Friday, September 20, 2024
Homeಬೆಂಗಳೂರುಬೆಂಗಳೂರು ವಿಭಜನೆಗೆ ಬಿಜೆಪಿ-ಜೆಡಿಎಸ್‌ ವಿರೋಧ, ಈ ನಗರ ಕನ್ನಡಿಗರಿಗಾಗಿಯೇ ಇರಬೇಕು

ಬೆಂಗಳೂರು ವಿಭಜನೆಗೆ ಬಿಜೆಪಿ-ಜೆಡಿಎಸ್‌ ವಿರೋಧ, ಈ ನಗರ ಕನ್ನಡಿಗರಿಗಾಗಿಯೇ ಇರಬೇಕು

BJP-JDS oppose splitting BBMP

ಬೆಂಗಳೂರು. ಸೆ.9 : ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ವಿಭಜನೆಯಾಗಬಾರದು ಹಾಗೂ ಈ ನಗರ ಕನ್ನಡಿಗರಿಗಾಗಿಯೇ ಇರಬೇಕು ಎಂಬ ಕಾರಣಕ್ಕೆ ರಾಜ್ಯ ಸರ್ಕಾರದ ಬೆಂಗಳೂರು ವಿಭಜನೆ ತೀರ್ಮಾನವನ್ನು ವಿರೋಧಿಸಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.ರಾಜ್ಯ ಸರ್ಕಾರದಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸ್ಥಾಪನೆಗೆ ಸಂಬಂಧಿಸಿದಂತೆ ಸಾಧಕ-ಬಾಧಕ ಚರ್ಚಿಸಲು ಆಯೋಜಿಸಿದ್ದ ಪ್ರಾತ್ಯಕ್ಷಿಕೆಯಲ್ಲಿ ಅವರು ಪಾಲ್ಗೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಬ್ಭಾಗವಾಗದೆ ಹೀಗೆಯೇ ಉಳಿಯಬೇಕು. ಇಲ್ಲಿ ಕನ್ನಡಿಗರೇ ಸಾರ್ವಭೌಮರಾಗಿದ್ದು, ಇದು ಕನ್ನಡಿಗರಿಗಾಗಿಯೇ ಉಳಿಯಬೇಕು. ಇಲ್ಲಿ ಕನ್ನಡದವರೇ ಮೇಯರ್‌ ಆಗಬೇಕು. ಇದಕ್ಕಾಗಿ ಬೆಂಗಳೂರು ವಿಭಜನೆಯನ್ನು ಬಿಜೆಪಿ ಮತ್ತು ಜೆಡಿಎಸ್‌ ವಿರೋಧಿಸುತ್ತವೆ ಎಂದು ತಿಳಿಸಿದರು.

ಬಿಬಿಎಂಪಿ ಅಡಿಯಲ್ಲಿ ಸ್ಲಂ ಬೋರ್ಡ್‌, ಜಲಮಂಡಳಿ, ಬಿಎಂಟಿಸಿ ಬರುವುದಿಲ್ಲ. ಇವೆಲ್ಲವೂ ಒಂದೇ ಕಡೆ ಬಂದು, ಬಿಬಿಎಂಪಿಯೇ ನಿರ್ವಹಣೆ ಮಾಡಿದರೆ ಪ್ರತ್ಯೇಕವಾಗಿ ಐಎಎಸ್‌ ಅಧಿಕಾರಿಗಳನ್ನು ನೇಮಕ ಮಾಡುವುದು ತಪ್ಪುತ್ತದೆ. ಸರ್ಕಾರಕ್ಕೆ ಖರ್ಚು ಕಡಿಮೆಯಾಗುವುದರ ಜೊತೆಗೆ, ಜನರು ಒಂದೇ ಕಡೆ ಸೇವೆಗಳನ್ನು ಪಡೆಯಬಹುದು. ಬೇರೆ ನಗರಗಳಲ್ಲೂ ಇದೇ ರೀತಿಯಿದ್ದು, ಬೆಂಗಳೂರಿಗೂ ಇಂತಹ ವ್ಯವಸ್ಥೆ ತರಬೇಕಿದೆ ಎಂದರು.

ರಾಜ್ಯ ಸರ್ಕಾರದ ಈ ವಿಧೇಯಕದಿಂದ ಕೆಳಹಂತದ ಪುರಪಿತೃಗಳಿರಯವ ಸಂಸ್ಥೆಯ ಅಧಿಕಾರ ಕುಂಠಿತವಾಗುವ ಅಪಾಯವಿದೆ. ಆದ್ದರಿಂದ ಇದರಲ್ಲಿ ಬದಲಾವಣೆ ತರಬೇಕಿದೆ. ಈ ತಿದ್ದುಪಡಿ ಮಾಡಲು ಹಾಗೂ ವಾರ್ಡ್‌ ಹೆಚ್ಚಳಕ್ಕೆ ವಿಳಂಬವಾದರೆ ಹಿಂದಿನಂತೆ 198 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕು. ಈ ಕುರಿತು ರಾಜ್ಯ ಸರ್ಕಾರಕ್ಕೆ ತಿಳಿಸಲಾಗುವುದು. ಮಂಡನೆಯಾಗಿರುವ ವಿಧೇಯಕದಿಂದ ಎಷ್ಟು ಸಮಸ್ಯೆಯಾಗಲಿದೆ ಎಂಬುದನ್ನು ಜನರಿಗೂ ತಿಳಿಸಲಾಗುವುದು ಎಂದರು.

ಇಡೀ ದೇಶಕ್ಕೆ ಒಬ್ಬ ಪ್ರಧಾನಿ, ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿ ಇರುವಂತೆ ಬೆಂಗಳೂರು ನಗರಕ್ಕೆ ಒಬ್ಬ ಮೇಯರ್ ಇರಲಿ. ಅವರ ಅಧಿಕಾರಾವಧಿ ಎರಡೂವರೆ ವರ್ಷ ಅಥವಾ ಐದು ವರ್ಷ ನಿಗದಿಪಡಿಸಿದರೂ ಅಡ್ಡಿಯಿಲ್ಲ ಎಂದರು.ಕಾಂಗ್ರೆಸ್ ಸರ್ಕಾರ ತಜ್ಞರು ನೀಡಿರುವ ವರದಿಯ ಶೇಕಡಾ ಇಒ್ಪತ್ತರಿಂದ ಮುವತ್ತರಷ್ಟನ್ನು ಮಾತ್ರ ವಿಧೇಯಕದಲ್ಲಿ ಅಳವಡಿಸಿಕೊಂಡಿದೆ ಎಂಬುದನ್ನು ವಿ.ರವಿಚಂದ್ರ ಅವರು ಸ್ಪಷ್ಟಪಡಿಸಿದ್ದಾರೆ. ಜತೆಗೆ ಯಾರಾದರೂ ಕೊಟ್೯ನಲ್ಲಿ ಪ್ರಶ್ನೆ ಮಾಡಿದರೆ ಬಿದ್ದು ಹೋಗುತ್ತದೆ ಎಂದೂ ತಿಳಿಸಿದ್ದಾರೆ.

ಈ ಹಿನ್ನೆಲೆ ಯಲ್ಲಿ ಅದರಲ್ಲಿರುವ ಲೋಪಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗುವುದು. ಒಂದು ವೇಳೆ ಒಪ್ಪದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಎಲ್ಲಾ ವಿಷಯಗಳ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. ಪ್ರಮುಖರ ಸಮಿತಿ ರಚಿಸಿ ವಿವರವಾಗಿ ವಿಧೇಯಕದ ಬಗ್ಗೆ ಅಧ್ಯಯನ ನಡೆಸಿ ಬದಲಾವಣೆ ಕುರಿತು ವರದಿ ನೀಡಲಾಗುವುದು ಎಂದು ವಿವರಿಸಿದರು.

ಸಿಎಂ ಬದಲಾವಣೆ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯನವರು ಸಂಗೊಳ್ಳಿ ರಾಯಣ್ಣನವರ ಉದಾಹರಣೆ ಮೂಲಕ ಬೆನ್ನಿಗೆ ಚೂರಿ ಹಾಕಲಾಗುತ್ತಿದೆ ಎಂದು ಎರಡು ಸಲ ಹೇಳಿಕೆ ನೀಡಿದ್ದಾರೆ. ಅವರ ಪಕ್ಷದವರೇ ಅವರಿಗೆ ಮೋಸ ಮಾಡುತ್ತಿದ್ದಾರೆ. ಮುಡಾ ಪ್ರಕರಣದಲ್ಲಿ ನಾವ್ಯಾರೂ ಆರ್‌ಟಿಐ ಅರ್ಜಿ ಹಾಕಿಲ್ಲ, ಅವರ ಪಕ್ಷದವರೇ ಎಲ್ಲ ದಾಖಲೆಗಳನ್ನು ಹೊರಗೆ ತಂದಿದ್ದಾರೆ. ಮ್ಯೂಸಿಕಲ್‌ ಚೇರ್‌ ಮಾಡುತ್ತಿರುವವರು ಪಟಾಕಿ ಇಡುತ್ತಿದ್ದಾರೆ. ಅವರು ಪಟಾಕಿ ಒಡೆದಾಗ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗುತ್ತದೆ ಎಂದರು.

ರಾಜ್ಯದಲ್ಲಿ 60 ಲಕ್ಷ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಲು ತಯಾರಿ ನಡೆದಿದೆ. ಇದರಿಂದ ಸರ್ಕಾರಕ್ಕೆ ಹಣ ಉಳಿತಾಯವಾಗಲಿದೆ. ಈಗಾಗಲೇ ಬಿಪಿಎಲ್‌ ಕಾರ್ಡುದಾರರಿಗೆ ಅಧಿಕಾರಿಗಳು ಕಿರುಕುಳ ನೀಡಲಾರಂಭಿಸಿದ್ದಾರೆ. ಇದಕ್ಕಾಗಿ ಖಾಸಗಿ ಏಜೆನ್ಸಿ ನೇಮಕ ಮಾಡಿ, ಆ ಮೂಲಕ ಕಾರ್ಡ್‌ ರದ್ದುಪಡಿಸಿ ಗ್ಯಾರಂಟಿಗೆ ಹಣ ಉಳಿಸಲಾಗುತ್ತಿದೆ. ಜನರಿಗೆ ಗೊತ್ತಾಗದಂತೆ ತೆರಿಗೆ ವಿಧಿಸುವುದು ಹೇಗೆಂದು ತಂತ್ರ ಮಾಡಲು ಸಮಿತಿ ನೇಮಿಸಲಾಗಿದೆ. ಇದರ ವಿರುದ್ಧ ಬಿಜೆಪಿ ಹೋರಾಡಲಿದೆ ಎಂದರು.

ಈಗಾಗಲೇ ಹಿಮಾಚಲ ಪ್ರದೇಶ ಆರ್ಥಿಕ ದುಸ್ಥಿತಿಗೆ ತಲುಪಿದೆ. ಕರ್ನಾಟಕ ಪಾಪರ್‌ ಆದರೂ ಪರವಾಗಿಲ್ಲ, ನಮ್ಮ ಬೇಳೆ ಬೇಯಬೇಕು ಎಂದು ಕಾಂಗ್ರೆಸ್‌ ಯೋಚಿಸಿದೆ. ಅಧಿಕಾರಿಗಳು ಒಂದೋ ಆತ್ಮಹತ್ಯೆ ಮಾಡಿಕೊಳ್ಳಬೇಕು, ಇಲ್ಲವಾದರೆ ಸ್ವಯಂ ನಿವೃತ್ತಿ ಪಡೆಯಬೇಕು ಎಂಬಂತಹ ಸ್ಥಿತಿ ಇದೆ. ಇಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಬದುಕುವ ಗ್ಯಾರಂಟಿ ಇಲ್ಲ ಎಂದು ದೂರಿದರು.

ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ರವಿಚಂದ್ರ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿಧೇಯಕಕ್ಕೆ ಸಂಬಂಧಿಸಿದಂತೆ ತಮ್ಮ ಸಮಿತಿ ನೀಡಿದ್ದ ವರದಿಗೂ ರಾಜ್ಯ ಸರ್ಕಾರ ಮಂಡಿಸಿರುವ ವಿಧೇಯಕಕ್ಕೂ ಸಾಕಷ್ಟು ವೆತ್ಯಾಸವಿದೆ. ಶೇ.20 ರಷ್ಟು ಶಿಫಾರಸು ಗಳನ್ನು ಮಾತ್ರ ಪರಿಗಣಿಸಲಾಗಿದೆ ಎಂದರು. ಇದಕ್ಕೆ ಸಂಬಂಧ ಪಟ್ಟ ವಿವರಣೆ ನೀಡಿದರು. ಬಿಜೆಪಿ, ಜೆಡಿಎಸ್ ನ ಶಾಸಕರು, ಮಾಜಿ ಕಾರ್ಪೊರೇಟರ್ ಗಳು, ಪಕ್ಷದ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

RELATED ARTICLES

Latest News