ಮಂಡ್ಯ,ಜ.30- ಬಿಜೆಪಿ-ಜೆಡಿಎಸ್ ಪಕ್ಷಗಳ ರಾಜಕೀಯ ಅಸ್ತಿತ್ವಕ್ಕಾಗಿ ಜಿಲ್ಲೆಯ ಯುವಕರನ್ನು ಪ್ರಚೋದಿಸಿ ಗಲಭೆ ಸೃಷ್ಟಿಸಲು ಯತ್ನಿಸಿದರೆ ಜನ ಅದನ್ನು ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದನ್ನು ಮುಂದುವರೆಸಿದರೆ ಜಿಲ್ಲಾಡಳಿತ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಚೆಲುವರಾಯಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಡ್ಯದಲ್ಲಿ ಕಾವೇರಿ ನೀರಿನ ವಿವಾದ, ಸಕ್ಕರೆ ಕಾರ್ಖಾನೆ ಅಭಿವೃದ್ಧಿ, ರೈತರ ಸಮಸ್ಯೆ, ಬರ ಸನ್ನಿವೇಶ ಸೇರಿದಂತೆ ಯಾವ ವಿಚಾರದಲ್ಲೂ ಜೆಡಿಎಸ್‍ನ ಕುಮಾರಸ್ವಾಮಿಯಾಗಲೀ, ಬಿಜೆಪಿಯ ನಾಯಕರಾಗಲೀ ಜಿಲ್ಲೆಯಲ್ಲಿ ಹೋರಾಟ ನಡೆಸಲಿಲ್ಲ. ಈಗ ಪ್ರಚೋದಾನಾತ್ಮಕ ಹೇಳಿಕೆಗಳ ಮೂಲಕ ಜಿಲ್ಲೆಯ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಇಲ್ಲಿನ ಯುವಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದು ಮಂಗಳೂರು ಅಥವಾ ಉಡುಪಿ ಅಲ್ಲ, ಮಂಡ್ಯ ಎಂಬುದನ್ನು ಬಿಜೆಪಿ ನಾಯಕರು ನೆನಪಿನಲ್ಲಿಟ್ಟುಕೊಳ್ಳಬೇಕು. ಕುಮಾರಸ್ವಾಮಿಯವರು ಈ ಹಿಂದೆ ಬಿಜೆಪಿ ಮತ್ತು ಆರ್‍ಎಸ್‍ಎಸ್ ಅನ್ನು ಕಾಂಗ್ರೆಸ್‍ಗಿಂತಲೂ ಹೆಚ್ಚಿನದಾಗಿ ಮತ್ತು ಕೆಟ್ಟದಾಗಿ ಟೀಕಿಸಿದ್ದರು. ನರೇಂದ್ರಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿಕೆ ನೀಡಿದರು. ನಿನ್ನೆ ಕುಮಾರಸ್ವಾಮಿಯವರು ಕೇಸರಿ ಶಾಲು ಹಾಕಿಕೊಂಡು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿರುಗೇಟು ನೀಡಿದರು.
ದ್ವೇಷದ ಬಿರುಗಾಳಿಯಲ್ಲಿ ಸತ್ಯದ ಜ್ವಾಲೆ ನಂದಿಸಲು ಬಿಡಬಾರದು : ಕಾಂಗ್ರೆಸ್
ಸರ್ಕಾರಿ ಜಾಗದಲ್ಲಿ ರಾಷ್ಟ್ರ ಮತ್ತು ರಾಜ್ಯ ಧ್ವಜವನ್ನು ಮಾತ್ರ ಹಾರಿಸಬೇಕು ಎಂದು ಗ್ರಾಮ ಪಂಚಾಯಿತಿ ಅನುಮತಿ ನೀಡಿತ್ತು. ಷರತ್ತನ್ನು ಉಲ್ಲಂಘಿಸಿ ಕೇಸರಿ ಧ್ವಜ ಹಾರಿಸಿದ್ದಾರೆ. ನಾವು ಯಾವುದೇ ಧ್ವಜಕ್ಕೆ ವಿರೋಧವಿಲ್ಲ. ಖಾಸಗಿ ಜಾಗದಲ್ಲಿ ಕೇಸರಿ ಧ್ವಜ ಹಾರಿಸುವುದಾದರೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.
30 ವರ್ಷಗಳಿಂದಲೂ ಅಲ್ಲಿ ಕೇಸರಿ ಧ್ವಜ ಹಾರಿಸುತ್ತಿದ್ದೆವು ಎಂದು ಹೇಳುತ್ತಿರುವುದು ಸುಳ್ಳು. ಧ್ವಜ ಸ್ತಂಭ ನಿರ್ಮಾಣವಾಗಿರುವುದೇ ಇತ್ತೀಚೆಗೆ. ಜನರನ್ನು ದಾರಿ ತಪ್ಪಿಸಲು ಹಳೆಯ ಫೋಟೊಗಳನ್ನು ಪ್ರದರ್ಶನ ಮಾಡಿ ಯಾಮಾರಿಸಲಾಗುತ್ತಿದೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ ಭರದಲ್ಲಿ ಸುಳ್ಳುಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಗಣರಾಜ್ಯೋತ್ಸವ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಪ್ರಧಾನಿಯಾದಿಯಾಗಿ ಎಲ್ಲರೂ ಶೂ ಧರಿಸಿಯೇ ಧ್ವಜಾರೋಹಣ ಮಾಡುತ್ತಾರೆ.
ಕೆರಗೋಡಿನಲ್ಲಿ ಜಿಲ್ಲಾಧಿಕಾರಿ ಶೂ ಧರಿಸಿ ಧ್ವಜಾರೋಹಣ ಮಾಡಿ ಅಪಮಾನ ಮಾಡಿದ್ದಾರೆ ಎಂಬ ಅನಗತ್ಯ ವಾದವನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಲೋಕಸಭೆ ಚುನಾವಣೆಯ ಕಾರಣಕ್ಕಾಗಿಜನರ ನೆಮ್ಮದಿಯನ್ನು ಕೆಡಿಸುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಜೆಡಿಎಸ್ ಶೇ. 90 ರಷ್ಟು ಕಾರಣವಾದರೆ ಬಿಜೆಪಿ ಪಾಲು ಶೇ.10 ರಷ್ಟು. ಇದನ್ನು ಕುಮಾರಸ್ವಾಮಿ, ಯಡಿಯೂರಪ್ಪ, ಆರ್.ಅಶೋಕ್, ವಿಜಯೇಂದ್ರ, ಸಿ.ಟಿ.ರವಿ ಸೇರಿದಂತೆ ಎಲ್ಲರೂ ತಕ್ಷಣವೇ ನಿಲ್ಲಿಸಬೇಕು. ಬಹುಷಃ ನಿನ್ನೆಯ ರ್ಯಾಲಿಯ ಬಳಿಕ ಪ್ರಚೋದನೆ ನೀಡುವುದನ್ನು ನಿಲ್ಲಿಸಿದ್ದಾರೆ ಎಂದು ಭಾವಿಸುತ್ತೇವೆ. ಇಲ್ಲವಾದರೆ, ನಾವು ಶಾಂತಿ ಯಾತ್ರೆಯನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಾವು ಮಂಡ್ಯದ ಜನ. ಇಲ್ಲಿನ ನೀರು ಕುಡಿದು, ನೆರಳಿನಲ್ಲಿ ಬದುಕಿದವರು, ನಮಗಿಂತಲೂ ಹೆಚ್ಚಿನದಾಗಿ ಜಿಲ್ಲೆಯ ಜನ ಕುಮಾರಸ್ವಾಮಿಯವರನ್ನು ಪ್ರೀತಿಸಿದರು. ನಮ್ಮನ್ನು ಸೋಲಿಸಿ, ಅವರನ್ನು ಗೆಲ್ಲಿಸಿದರು. ಅದಕ್ಕೆ ನೀಡುತ್ತಿರುವ ಪ್ರತಿಫಲ ಇದೇ ಏನು ಎಂದು ಪ್ರಶ್ನಿಸಿದ ಚೆಲುವರಾಯಸ್ವಾಮಿ, ಇಲ್ಲಿಗೆ ಬಂದು ಹೋಗುವವರು ಸ್ಥಳೀಯರ ನೆಮ್ಮದಿ ಕೆಡಿಸುವ ಪ್ರಯತ್ನ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಅಂತರ್ಧರ್ಮೀಯ ದಂಪತಿಗಳ ಭದ್ರತೆಗೆ ಆಗ್ರಹಿಸಿದ ಅರ್ಜಿ ವಜಾ
ಶಾಸಕರಾದ ರವಿಕುಮಾರ್ ಗಣಿಗ ಮತ್ತು ಪಿ.ಎಂ.ನರೇಂದ್ರಸ್ವಾಮಿ ಬಿಜೆಪಿ ನಾಯಕರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.