ಬೆಂಗಳೂರು,ನ,16- ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಸಂಭಾಷಣೆಯಲ್ಲಿ ಅಧಿಕಾರಿಗಳ ವರ್ಗಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಬಿಜೆಪಿ-ಜೆಡಿಎಸ್ ಪಕ್ಷದ ನಾಯಕರು ಹತಾಶೆ ಹಾಗೂ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್- ಬಿಜೆಪಿಯವರಿಗೆ ಕೆಲಸ ಇಲ್ಲ. ಯತೀಂದ್ರ ಸಿದ್ದರಾಮಯ್ಯ ಕೆಡಿಪಿ ಸದಸ್ಯರಾಗಿದ್ದಾರೆ. ಕ್ಷೇತ್ರದಲ್ಲಿ ಆಶ್ರಯ ಸಮಿತಿಯ ಅಧ್ಯಕ್ಷರು. ಜನಸಂಪರ್ಕ ಸಭೆ ನಡೆಸುವಾಗ ಫೋನಿನಲ್ಲಿ ಮಾತನಾಡಿದ್ದಾರೆ. ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಕೆಲವು ಶಾಲೆಗಳಿಗೆ ಕುರ್ಚಿ, ಬೆಂಚುಗಳನ್ನು ಪೂರೈಸುವ ಪ್ರಯತ್ನ ನಡೆಯುತ್ತಿದೆ. ಆ ಪಟ್ಟಿ ತಯಾರಿಸುವಾಗ ವಿವೇಕಾನಂದ ಎಂಬ ಅಧಿಕಾರಿ ಒಂದೆರಡು ಹೆಸರುಗಳನ್ನು ಬದಲಾವಣೆ ಮಾಡಿದ್ದಾರೆ. ಸ್ಥಳೀಯರು ಈ ಬಗ್ಗೆ ಯತೀಂದ್ರ ಅವರಿಗೆ ದೂರು ನೀಡಿದ್ದಾರೆ. ಚುನಾವಣೆ ವೇಳೆ ಮಾತುಕೊಟ್ಟಂತೆ ಶಾಲೆಗಳನ್ನು ಅಭಿವೃದ್ಧಿಪಡಿಸುವುದು ಸ್ಥಳೀಯ ಜನಪ್ರತಿನಿಧಿಗಳ ಕರ್ತವ್ಯ. ಯತೀಂದ್ರ ಅದರಂತೆ ನಡೆದುಕೊಂಡಿದ್ದಾರೆ ಎಂದರು.
ತಂದೆ ಮುಖ್ಯಮಂತ್ರಿಯಾಗಿದ್ದಾರೆ. ಅವರ ಪರವಾಗಿ ಯತೀಂದ್ರ ವರುಣಾ ಕ್ಷೇತ್ರವನ್ನು ನೋಡಿಕೊಳ್ಳುತ್ತಿದ್ದಾರೆ. ಫೋನ್‍ನಲ್ಲಿ ಮಾತನಾಡುವಾಗ ಎಲ್ಲಿಯೂ ಅಧಿಕಾರಿಗಳ ಹೆಸರು ಹಾಗೂ ಹುದ್ದೆ ಪ್ರಸ್ತಾಪವಾಗಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜೆಡಿಎಸ್-ಬಿಜೆಪಿಯವರು ವರ್ಗಾವಣೆ ದಂಧೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವರ್ಗಾವಣೆ ನಿಂತು ಬಹಳ ದಿನವಾಗಿದೆ. ದಂಧೆ ಎಲ್ಲಿ ನಡೆಯುತ್ತಿದೆ ಎಂಬುದನ್ನು ತೋರಿಸಿ ಎಂದು ಸವಾಲು ಹಾಕಿದ ಡಿ.ಕೆ.ಶಿವಕುಮಾರ್, ಯತೀಂದ್ರ ಮಾಜಿ ಶಾಸಕರಾಗಿದ್ದಾರೆ. ಒಂದು ವೇಳೆ ತಮ್ಮ ಕ್ಷೇತ್ರಕ್ಕೆ ಕೆಲಸ ಮಾಡಲು ನಾಲ್ಕೈದು ಅಧಿಕಾರಿಗಳು ಬೇಕು ಎಂದು ಕೇಳಿದ್ದರೂ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.
ಯತೀಂದ್ರ ವಿಡಿಯೋ ಅಪಪ್ರಚಾರ: ಸಿಎಂ ಅಸಮಾಧಾನ
ಮುಖ್ಯಮಂತ್ರಿ ಯಾದವರಿಗೆ ತಮ್ಮ ಕ್ಷೇತ್ರ ನೋಡಿಕೊಳ್ಳಲು ಕಷ್ಟವಾಗುತ್ತಿದೆ. ಉಪ ಮುಖ್ಯಮಂತ್ರಿಯಾದ ನನಗೂ ನನ್ನ ಕ್ಷೇತ್ರಕ್ಕೆ ನಿಯಮಿತವಾಗಿ ಭೇಟಿ ನೀಡಲು ಆಗುತ್ತಿಲ್ಲ. ಹೀಗಾಗಿ ತಮ್ಮ ಸಹೋದರರೂ ಆಗಿರುವ ಸಂಸದ ಡಿ.ಕೆ.ಸುರೇಶ್ ಅವರು ಕ್ಷೇತ್ರದ ಜನರ ಅಹವಾಲು ಕೇಳುತ್ತಾರೆ. ಮನೆಯ ಬೇಡಿಕೆ ಸೇರಿದಂತೆ ಹಲವಾರು ಮನವಿಗಳನ್ನು ಆಧರಿಸಿ ಫಲಾನುಭವಿಗಳ ಆಯ್ಕೆಯಾಗುತ್ತದೆ. ಆ ಪಟ್ಟಿಯನ್ನು ಪರಿಶೀಲಿಸಿ ತಾವು ಸಹಿ ಹಾಕುವುದು ಸಾಮಾನ್ಯ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 40 ವರ್ಷಗಳ ರಾಜಕೀಯ ಪ್ರಜ್ಞೆ ಇದೆ. ಅವರನ್ನು ಯಾರೂ ದಾರಿ ತಪ್ಪಿಸಲು ಆಗುವುದಿಲ್ಲ. ಬಿಜೆಪಿ ಹಾಗೂ ಜೆಡಿಎಸ್‍ನವರಿಂದ ಸಿದ್ದರಾಮಯ್ಯ ಪಾಠ ಕಲಿಯಬೇಕಾಗಿಲ್ಲ ಎಂದು ಹೇಳಿದರು.
ಜೆಡಿಎಸ್‍ನ ಶಾಸಕರು ನಿನ್ನೆ ರಾತ್ರಿ ತಮ್ಮನ್ನು ಭೇಟಿಯಾಗಿಲ್ಲ. ಕ್ಷೇತ್ರದ ಅಭಿವೃದ್ದಿ ಕೆಲಸಗಳಿದ್ದರೆ ಬರುತ್ತಾರೆ. ನಾವು ತುರ್ತಾಗಿ ಕೆಲಸ ಮಾಡಿಕೊಡುತ್ತೇವೆ. ಅದರ ಹೊರತಾಗಿ 13 ಮಂದಿ ಜೆಡಿಎಸ್ ಶಾಸಕರು ಕಾಂಗ್ರೆಸ್‍ಗೆ ಬರುತ್ತಾರೆ ಎಂಬುದೆಲ್ಲಾ ವದಂತಿ. ಸದ್ಯಕ್ಕೆ ಯಾವ ಶಾಸಕರೂ ಬರುವುದಿಲ್ಲ. ಯಾರೂ ತಮ್ಮನ್ನು ಭೇಟಿ ಮಾಡಿಲ್ಲ ಎಂದು ಪುನರುಚ್ಚರಿಸಿದರು.
ಜೆಡಿಎಸ್‍ನ ಮಾಜಿ ಮುಖ್ಯಮಂತ್ರಿಕುಮಾರಸ್ವಾಮಿಯವರು ಹತಾಷೆಯಿಂದ ಆರೋಪಗಳನ್ನು ಮಾಡುತ್ತಿದ್ದಾರೆ. ತಮ್ಮ ವಿರುದ್ಧ ಟೀಕೆ ಮಾಡುವಾಗ ಜಮೀನುಗಳಿಗೆ ಬೇಲಿ ಹಾಕಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಎಲ್ಲಿ, ಯಾವ ಜಮೀನು, ಯಾವ ಬೇಲಿ, ಯಾವ ಬಂಡೆ, ಯಾವ ಕಲ್ಲು ಎಂಬುದನ್ನು ತೋರಿಸಲಿ ಎಂದು ತಿರುಗೇಟು ನೀಡಿದರು.
ಅಕ್ರಮ ವಿದ್ಯುತ್ ಸಂಪರ್ಕಕ್ಕೆ ಸಂಬಂಧ ಪಟ್ಟಂತೆ ಕುಮಾರಸ್ವಾಮಿಯವರೇ ತಪ್ಪು ಮಾಡಿದ್ದಾರೆ ಎಂದು ನಾನು ಹೇಳುವುದಿಲ್ಲ. ಯಾರೋ ಗುತ್ತಿಗೆದಾರನಿಗೆ ಮನೆ ಅಲಂಕಾರ ಮಾಡಲು ಹೇಳಿರಬಹುದು. ಆತ ತಪ್ಪು ಮಾಡಿರುತ್ತಾನೆ. ಕಾರು ನನ್ನ ಹೆಸರಿನಲ್ಲಿ ನೋಂದಣಿಯಾಗಿದೆ. ಚಾಲಕ ಅಪಘಾತ ಮಾಡಿದರೆ ಡಿ.ಕೆ.ಶಿವಕುಮಾರ್ ಕಾರು ಅಪಘಾತವಾಗಿದೆ ಎಂದೇ ಹೇಳುತ್ತಾರೆ. ಚಾಲಕ ಅಪಘಾತ ಮಾಡಿದ್ದಾನೆ ಎಂದು ಹೇಳುವುದಿಲ್ಲ. 25 ವರ್ಷಗಳ ಹಿಂದೆ ಇಂಥದ್ದೇ ಪ್ರಕರಣವೊಂದು ತಮ್ಮ ಜೀವನದಲ್ಲಿ ನಡೆದಿತ್ತು ಎಂದು ಉದಾಹರಣೆ ಕೊಟ್ಟರು.
ಡಿ.4 ರಿಂದ ಬೆಳಗಾವಿಯಲ್ಲಿ ಅಧಿವೇಶನ, ಗಲಾಟೆ ‘ಗ್ಯಾರಂಟಿ’
ಕುಮಾರಸ್ವಾಮಿಯವರು ಪ್ರತಿಬಾರಿಯೂ ಲೂಟಿ.. ಲೂಟಿ.. ಎಂದು ಹೇಳುತ್ತಾರೆ. ಅವರ ಅನುಭವ ಆಚಾರ-ವಿಚಾರಗಳನ್ನು ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು. ಬಿಜೆಪಿಗೆ ಈಗಷ್ಟೇ ಹೊಸ ಅಧ್ಯಕ್ಷರ ನೇಮಕವಾಗಿದೆ. ಅಸಮಾಧಾನ ಹೊಂದಿರುವವರ ಕೈ-ಕಾಲು ಕಟ್ಟಿ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮವಾಗಿ ಪಕ್ಷ ಸಂಘಟನೆ ಮಾಡಬೇಕು ಎಂದು ಪ್ರಶ್ನೆಯೊಂದಕ್ಕೆ ಡಿ.ಕೆ.ಶಿವಕುಮಾರ್ ಉತ್ತರಿಸಿದರು.