವನದಲ್ಲಿ ನಡೆಯಿತು.ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ವಿಧಾನಸಭಾ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ನೇತೃತ್ವದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಮಾಜಿ ಸಚಿವ ಗೋಪಾಲಯ್ಯ, ಮುನಿರತ್ನ, ಸಿ.ಪಿ.ಯೋಗೇಶ್ವರ್‌, ವಿಧಾನಪರಿಷತ್‌ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಮಂಜುನಾಥ್‌, ಡಾ.ಶ್ರೀನಿವಾಸ ಮೂರ್ತಿ, ಮುಖಂಡರಾದ ರಮೇಶ್‌ಗೌಡ, ಸಿ.ರಾಜಣ್ಣ, ಆರ್‌.ಪ್ರಕಾಶ್‌, ಡಾ.ನಾರಾಯಣಗೌಡ ಮೊದಲಾದ ಉಭಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

ಬೆಂಗಳೂರು ಪದವೀಧರ ಕ್ಷೇತ್ರದ ಬಿಜೆಪಿ-ಜೆಡಿಎಸ್‌‍ ಅಭ್ಯರ್ಥಿ ಆರ್‌.ದೇವೇಗೌಡ ಅವರೂ ಸಹ ಸಭೆಯಲ್ಲಿ ಹಾಜರಿದ್ದರು. ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುವಂತೆ ಉಭಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಶ್ರಮಿಸಲು ಸಭೆಯಲ್ಲಿ ಸಲಹೆ ಮಾಡಲಾಯಿತು.

ನೊಂದಾಯಿತ ಪದವೀಧರ ಮತದಾರರನ್ನು ಸಂಪರ್ಕಿಸಿ ಮೈತ್ರಿ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಕೋರಲು ನಿರ್ಧರಿಸಲಾಯಿತು. ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿನ ಕಾರ್ಯತಂತ್ರಗಳ ಬಗ್ಗೆ ಮಾರ್ಗದರ್ಶನ ಮಾಡಲಾಯಿತು.

ಸಭೆಯಲ್ಲಿ ಉಭಯ ಪಕ್ಷಗಳ ಮುಖಂಡರು ಮಾತನಾಡಿ, ಕಳೆದ ಬಾರಿಯಂತೆ ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯೇ ಗೆಲ್ಲಬೇಕು. ಸಾಕಷ್ಟು ಪೈಪೋಟಿ ಇರುವುದರಿಂದ ಎಲ್ಲೂ ಕೂಡ ಲೋಪವಾಗದಂತೆ ಮುನ್ನೆಚ್ಚರಿಕೆ ವಹಿಸಿ ಮತದಾರರ ಮನವೊಲಿಸಲು ಕಾರ್ಯಪ್ರವೃತ್ತರಾಗುವಂತೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಇತರೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮೈತ್ರಿ ಅಭ್ಯರ್ಥಿಗಳ ಗೆಲುವಿನ ಕಾರ್ಯತಂತ್ರದ ಬಗ್ಗೆಯೂ ಉಭಯ ಪಕ್ಷಗಳ ನಾಯಕರು ಸಮಾಲೋಚನೆ ನಡೆಸಿದ್ದಾರೆ.

RELATED ARTICLES

Latest News